ಮರಿಯಮ್ಮನಹಳ್ಳಿ: ಅನೇಕ ವರ್ಷಗಳ ಇತಿಹಾಸ ಹೊಂದಿರುವ ಶ್ರೀಲಕ್ಷ್ಮೀನಾರಾಯಣಸ್ವಾಮಿ, ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಅಂದಾಜು ₹60 ಲಕ್ಷ ವೆಚ್ಚದಲ್ಲಿ ಛಾವಣಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಏ.17ರಂದು ಜೋಡು ರಥೋತ್ಸವ ನಡೆಯಲಿದೆ. ರಥೋತ್ಸವ ಮುನ್ನವೇ ಯುಗಾದಿ ವೇಳೆಗೆ ಈ ಕಾಮಗಾರಿ ಮುಗಿದು ಜನರಿಗೆ ನೆರಳು ಕಲ್ಪಿಸಲಾಗುವುದು ಎಂದು ಶಾಸಕ ನೇಮಿರಾಜ್ ನಾಯ್ಕ್ ಹೇಳಿದರು.
ಇಲ್ಲಿನ ಲಕ್ಷ್ಮೀನಾರಾಯಣಸ್ವಾಮಿ, ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಅಂದಾಜು ₹60 ಲಕ್ಷ ವೆಚ್ಚದಲ್ಲಿ ಛಾವಣಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ನಂತರ ಸಭೆಯಲ್ಲಿ ಅವರು ಮಾತನಾಡಿದರು.ಲಕ್ಷ್ಮೀನಾರಾಯಣಸ್ವಾಮಿ, ಆಂಜನೇಯಸ್ವಾಮಿ ದೇವಸ್ಥಾನವು ಅತ್ಯಂತ ಮಹತ್ವವಾದ ಇತಿಹಾಸ ಹೊಂದಿದೆ. ನಾರಾಯದೇವರ ಕೆರೆಯಲ್ಲಿ ಅತ್ಯಂತ ವೈಭವದಿಂದ ಮೆರೆದ ಈ ದೇವಸ್ಥಾನವು ಈಗ ಮತ್ತೆ ಮರಿಯಮ್ಮನಹಳ್ಳಿಯಲ್ಲಿ ಅತ್ಯಂತ ವೈಭವದೊಂದಿಗೆ ಕಂಗೊಳಿಸಲಿದೆ ಎಂದರು.
₹77 ಕೋಟಿ ವೆಚ್ಚದ ಕುಡಿವ ನೀರಿನ ಯೋಜನೆ, ಕೆಎಂಆರ್‌ಸಿ ಯೋಜನೆಯಲ್ಲಿ ₹150 ಕೋಟಿ ತಂದು ರಸ್ತೆ, ಚರಂಡಿ, ಒಳ ಚರಂಡಿ ಸೇರಿದಂತೆ ಇತರೆ ಕಾಮಗಾರಿಗಳನ್ನು ನಡೆಸಲಾಗುವುದು. ಇನ್ನು ₹100 ಕೋಟಿ ಮರಿಯಮ್ಮನಹಳ್ಳಿಗೆ ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. ₹27 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣ ಸೇರಿದಂತೆ ಒಟ್ಟಾರೆಯಾಗಿ ಮರಿಯಮ್ಮನಹಳ್ಳಿಗೆ ಅಂದಾಜು ₹200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕೆಲಸ ನಡೆಯಲಿವೆ ಎಂದು ಅವರು ಹೇಳಿದರು.ಮರಿಯಮ್ಮನಹಳ್ಳಿಯ ಪಪಂನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಿದಾಗ ಡಣಾಯಕನಕೆರೆಯ ಕೆಲ ಗ್ರಾಮಗಳನ್ನು ಮರಿಯಮ್ಮನಹಳ್ಳಿಯ ಇಂದಿರಾ ನಗರ ಸೇರಿದಂತೆ ಇತರೆ ಗ್ರಾಮಗಳನ್ನು ಸೇರಿಸಿಕೊಂಡು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದರು.ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಎಂ.ವಿಶ್ವನಾಥ ಶೆಟ್ಟಿ, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಸದಸ್ಯರಾದ ಚಿದ್ರಿ ಸತೀಶ್, ಗೋವಿಂದರ ಪರುಶುರಾಮ, ಎಂ.ವೆಂಕಟೇಶ್, ತಳವಾರ್ ದೊಡ್ಡ ರಾಮಣ್ಣ, ವಿ.ಎಸ್. ನಾಗೇಶ್, ಕೆ.ರಘುವೀರ್, ಸಜ್ಜದ್ ವಿಶ್ವನಾಥ, ಈ.ಎರ್ರಿಸ್ವಾಮಿ, ಸಣ್ಣದುರುಗಪ್ಪ, ದೇವಸ್ಥಾನದ ಕಾರ್ಯದರ್ಶಿ ಹಾಗೂ ಉಪತಹೀಲ್ದಾರ್ ಎಚ್.ನಾಗರಾಜ, ಸ್ಥಳೀಯ ಮುಖಂಡರಾದ ತಳವಾರ್ ಹುಲುಗಪ್ಪ, ಎಲೆಗಾರ್ ಮಂಜುನಾಥ, ಕಿರಣ್ ಉಪಸ್ಥಿತರಿದ್ದರು.