ಅಪಘಾತ ರಹಿತ ಸಂಚಾರಕ್ಕೆ ಸಹಕರಿಸಿ

KannadaprabhaNewsNetwork |  
Published : Aug 09, 2024, 12:51 AM IST
ಗಜೇಂದ್ರಗಡ ಸಂಚಾರ ಮತ್ತು ರಸ್ತೆ ಸುರಕ್ಷತಾ ಹಿತದೃಷ್ಠಿಯಿಂದ ಇಲ್ಲಿನ ಪೊಲೀಸ್ ಠಾಣೆಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಬಿ.ಎಸ್.ನೇಮಗೌಡ ಮಾತನಾಡಿದರು. | Kannada Prabha

ಸಾರಾಂಶ

ಸ್ಥಳೀಯ ರಸ್ತೆಗಳ ಪಕ್ಕದಲ್ಲಿರುವ ಪಾದಾಚಾರಿಗಳು ಸಂಚರಿಸಲಿರುವ ಫುಟ್‌ಪಾತ್‌ನಲ್ಲಿ ಸ್ವಚ್ಛವಾಗಿಡಲು ಹಾಗೂ ರಸ್ತೆಯಲ್ಲಿ ವಾಹನ ಓಡಾಟಕ್ಕೆ ತೊಂದರೆಯಾಗದಂತೆ ಬೀದಿ ಬದಿ ವ್ಯಾಪಾರ ನಡೆಸಲು ವ್ಯಾಪಾರಸ್ಥರಿಗೆ ಸೂಚಿಸಬೇಕು

ಗಜೇಂದ್ರಗಡ: ಸುಗಮ ಸಂಚಾರಕ್ಕೆ ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸ್ಥಳೀಯ ಆಡಳಿತದ ಸಹಕಾರವಿದ್ದರೆ ಅಪಘಾತ ರಹಿತ ಸಂಚಾರದ ಗುರಿ ತಲುಪುವುದು ಸರಳ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಚಾರ ಮತ್ತು ರಸ್ತೆ ಸುರಕ್ಷತಾ ಹಿತದೃಷ್ಠಿಯಿಂದ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಮನ್ವಯ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಪ್ರಮುಖ ಪಟ್ಟಣ ಹಾಗೂ ತಾಲೂಕು ಕೇಂದ್ರವಾಗಿರುವ ಗಜೇಂದ್ರಗಡದ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವುದರ ಜತೆಗೆ ಸಂಚಾರಿ ನಿಯಮಗಳ ಬಗ್ಗೆ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಿದೆ. ಈ ಎರಡು ಕಾರ್ಯಗಳು ಸುಗಮವಾಗಿ ನಡೆದರೆ ಅಪಘಾತ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತದೆ. ಹೀಗಾಗಿ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ತಾಲೂಕು ಮತ್ತು ಸ್ಥಳೀಯ ಮಟ್ಟದ ಆಡಳಿತ ವಿಭಾಗದ ಅಧಿಕಾರಿಗಳ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕಿದೆ ಎಂದ ಅವರು, ಪಟ್ಟಣ ಮಾರ್ಗವಾಗಿ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ಧಾರಿ ನಿಯಮ ಸಮರ್ಪಕ ಹಾಗೂ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಬೇಕು. ಸ್ಥಳೀಯ ರಸ್ತೆಗಳ ಪಕ್ಕದಲ್ಲಿರುವ ಪಾದಾಚಾರಿಗಳು ಸಂಚರಿಸಲಿರುವ ಫುಟ್‌ಪಾತ್‌ನಲ್ಲಿ ಸ್ವಚ್ಛವಾಗಿಡಲು ಹಾಗೂ ರಸ್ತೆಯಲ್ಲಿ ವಾಹನ ಓಡಾಟಕ್ಕೆ ತೊಂದರೆಯಾಗದಂತೆ ಬೀದಿ ಬದಿ ವ್ಯಾಪಾರ ನಡೆಸಲು ವ್ಯಾಪಾರಸ್ಥರಿಗೆ ಸೂಚಿಸಬೇಕು.

ಪಟ್ಟಣದಲ್ಲಿರುವ ಅಟೋ, ಕಾರ್ ಹಾಗೂ ಟೆಂಪೊಗಳಿಗೆ ಇರುವ ಸ್ಟ್ಯಾಂಡ್‌ಗಳಲ್ಲಿ ವಾಹನ ನಿಲ್ಲಿಸಬೇಕು. ಸಾರಿಗೆ ಘಟಕದ ವಾಹನಗಳು ಸಹ ನಿಯಮಗಳ ಪಾಲನೆಗೆ ಮುಂದಾಗಬೇಕು. ರಸ್ತೆ ಹಾಗೂ ವೃತ್ತಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳ ನಿಲುಗಡೆಯಾದರೆ ವಾಹನ ದಟ್ಟನೆ ನಿರ್ಮಾಣವಾಗುತ್ತದೆ. ಹೀಗಾಗಿ ವಾಹನಗಳ ಮಾಲಕರು ಮತ್ತು ಚಾಲಕರು ಕಡ್ಡಾಯವಾಗಿ ಸಂಚಾರಿ ನಿಯಮಗಳ ಪಾಲನೆಗೆ ಜತೆಗೆ ವಾಹನಗಳಲ್ಲಿ ಅಗತ್ಯ ದಾಖಲೆ ಹೊಂದಿರಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ, ಸಿಪಿಐ ಎಸ್.ಎಸ್. ಬೀಳಗಿ, ಆರ್‌ಟಿಒ ವಿಶಾಲ ಪವಾರ, ಪಿಎಸ್‌ಐ ಸೋಮನಗೌಡ ಗೌಡ್ರ, ರಾಷ್ಟ್ರೀಯ ಹೆದ್ದಾರಿಯ ಎನ್.ಕೆ. ಮೂರ್ತಿ, ಗೀರೀಶ, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಡಾ. ಅನೀಲಕುಮಾರ ತೋಟದ, ಉಮೇಶ ಲಮಾಣಿ, ದಾದಾಖಲಂದರ ಆಶೇಖಾನ, ಜೆ.ಪಿ. ಪೂಜಾರ, ಸಂಗಮೇಶ ಹಲಬಾಗಿಲ ಹಾಗೂ ಶರಣಪ್ಪ ಹೂಗಾರ, ಪ್ರಭು ಚವಡಿ, ರಾಣೋಜಿ ಕಲಾಲ, ರಾಜು ಕಾರಗಾರ ಸೇರಿ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ