ಕಪಿಲಾ ನದಿ ಸ್ನಾನಘಟ್ಟದ ಸ್ನಾನಗೃಹ, ಶೌಚಾಲಯದಲ್ಲಿ ಸುಲಿಗೆ

KannadaprabhaNewsNetwork |  
Published : Jan 29, 2024, 01:34 AM IST
61 | Kannada Prabha

ಸಾರಾಂಶ

ಶೌಚಾಲಯದಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರ ಗಮನಕ್ಕೂ ತರಲಾಗಿ. ಶಾಸಕ ದರ್ಶನ್ ಧ್ರುವನಾರಾಯಣ್ ದೇವಾಲಯದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಈ ಕೂಡಲೇ ದರಪಟ್ಟಿ ಸೂಚನಾ ಫಲಕಗಳನ್ನು ಅಳವಡಿಸಿ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವಂತೆ ಹಾಗೂ ಸಿಬ್ಬಂದಿ ಭಕ್ತಾದಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚನೆ ನೀಡಿದ್ದರೂ ಅಧಿಕಾರಿಗಳು ಶಾಸಕರ ಮಾತಿಗೂ ಕ್ಯಾರೇ ಎನ್ನದೆ ಟೆಂಡರ್‌ ದಾರನ ಜೊತೆಗೆ ಶಾಮೀಲಾಗಿರುವುದರಿಂದ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದರಿಂದ ದಿನನಿತ್ಯ ಭಕ್ತಾದಿಗಳ ಗೋಳು ಕೇಳುವರೇ ಇಲ್ಲದಂತಾಗಿದೆ.

- ಭಕ್ತರ ಮಲ, ಮೂತ್ರದಲ್ಲೂ ಕೊಳ್ಳೆ ಹೊಡೆಯುತ್ತಿರುವ ಗುತ್ತಿಗೆದಾರರು

- ಶಾಸಕರ ಮಾತಿಗೂ ಬೆಲೆ ನೀಡದೆ ಶಾಮೀಲಾದ ಅಧಿಕಾರಿಗಳು---ಕನ್ನಡಪ್ರಭ ವಾರ್ತೆ ನಂಜನಗೂಡು

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಕಪಿಲಾ ನದಿ ತೀರದಲ್ಲಿನ ಶೌಚಾಲಯದಲ್ಲಿ ಶೌಚಾಲಯ ಬಳಕೆ ಮತ್ತು ಸ್ನಾನ ಗೃಹಗಳಿಗೆ ದರ ನಿಗದಿಗಿಂತ ನಾಲ್ಕು ಪಟ್ಟು ಹಣ ವಸೂಲಿ ಮಾಡುವ ಮೂಲಕ ಭಕ್ತಾದಿಗಳನ್ನು ಸುಲಿಗೆ ಮಾಡಲಾಗುತ್ತಿದೆ.

ಶ್ರೀಕಂಠೇಶ್ವರ ದೇವಾಲಯದ ಆಡಳಿತ ಮಂಡಳಿ ಮೂತ್ರಾಲಯ ಉಚಿತ, ಶೌಚಾಲಯ ಉಪಯೋಗಕ್ಕೆ 2 ರೂ, ಬಿಸಿನೀರು ಸ್ನಾನಕ್ಕೆ 5 ರೂಪಾಯಿ ನಿಗದಿಗೊಳಿಸಿ, ಟೆಂಡರ್ ಪ್ರಕ್ರಿಯೆ ನಡೆಸಿದೆ. ಅಲ್ಲದೆ ಶೌಚಾಲಯ ಉಪಯೋಗಕ್ಕೆ ದರ ನಿಗದಿಗೊಳಿಸಿ ಸೂಚನಾ ಫಲಕಗಳನ್ನು ಅಳವಡಿಸಿದೆ.

ಆದರೆ ಟೆಂಡರ್ ಪಡೆದಿರುವ ಬೆಂಗಳೂರು ಮೂಲದ ವ್ಯಕ್ತಿ ಸೂಚನಾ ಫಲಕದ ದರ ಪಟ್ಟಿಯನ್ನು ಅಳಿಸಿ ಕೆಲವೊಂದಕ್ಕೆ ಬಟ್ಟೆಯಿಂದ ಮರೆಮಾಚಿ ಮೂತ್ರ ವಿಸರ್ಜನೆಗೂ 5 ರೂ, ಶೌಚಾಲಯ ಉಪಯೋಗಕ್ಕೆ 10 ರೂ, ಬಿಸಿನೀರು ಸ್ನಾನಕ್ಕೆ ಒಂದು ಬಕೆಟ್ ಗೆ 40 ರೂಪಾಯಿ ವಸೂಲಿ ಮಾಡುವ ಮೂಲಕ ಭಕ್ತಾದಿಗಳನ್ನು ಸುಲಿಗೆ ಮಾಡುತ್ತಿದ್ದಾರೆ.

ಅಲ್ಲದೆ ನದಿ ನೀರಿನಲ್ಲಿ ಸ್ನಾನ ಮಾಡುವ ಮಹಿಳಾ ಭಕ್ತಾದಿಗಳಿಗೆ ಬಟ್ಟೆ ಬದಲಾಯಿಸುವ ಸ್ಥಳ ನಿರ್ಮಿಸಿದ್ದು ಮಹಿಳೆಯರ ಬಟ್ಟೆ ಬದಲಾವಣೆಗೆ ಉಚಿತವಾಗಿ ಅವಕಾಶ ಕಲ್ಪಿಸಿದ್ದರೂ ಕೂಡ ಬಟ್ಟೆ ಬದಲಾಯಿಸಲು ಪ್ರತಿ ಮಹಿಳೆಯರಿಗೆ 10 ರೂ ತೆಗೆದುಕೊಳ್ಳುತ್ತಿದ್ದಾರೆ.

ಟೆಂಡರ್ ಪಡೆದಿರುವ ಗುತ್ತಿಗೆದಾರ ಕೆಲಸಕ್ಕೆಂದು ಉತ್ತರ ಪ್ರದೇಶದ ಮೂಲದ ವ್ಯಕ್ತಿಗಳನ್ನು ನೇಮಿಸಿಕೊಂಡು ಹೆಚ್ಚಿನ ದರ ವಸೂಲಿ ದಂಧೆಯಲ್ಲಿ ತೊಡಗಿರುವುದರಿಂದ. ದೇವಾಲಯದ ಹೊರ ಊರಿನ ಭಕ್ತಾದಿಗಳಿಗೆ ಶುಲ್ಕ ದುಬಾರಿಯಾಗಿ ತೊಂದರೆ ಉಂಟಾಗಿದೆ. ಭಕ್ತಾದಿಗಳು ಈ ಬಗ್ಗೆ ಅಲ್ಲಿನ ಸಿಬ್ಬಂದಿಗೆ ಹೆಚ್ಚುವರಿ ಹಣ ಯಾಕೆ ಪಡೆಯುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ್ದಲ್ಲಿ ಕನ್ನಡ ಮಾತನಾಡಲು ಬಾರದ ಸಿಬ್ಬಂದಿ ಭಕ್ತಾದಿಗಳೊಂದಿಗೆ ಘರ್ಷಣೆಗೆ ಇಳಿಯುತ್ತಾ ದಿನನಿತ್ಯ ಭಕ್ತರ ಮೇಲೆ ಗಲಾಟೆ ನಡೆಯುತ್ತಿರುವ ಪ್ರಸಂಗ ಜರುಗುತ್ತಿದೆ.

ಕೆಲ ಭಕ್ತರು ದೇವಾಲಯದ ಆಡಳಿತ ಅಧಿಕಾರಿಗಳಿಗೆ ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಬಗ್ಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ.

ಶಾಸಕರ ಮಾತಿಗೂ ಕಿಮ್ಮತ್ತಿಲ್ಲ

ಶೌಚಾಲಯದಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕರ ಗಮನಕ್ಕೂ ತರಲಾಗಿ. ಶಾಸಕ ದರ್ಶನ್ ಧ್ರುವನಾರಾಯಣ್ ದೇವಾಲಯದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಈ ಕೂಡಲೇ ದರಪಟ್ಟಿ ಸೂಚನಾ ಫಲಕಗಳನ್ನು ಅಳವಡಿಸಿ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವಂತೆ ಹಾಗೂ ಸಿಬ್ಬಂದಿ ಭಕ್ತಾದಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸೂಚನೆ ನೀಡಿದ್ದರೂ ಅಧಿಕಾರಿಗಳು ಶಾಸಕರ ಮಾತಿಗೂ ಕ್ಯಾರೇ ಎನ್ನದೆ ಟೆಂಡರ್‌ ದಾರನ ಜೊತೆಗೆ ಶಾಮೀಲಾಗಿರುವುದರಿಂದ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದರಿಂದ ದಿನನಿತ್ಯ ಭಕ್ತಾದಿಗಳ ಗೋಳು ಕೇಳುವರೇ ಇಲ್ಲದಂತಾಗಿದೆ.

ಅಲ್ಲದೆ ಟೆಂಡರ್ ಪಡೆದಿರುವಾತ ಎಷ್ಟು ಪ್ರಭಾವಿ ಇರಬಹುದು? ಅಥವಾ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳೇ ಅವರ ರಕ್ಷಣೆಗೆ ನಿಂತಿರುವರೇ? ಅಥವಾ ದೇವಾಲಯದ ಅಧಿಕಾರಿಗಳೇ ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆಯೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕಾಡತೊಡಗಿವೆ.

ನದಿ ತೀರದಲ್ಲಿ ಹೆಚ್ಚಾದ ಅನೈರ್ಮಲ್ಯ

ಶೌಚಾಲಯದಲ್ಲಿ ಹೆಚ್ಚಿನ ದರ ವಸೂಲಿಯಿಂದ ಕೆಲ ಭಕ್ತಾದಿಗಳು ಶೌಚಾಲಯ ಉಪಯೋಗಕ್ಕೆ ಹಣವಿಲ್ಲದೆ ನದಿ ತೀರದಲ್ಲಿ ಶೌಚಾಲಯ ಮಾಡುವುದರಿಂದ ನದಿ ತೀರದಲ್ಲಿ ಸ್ವಚ್ಛತೆ ಮಾಯವಾಗಿ ಸುತ್ತಲೂ ಗಲೀಜು ಯಥೇಚ್ಛವಾಗಿದೆ.

ಭಕ್ತಾದಿಗಳು ಮೂಗು ಹಿಡಿದುಕೊಂಡೆ ನದಿಯಿಂದ ಮೇಲಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಭಕ್ತಾದಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ್ ಕ್ರಮ ತೆಗೆದುಕೊಂಡು ಭಕ್ತಾದಿಗಳ ಸಮಸ್ಯೆ ನಿವಾರಿಸುವ ಮೂಲಕ ಶ್ರೀಕಂಠೇಶ್ವರ ದೇವಾಲಯದ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಬೇಕು ಎಂಬುದು ದೇವಾಲಯದ ಭಕ್ತರ ಆಗ್ರಹವಾಗಿದೆ.

---

ಕೋಟ್‌

ಫೋಟೋ- 28ಎಂವೈಎಸ್‌ 63

ನಾವು ಬೆಂಗಳೂರಿನಿಂದ ಶ್ರೀಕಂಠೇಶ್ವರನ ದರ್ಶನಕ್ಕೆಂದು ಬಂದಿದ್ದೇವೆ. ಬಿಸಿನೀರು ಉಪಯೋಗಿಕ್ಕೆ ಪ್ರತಿ ಬಕೆಟ್ ಗೆ 40 ರೂ. ಪಡೆಯುತ್ತಿದ್ದಾರೆ. ನಾವು 5 ಬಕೆಟ್ ನೀರು ಪಡೆದಿದ್ದು 200 ರೂ ಪಾವತಿಸಿದ್ದೇವೆ. ಇದರಿಂದ ನಮಗೆ ಆರ್ಥಿಕವಾಗಿ ಹೊರೆಯಾಗಿದೆ. ಯುವಕರಾದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡಬಹುದು, ಈಗ ಚಳಿ ಹೆಚ್ಚಿರುವ ಕಾರಣ ವಯಸ್ಸಾದವರು ಸ್ನಾನ ಮಾಡಲು ಕಷ್ಟವಾಗುತ್ತದೆ. ಹೆಚ್ಚಿನ ದರ ವಸೂಲಿ ಬಗ್ಗೆ ಪ್ರಶ್ನೆ ಮಾಡಲು ಹೋದರೆ ನಮ್ಮ ಮೇಲೆ ಗಲಾಟೆಗೆ ಬರುತ್ತಾರೆ. ಆದ್ದರಿಂದ ದೇವಾಲಯದ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭಕ್ತಾದಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು. ತಪ್ಪಿದರೆ ಶ್ರೀಕಂಠೇಶ್ವರನ ದೇವಾಲಯಕ್ಕೆ ಕೆಟ್ಟ ಹೆಸರು ಬರಲಿದೆ ಎಂದು ತಮ್ಮ ಅಳಲು ತೋಡಿಕೊಂಡರು.

- ಲಕ್ಷ್ಮೀ ಬೆಂಗಳೂರು ನಿವಾಸಿ.

---

ಫೋಟೋ- 28ಎಂವೈಎಸ್‌ 64

ಶೌಚಾಲಯ ಉಪಯೋಗಕ್ಕೆ 10 ರೂ ಬಿಸಿ ನೀರು ಸ್ನಾನಕ್ಕೆ 40 ರೂ ಸೇರಿ 50 ರೂ ಪಾವತಿಸಿದ್ದೇನೆ. ಶೌಚಾಲಯ ಉಪಯೋಗಿಸಲು ದರ ಕಡಿಮೆ ಮಾಡುವಂತೆ ಜಿಲ್ಲಾಡಳಿತ ದೇವಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿ ಭಕ್ತಾಧಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು.

- ನಂಜುಂಡಸ್ವಾಮಿ, ಊಟಿ ನಿವಾಸಿ

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ