ವಾರದಿಂದ ಕಲುಷಿತ ನೀರು ಪೂರೈಕೆ

KannadaprabhaNewsNetwork | Published : Jul 3, 2024 12:21 AM

ಸಾರಾಂಶ

ಕಳೆದ 7 ದಿನಗಳಿಂದ ಕಲುಷಿತ ನೀರು ಪೂರೈಕೆ ಆಗುತ್ತಿದ್ದು ಜನರು ಕುಡಿಯಲು ನೀರಿಲ್ಲದೇ ಪರದಾಡುತ್ತಿರುವ ಸ್ಥಿತಿ ಚಾಮರಾಜನಗರದ 17 ನೇ ವಾರ್ಡ್ ನ ಉಪ್ಪಾರ ಬೀದಿಯಲ್ಲಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಳೆದ 7 ದಿನಗಳಿಂದ ಕಲುಷಿತ ನೀರು ಪೂರೈಕೆ ಆಗುತ್ತಿದ್ದು ಜನರು ಕುಡಿಯಲು ನೀರಿಲ್ಲದೇ ಪರದಾಡುತ್ತಿರುವ ಸ್ಥಿತಿ ಚಾಮರಾಜನಗರದ 17 ನೇ ವಾರ್ಡ್ ನ ಉಪ್ಪಾರ ಬೀದಿಯಲ್ಲಿ ನಿರ್ಮಾಣವಾಗಿದೆ. ಚಾಮರಾಜನಗರದ 17 ನೇ ವಾರ್ಡ್ ನಲ್ಲಿ ಉಪ್ಪಾರ ಬೀದಿಯಲ್ಲಿ ನೂರಾರು ಮ‌ನೆಗಳಿದ್ದು ಕಳೆದ 1 ವಾರಗಳಿಂದ ಚರಂಡಿ ಮಿಶ್ರಿತ ನೀರು ಪೂರೈಕೆ ಆಗುತ್ತಿದ್ದು ಕುಡಿಯಲು ಬಳಸಲಾಗದೇ, ಮನೆ ಬಳಕೆಗೂ ಉಪಯೋಗಿಸಲಾರದೇ ಜನರು ಪರದಾಡುತ್ತಿದ್ದಾರೆ.ಕುಡಿಯುವ ನೀರಿನ ಪೈಪ್ ಗೆ ಚರಂಡಿ ನೀರು ಮಿಶ್ರಿತವಾಗುತ್ತಿದ್ದು ದುರ್ವಾಸನೆ ಹಾಗೂ ನೊರೆಯುಕ್ತ ನೀರು ಪೂರೈಕೆ ಮಾಡಲಾಗುತ್ತಿದೆ. ಸ್ನಾನ ಮಾಡಿದರೇ ಮೈ ತುರಿಕೆ ಬರುತ್ತಿದ್ದು ಸ್ನಾನಕ್ಕೂ ಕೂಡ ಈ ನೀರು ಬಳಕೆ ಮಾಡದ ಸ್ಥಿತಿ ಇದೆ.

ಭಾನುವಾರದಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ವಾರ್ಡ್ ನ ಮನೆಗಳಿಗೆ ಭೇಟಿ ಕೊಟ್ಟು ಕಲುಷಿತ ನೀರು ಪೂರೈಕೆ ಬಗ್ಗೆ ಮಾಹಿತಿ ಪಡೆದು ನಗರಸಭೆ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ನೀರು ಪೂರೈಕೆಯಲ್ಲಿ ಬದಲಾವಣೆ ಆಗಿಲ್ಲ.

ವಾರ್ಡ್ ನ ನಿವಾಸಿ ಅಶ್ವಿನಿ ಎಂಬವರು ಮಾತನಾಡಿ, ನಾವು 1 ವಾರಗಳಿಂದ ಟ್ಯಾಂಕರ್ ನೀರು ತೀರಿಸಿಕೊಳ್ಳುತ್ತಿದ್ದೇವೆ, ಆ ನೀರಿನಲ್ಲಿ ಮಕ್ಕಳಿಗೆ ಸ್ನಾನ ಮಾಡಿಸಿದರೇ ಸೋಂಕು ಅಂಟುತ್ತಿದೆ, ಕಾವೇರಿ ನೀರಿಗೆ ಚರಂಡಿ ನೀರು ಮಿಶ್ರಣಗೊಂಡು ಈ ಅವಾಂತರ ಸೃಷ್ಟಿಯಾಗಿದೆ, ನಗರಸಭೆಗೆ ಎಷ್ಟೇ ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು. ಆದರೆ ಹಣ ಇಲ್ಲದವರು ಟ್ಯಾಂಕರ್ ನೀರು ಪಡೆಯಲು ಹಣ ಹೊಂದಿಸಲಾಗಿದೆ ಕೈ ಚಲ್ಲಿ ಕುಳಿತಿರುವುದು ಸಹ ನಾಗರಿಕರ ಬೇಸರ ಕಾರಣವಾಗಿದೆ.

ಕಾಲರಾ ಭೀತಿ ಆವರಿಸುತ್ತಿರುವ ಹೊತ್ತಿನಲ್ಲಿ 1 ವಾರದಿಂದ ಕಲುಷಿತ ನೀರು ಪೂರೈಕೆ ಮಾಡುತ್ತಿರುವುದು ನಗರಸಭೆ ಸಿಬ್ಬಂದಿಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ಕೂಡಲೇ ಪೈಪ್ ಲೈನ್ ದುರಸ್ತಿಪಡಿಸಿ ಸಮರ್ಪಕ ನೀರು ಪೂರೈಕೆ ಮಾಡಬೇಕು ಎಂದು ನಿವಾಸಿಗಳಾದ ಜಯಕುಮಾರ್, ರೂಪಾ ಒತ್ತಾಯಿಸಿದರು.

Share this article