ತಿಪಟೂರು: ಭಾರತೀಯ ಹಿಂದೂ ಧರ್ಮದ ಸನಾತನ ಸಂಸ್ಕೃತಿಯ ಸಂಪತ್ತುಗಳಾದ ದಾನ ಧರ್ಮ, ಆಧ್ಯಾತ್ಮ, ಧಾರ್ಮಿಕ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ಸಂತೃಪ್ತಿ ಕಾಣಬಹುದು ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ನಮ್ಮ ಪೂರ್ವಿಕರು ಧರ್ಮಮಾರ್ಗಿಗಳು ಹಾಗೂ ದೈವಭಕ್ತರಾಗಿದ್ದರು. ಅಪಾರ ಶ್ರದ್ದೆ, ಭಯ, ಭಕ್ತಿಗಳಿಂದಲೇ ಪರಮಾತ್ಮನನ್ನು ಕಾಣುತ್ತಿದ್ದರು. ಸುಖ ಮತ್ತು ದುಃಖ ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತ ಸಂತೃಪ್ತಿಯ ಜೀವನ ನಡೆಸುತ್ತಿದ್ದರು. ಗುರು-ಹಿರಿಯರು, ತಂದೆ-ತಾಯಿ ಮತ್ತು ಸಾಧು ಸಂತರನ್ನು ಗೌರವದಿಂದ ಕಾಣುತ್ತಿದ್ದರು. ಅದಕ್ಕಾಗಿಯೇ ಮಳೆ-ಬೆಳೆ ಆಗಿ ಸಮೃದ್ದರಾಗಿದ್ದರು. ಆದರೆ ಇಂದಿನ ಯುವ ಪೀಳಿಗೆಯಲ್ಲಿ ಇವೆಲ್ಲ ಕಣ್ಮರೆಯಾಗುತ್ತಿದ್ದು ಆಧುನಿಕತೆಯ ಭ್ರಮಾಲೋಕದಲ್ಲಿ ತೇಲಾಡುತ್ತಿದ್ದಾರೆ. ಯುವ ಪೀಳಿಗೆ ನಮ್ಮ ಸಂಸ್ಕೃತಿ, ಆಚಾರ-ವಿಚಾರ,ಸಂಪ್ರದಾಯಗಳನ್ನು ಮೈಗೂಡಿಸಿಕೊಳ್ಳಬೇಕು. ಪರಸ್ಪರ ಸಹಕಾರ, ಸೌಜನ್ಯದಿಂದ ಕೂಡಿದ ಸದ್ಗುಣಗಳನ್ನು ಬೆಳೆಸಿಕೊಂಡು ಸಹಬಾಳ್ವೆಯ ಜೀವನ ನಡೆಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಕೆ.ಪಿ. ರುದ್ರಮುನಿಸ್ವಾಮಿ, ಕೆ.ಆರ್. ಅರುಣ್‌ಕುಮಾರ್, ತಾಪಂ ಮಾಜಿ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಗ್ರಾ.ಪಂ ಸದಸ್ಯರಾದ ಈಶ್ವರ್, ವಸಂತ್, ನಂದೀಶ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.