ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ: ಸಿಎಂ ಸಿದ್ದರಾಮಯ್ಯ

KannadaprabhaNewsNetwork | Published : Mar 11, 2024 1:15 AM

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರು 4.67 ಕೋಟಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ. ಇಡೀ ರಾಜ್ಯದಲ್ಲಿ ಮಹಿಳೆಯರು 170 ಕೋಟಿ ಉಚಿತವಾಗಿ ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ. ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದು ಇಂತಹ ಯೋಜನೆ ಅನುಷ್ಟಾನ ಮಾಡಿರುವುದು ಇತಿಹಾಸದಲ್ಲೇ ಮೊದಲು.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರ ಜಿಲ್ಲೆಯಾಗಿರುವ ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಲು ಆಯವ್ಯಯದಲ್ಲಿ ಈಗಾಗಲೇ ಘೋಷಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾಡಲು ಕ್ರಮ ವಹಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಭಾನುವಾರ ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಗ್ಯಾರಂಟಿ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ತೀರ್ಮಾನಿಸಲಾಯಿತು. ಜೂನ್ 11 ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಯಿತು. ರಾಜ್ಯದಲ್ಲಿರುವ 3.5 ಕೋಟಿ ಮಹಿಳೆಯರು ಯಾವುದೇ ಹಣ ಪಾವತಿಸದೆ ಉಚಿತವಾಗಿ ಸಾರಿಗೆ ಬಸ್‌ನಲ್ಲಿ ಸಂಚರಿಸುತ್ತಿದ್ದಾರೆ. ಪ್ರತಿ ದಿನ 50 ರಿಂದ 60 ಲಕ್ಷ ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಈ ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರು 4.67 ಕೋಟಿ ಉಚಿತ ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ. ಇಡೀ ರಾಜ್ಯದಲ್ಲಿ ಮಹಿಳೆಯರು 170 ಕೋಟಿ ಉಚಿತವಾಗಿ ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ. ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದು ಇಂತಹ ಯೋಜನೆಗಳನ್ನು ಅನುಷ್ಟಾನ ಮಾಡಿರುವುದು ಇತಿಹಾಸದಲ್ಲೇ ಮೊದಲು ಎಂದರು.

ಅನ್ನ ಭಾಗ್ಯ ಯೋಜನೆಯಡಿ 5 ಕೆ.ಜಿ ಅಕ್ಕಿ ಬದಲಾಗಿ 170 ರು. ನೀಡಲಾಗುತ್ತಿದ್ದು, ಮಂಡ್ಯ ಜಿಲ್ಲೆಯಲ್ಲಿ ಇಲ್ಲಿಯವರೆಗೆ 4.36,510 ಫಲಾನುಭವಿಗಳಿಗೆ 166 ಕೋಟಿ ರು.ಗಳನ್ನು ಡಿ.ಬಿ.ಟಿ ಮೂಲಕ ವರ್ಗಾವಣೆ ಮಾಡಲಾಗಿದೆ. 100 ಕ್ಕೆ 90 ರಷ್ಟು ಜನ 200 ಯೂನಿಟ್ ಕ್ಕಿಂತ ಕಡಿಮೆ ಬಳಸಿ ಗೃಹ ಜ್ಯೋತಿ ವ್ಯಾಪ್ತಿಗೆ ಬರುತ್ತಾರೆ. 4,66,303 ಗ್ರಾಹಕರು ನೊಂದಣಿ ಮಾಡಿಕೊಂಡಿದ್ದು, 104 ಕೋಟಿ ರೂ ವೆಚ್ಚದ ವಿದ್ಯುತ್ ನ್ನು ಉಚಿತವಾಗಿ ನೀಡಲಾಗಿದೆ ಎಂದರು.

ಗೃಹಲಕ್ಷ್ಮಿ ಯೋಜನೆಯಡಿ ಮಂಡ್ಯ ಜಿಲ್ಲೆಯಲ್ಲಿ 4,43,974 ಮಹಿಳೆಯರು ಹೆಸರು ನೊಂದಾಯಿಸಿಕೊಂಡಿದ್ದು, ರೂ 2000 ಪ್ರತಿ ಮಾಹೆ ನೀಡಲಾಗುತ್ತಿದ್ದು, ಇದಕ್ಕಾಗಿ 501 ಕೋಟಿ ರು.ನೀಡಲಾಗಿದೆ. ಬಡವರು, ದಲಿತರು, ಹಿಂದುಳಿದವರು, ರೈತರು, ಕಾರ್ಮಿಕರು ಮುಂತಾದವರಿಗೆ ಒಂದಲ್ಲಾ ಒಂದು ರೀತಿ ಸರ್ಕಾರದ ಗ್ಯಾರಂಟಿ ಯೋಜನೆಯ ಮೂಲಕ ಸಹಾಯ ಮಾಡುತ್ತಿದೆ. ಯಾವುದೇ ಜಾತಿ, ಧರ್ಮದ ಬೇದವಿಲ್ಲದೇ ಗ್ಯಾರಂಟಿ ಯೋಜನೆಗಳನ್ನು 4 ಕೋಟಿ 60 ಲಕ್ಷ ನೀಡಲಾಗಿದೆ. ಈ ವರ್ಷ ಗ್ಯಾರಂಟಿ ಯೋಜನೆಗಳ ಮೂಲಕ 36000 ಕೋಟಿ ರು. ಹಣವನ್ನು ನೀಡಲಾಗಿದೆ. ಮುಂದಿನ ಆರ್ಥಿಕ ವರ್ಷದಲ್ಲಿ 56,000 ಕೋಟಿ ರು. ಹಣವನ್ನು ಮೀಸಲಿಡಲಾಗಿದೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, ಸರ್ಕಾರದ 5 ಗ್ಯಾರಂಟಿ ಯೋಜನೆಗಳು ಬಡವರ ಪರವಾಗಿದ್ದು, ಪ್ರತಿ ಕುಟುಂಬಕ್ಕೆ 5 ರಿಂದ 6 ಸಾವಿರ ರು.ಹಣ ತಲುಪುತ್ತಿದೆ. ಕರ್ನಾಟಕದ ಜನರು ಗ್ಯಾರಂಟಿ ಯೋಜನೆಗಳಿಂದ ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದರು.

ಕೆರೆ ತುಂಬಿಸಲು, ನಾಲೆ ಅಭಿವೃದ್ಧಿಗೆ ಸರ್ಕಾರದಿಂದ ಈಗಾಗಲೇ ರು.2000 ಕೋಟಿಗೂ ಹೆಚ್ಚು ಹಣವನ್ನು ಮಂಜೂರು ಮಾಡಲಾಗಿದೆ. ರೈತರ ಬದುಕಿಗೋಸ್ಕರ, ನೀರಿಗಾಗಿ ಮೇಕೆದಾಟು ಯೋಜನೆ ಅನುಷ್ಠಾನ ಮಾಡಿದರೆ ಕಷ್ಟಕಾಲದಲ್ಲಿ ಸಹಕಾರಿ ಆಗುತ್ತದೆ ಆದಷ್ಟು ಬೇಗ ಅನುಷ್ಠಾನ ಮಾಡುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ತಮಿಳು ಕಾಲೋನಿಯ 167 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷರಾದ ಎ. ಬಿ. ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಶಾಸಕರಾದ ಮರಿತಿಬ್ಬೇಗೌಡ, ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್, ಮದ್ದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಂ. ಉದಯ್, ಮೈಶುಗರ್ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಗಂಗಾಧರ್, ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ಜಿಲ್ಲಾಧಿಕಾರಿ ಡಾ. ಕುಮಾರ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವಿರ್ ಆಸೀಫ್, ಜಿಲ್ಲಾ ಪೊಲೀಸ್ ಅಧೀಕ್ಷಕರು ಎನ್. ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮಂಡ್ಯ ಲೋಕಸಭೆ ಅಭ್ಯರ್ಥಿ ವೆಂಕಟರಮಣೇಗೌಡ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Share this article