ಕನ್ನಡಪ್ರಭ ವಾರ್ತೆ ಸಿರವಾರ
ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ದುರ್ಮರಣ ಹೊಂದಿದ ಘಟನೆ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಜರುಗಿದೆ.ಗ್ರಾಮದ ನಿವಾಸಿಗಳಾದ ಭೀಮಣ್ಣ ಕಬ್ಬೇರ (60), ಭೀಮಣ್ಣನ ಪತ್ನಿ ಈರಮ್ಮ (54), ಭೀಮಣ್ಣನ ಮಗ ಮಲ್ಲೇಶ (19), ಮಗಳು ಪಾರ್ವತಿ (17) ಸಾವನಪ್ಪಿದ ದುರ್ದೈವಿಗಳಾಗಿದ್ದು, ಮತ್ತೊಬ್ಬ ಮಗಳು ಮಲ್ಲಮ್ಮ (18) ಅವರ ಸ್ಥಿತಿ ಗಂಭೀರವಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಬೆಳಗ್ಗೆ ಕುಟುಂಬಸ್ಥರೆಲ್ಲ ಸೇರಿ ಮಟನ್ ಊಟ ಮಾಡಿ ನಂತರ ಬೇರೆ ಬೇರೆ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದರು.ಈ ಸಂದರ್ಭದಲ್ಲಿ ಭೀಮಣ್ಣನ ಮಗಳು ಪಾರ್ವತಿಗೆ ಏಕಾಏಕಿ ವಾಂತಿಯಾದ ಕಾರಣ ಸಹೋದರ ಮಲ್ಲೇಶನಿಗೆ ಈ ವಿಷಯ ತಿಳಿಸಿದಾಗ ನನಗೂ ವಾಂತಿಯಾಗುತ್ತಿದೆ ಎಂದು ಉತ್ತರಿಸಿದ್ದಾರೆ. ಎಲ್ಲರೂ ಮನೆಗೆ ವಾಪಾಸಾದಾಗ ತಂದೆ ತಾಯಿಗೂ ಕೂಡ ವಾಂತಿ ಜೊತೆಗೆ ಬೇದಿಯೂ ಶುರುವಾಗಿದೆ. ತಕ್ಷಣಕ್ಕೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದರು. ಅಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಾಣದ ಕಾರಣ ರಿಮ್ಸ್ ಬೋಧಕ ಆಸ್ಪತ್ರೆ ಸ್ಥಳಾಂತರಿಸಲಾಯಿತು. ಅಲ್ಲಿ ಕೂಡ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ ಭೀಮಣ್ಣ ಎರಡು ಗಂಟೆ ನಂತರ ಪತ್ನಿ ಈರಮ್ಮ ಮೃತರಾದರೆ ನಂತರ ಮಗ ಮತ್ತು ಮಗಳು ಕೂಡ ಮೃತರಾಗಿದ್ದಾರೆ. ಇನ್ನುಳಿದ ಮಗಳು ಕೂಡ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.
ಕುಟುಂಬಕ್ಕೆ ಒಂದು ಎಕರೆ ಜಮೀನಿದ್ದು, ಎಲ್ಲರೂ ಕೃಷಿ ಚಟುವಟಿಕೆಗಳ ಮೂಲಕ ದುಡಿಯುತ್ತಿದ್ದರು, ಕುಟುಂಬಕ್ಕೆ ಗ್ರಾಮದಲ್ಲಿ ಯಾರ ವೈರತ್ವವೂ ಇರದೇ ಸಭ್ಯಸ್ಥ ಕುಟುಂಬವಾಗಿತ್ತು ಎಂದು ಗ್ರಾಮಸ್ಥ ಹಾಗೂ ಸಂಬಂಧಿ ವೆಂಕಟೇಶ ತಿಳಿಸಿದ್ದಾರೆಅಡುಗೆ ಮಾಡುವ ವೇಳೆ ಅಡುಗೆಯಲ್ಲಿ ವಿಷಕಾರಿ ಕೀಟಗಳು ಬಿದ್ದಿರುವ ಶಂಕೆ ಇದ್ದು, ವಿಷಪೂರಿತ ಆಹಾರ ಸೇವೆಯಿಂದ ಈ ಘಟನೆ ಸಂಭವಿಸಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಸಿರವಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡ ತನಿಖೆ ನಡೆಸುತ್ತಿದ್ದಾರೆ.
ವರದಿ ಬಂದ ನಂತರ ಘಟನೆಗೆ ನಿಖರ ಕಾರಣ: ಡಿಸಿಕನ್ನಡಪ್ರಭ ವಾರ್ತೆ ರಾಯಚೂರುಜಿಲ್ಲೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ವಿಷಪೂರಿತ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ದುರ್ಮರಣ ಹೊಂದಿದ್ದು, ಮತ್ತೊಬ್ಬರು ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು, ದುರ್ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ನಿತೀಶ ಕೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ, ಜಿಪಂ ಸಿಇಒ ಪಾಂಡ್ವೆ ರಾಹುಲ್ ತುಕಾರಂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಘಟನೆಯಲ್ಲಿ ಒಂದೇ ಕುಟುಂಬದ ತಂದೆ, ತಾಯಿ, ಮಗ, ಮಗಳು ಮೃತಪಟ್ಟಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿರುವ ಮತ್ತೊಬ್ಬ ಮಗಳು ಮಲ್ಲಮ್ಮ ಅವರ ಪರಿಸ್ಥಿತಿ ವೀಕ್ಷಿಸಿದರು. ಅವರಿಗೆ ಅಗತ್ಯ ಚಿಕಿತ್ಸೆ ಕಲ್ಪಿಸುವಂತೆ ವೈದ್ಯರಿಗೆ, ಸಿಬ್ಬಂದಿಗೆ ಸೂಚನೆ ನೀಡಿದರು.ಈ ವೇಳೆ ಮಾತನಾಡಿದ ಡಿಸಿ, ಪ್ರಾಥಮಿಕ ಮಾಹಿತಿ ಪ್ರಕಾರ ವಿಷಪೂರಿತ ಆಹಾರ ಸೇವನೆಯಿಂದ ದುರ್ಘಟನೆ ಜರುಗಿರುವುದು ತಿಳಿದುಬಂದಿದೆ. ಮೃತರ ದೇಹದಲ್ಲಿ ಗ್ಲುಕೋಸ್ ಪ್ರಮಾಣ ಕಡಿಮೆಯಿದ್ದು, ನಿರ್ದಿಷ್ಟ ಪ್ರಮಾಣದಲ್ಲಿ ಲೀವರ್ ಕಾರ್ಯನಿರ್ವಹಿಸಿಲ್ಲ, ನಾಲ್ವರಲ್ಲಿ ಒಬ್ಬರು ಹೃದಯಾಘಾತದಿಂದ, ಮತ್ತೊಬ್ಬರು ಅಂಗಾಂಗ ವೈಫಲ್ಯದಿಂದ ಸಾವನಪ್ಪಿದ್ದು, ಮಲ್ಲಮ್ಮ ಎನ್ನುವವರ ಸ್ಥಿತಿ ಗಂಭೀರವಾಗಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಊಟದಲ್ಲಿ ಕೀಟನಾಶಕ ಮಿಶ್ರಣಗೊಂಡಿರುವುದು ಬಲವಾಗಿ ಕಂಡುಬರುತ್ತಿದೆ. ಅಲ್ಯುಮಿನಿಯಮ್ಫಾಸ್ಪೈಡ್ ಇರುವುದು ಗೊತ್ತಾಗಿದ್ದು ಇಂತಹ ಕೇಸ್‌ಗಳಲ್ಲಿ ಮನುಷ್ಯರ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗುತ್ತದೆ. ಕುಟುಂಬಸ್ಥರು ಸೇವಿಸಿದ ಆಹಾರ ಪದಾರ್ಥದ ಮಾದರಿ ಪಡೆದು ಪರೀಕ್ಷೆಗೊಳಪಡಿಸಲಾಗಿದ್ದು, ವರದಿ ಬಂದ ನಂತರ ಘಟನೆಗೆ ನಿಖರ ಕಾರಣ ತಿಳಿಯಲಿದೆ ಎಂದರು.ಈ ಸಂದರ್ಭದಲ್ಲಿ ರಿಮ್ಸ್ ನಿರ್ದೇಶಕ ರಮೇಶ, ಡಿಎಚ್ಒ ಡಾ.ಸುರೇಶ ಬಾಬು ಸೇರಿ ಅನೇಕರು ಇದ್ದರು.