- ಶಾರದಾ ಸ್ಕೂಲ್ ಆಫ್ ಲಾ ಕಾಲೇಜ್‌ನಲ್ಲಿ ವಿಶ್ವ ಗ್ರಾಹಕರ ದಿನಾಚರಣೆ
---- ಅನ್ಯಾಯವಾದಾಗ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ
- ಮೋಸವನ್ನು ನಿರ್ಲಕ್ಷಿಸಿದರೆ ವರ್ತಕರನ್ನು ಪ್ರಚೋಧಿಸಿದಂತೆ- ಪ್ರತಿಯೊಬ್ಬ ಗ್ರಾಹಕರು ಅರಿವು ಪಡೆದು ಎಚ್ಚರ ವಹಿಸಿ
- ಆನ್‌ಲೈನ್‌ನಲ್ಲಿ ವಸ್ತು ಖರೀದಿಸುವಾಗ ಎಚ್ಚರ ಅಗತ್ಯ- ಲೋಪ, ಅನ್ಯಾಯವಾದಲ್ಲಿ ಗ್ರಾಹಕರ ವೇದಿಕೆಯ ಮೊರೆ ಹೋಗಿಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಗ್ರಾಹಕರು, ವಸ್ತುವಿನ ಗುಣಮಟ್ಟ, ಸುರಕ್ಷತೆ, ವಸ್ತುವಿನ ಉತ್ಪಾದನೆ ಮತ್ತು ಅದರ ಕೊನೆ ಅವಧಿಯನ್ನು ಪರಿಶೀಲಿಸಿ ಖರೀದಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ಆರ್. ಚನ್ನಕೇಶವ ತಿಳಿಸಿದರು. ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಹಾಗೂ ಶ್ರೀ ಶಾರದಾ ಸ್ಕೂಲ್ ಆಫ್ ಲಾ ಕಾಲೇಜ್ ನಿಂದ ಶುಕ್ರವಾರ ನಗರದ ಬೈಪಾಸ್ ರಸ್ತೆಯ ಶ್ರೀ ಶಾರದಾ ಸ್ಕೂಲ್ ಆಫ್ ಲಾ ಕಾಲೇಜ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ದೇಶದ ಪ್ರಥಮ ಪ್ರಜೆಯಿಂದ ಸಾಮಾನ್ಯ ಪ್ರಜೆವರೆಗೂ ಎಲ್ಲರು ಗ್ರಾಹಕರಾಗಿರುತ್ತಾರೆ. ಗ್ರಾಹಕರಾದವರು ಖರೀದಿಯಲ್ಲಿ ಮತ್ತು ವ್ಯವಹಾರಗಳಲ್ಲಿ ತಮಗಾಗುವ ತೊಂದರೆಗಳನ್ನು ಗ್ರಾಹಕರ ಆಯೋಗದ ಗಮನಕ್ಕೆ ತಂದು ಪರಿಹಾರ ಪಡೆದು ಕೊಳ್ಳಬಹುದು ಎಂದ ಅವರು, ಅನ್ಯಾಯವಾದಾಗ ಅದನ್ನು ಕಡೆಗಣಿಸದೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿ ನ್ಯಾಯ ಪಡೆದುಕೊಳ್ಳಲು ಮುಂದಾಗಬೇಕು ಎಂದರು.ತಮಗಾಗುವ ಮೋಸವನ್ನು ನಿರ್ಲಕ್ಷ್ಯದಿಂದ ಕಂಡರೆ ವರ್ತಕರನ್ನು ಪ್ರಚೋಧಿಸಿದಂತಾಗುತ್ತದೆ. ವಂಚನೆಗೊಳಗಾದ ಗ್ರಾಹಕರು ಅಗತ್ಯ ದಾಖಲೆಗಳೊಂದಿಗೆ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದರೆ ನ್ಯಾಯ ಕೊಡುತ್ತದೆ. ಪ್ರತಿಯೊಬ್ಬ ಗ್ರಾಹಕರು ಇದರ ಅರಿವು ಪಡೆದು ಎಚ್ಚರ ವಹಿಸುವಂತೆ ಹೇಳಿದರು. ಗ್ರಾಹಕರು ಆನ್‌ಲೈನ್‌ನಲ್ಲಿ ವಸ್ತುಗಳನ್ನು ಖರೀದಿಸುವ ಸಂದರ್ಭದಲ್ಲಿ ಎಚ್ಚರದಿಂದ ಇರಬೇಕು. ಯಾವುದಾದರೂ ಲೋಪಗಳು ಕಂಡು ಬಂದಲ್ಲಿ ಅಥವಾ ಗ್ರಾಹಕರಿಗೆ ವ್ಯಾಪಾರಿಗಳಿಂದ ಅನ್ಯಾಯವಾದ ಸಂದರ್ಭದಲ್ಲಿ ಅಂತಹ ಗ್ರಾಹಕರು ತಕ್ಷಣ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬೇಕು. ದೂರು ನೀಡಿದ ಮೂರು ತಿಂಗಳೊಳಗೆ ಪರಿಹಾರ ಪಡೆಯಬಹುದಾಗಿದೆ ಎಂದು ತಿಳಿಸಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹಿಳಾ ಸದಸ್ಯೆ ಇ. ಪ್ರೇಮ ಮಾತನಾಡಿ, ಗ್ರಾಹಕರ ಹಕ್ಕುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಇದೆ. ಇಂದು ಆನ್ ಲೈನ್ ಸೇವೆಯನ್ನು ಈ ವ್ಯಾಪ್ತಿಗೆ ತರಲಾಗಿದೆ. ಆನ್ ಲೈನ್ ಖರೀದಿಯಲ್ಲಿ ಗ್ರಾಹಕರು ಹೆಚ್ಚು ವಂಚನೆಗೆ ಒಳಗಾಗುತ್ತಾರೆ. ಹೀಗೆ ಮೋಸಕ್ಕೆ ಒಳಗಾದ ಗ್ರಾಹಕರು ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿ ಪರಿಹಾರ ಪಡೆಯಬಹುದಾಗಿದೆ ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ.ಎಸ್. ಸೋಮ ಮಾತನಾಡಿ, ಪ್ರತಿ ವರ್ಷ ಮಾ. 15 ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಗ್ರಾಹಕರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದ್ದು, ಭಾರತದಲ್ಲಿ ಗ್ರಾಹಕರ ಕುಂದು ಕೊರತೆಯನ್ನು ರಾಷ್ಟ್ರೀಯ ಗ್ರಾಹಕರ ವಿವಾದಗಳ ಪರಿಹಾರ ಆಯೋಗ ಪರಿಹರಿಸುತ್ತದೆ. ಇದನ್ನು 1988 ರಲ್ಲಿ ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಜಾರಿಗೆ ತರಲಾಯಿತು ಎಂದರು.ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಯೋಗಾನಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಸ್ಕೂಲ್ ಆಫ್ ಲಾ ಕಾಲೇಜಿನ ಪ್ರಾಂಶುಪಾಲ ಸೈಯದ್ ನಯೀಂ ಉರ್ ರೆಹಮಾನ್ ಉಪಸ್ಥಿತರಿದ್ದರು.15 ಕೆಸಿಕೆಎಂ 1ಚಿಕ್ಕಮಗಳೂರಿನ ಶಾರದಾ ಸ್ಕೂಲ್ ಆಫ್ ಲಾ ಕಾಲೇಜ್‌ನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ಆರ್. ಚನ್ನಕೇಶವ ಅವರು ಉದ್ಘಾಟಿಸಿದರು.