- ಭಾನುವಳ್ಳಿಯಲ್ಲಿ ಮತದಾನ ಅರಿವು ಕಾರ್ಯಕ್ರಮ - - - ಮಲೇಬೆನ್ನೂರು: ಪ್ರಜಾಪ್ರಭುತ್ವ ಬಲಪಡಿಸಲು ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಸಹಕರಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ಇಲ್ಲಿಗೆ ಸಮೀಪದ ಭಾನುವಳ್ಳಿ ಗ್ರಾಮದಲ್ಲಿ ಪೊಲೀಸ್ ಇಲಾಖೆ ಕರೆದಿದ್ದ ಮತದಾನ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮದ ಏಳು ಮತಗಟ್ಟೆಗಳ ಒಟ್ಟು ಏಳೂವರೆ ಸಾವಿರ ಮತದಾರರಲ್ಲಿ ಯಾರೂ ಆಸೆ, ಆಮಿಷಕ್ಕೆ ಒಳಗಾಗದೇ ಈ ಬಾರಿ ಶೇ.೮೦%ಕ್ಕೂ ಅಧಿಕ ಮತದಾನವಾಗಲು ಅಧಿಕಾರಿಗಳ ಪ್ರಯತ್ನದ ಜತೆ ಗ್ರಾಮಸ್ಥರು ಬದ್ಧತೆ ತೋರಬೇಕು. ಆಗ ಮಾತ್ರ ಪ್ರಜೆಗಳಿಂದ, ಉತ್ತಮ ಪ್ರಭು ಆಯ್ಕೆ ಸಾರ್ಥಕ ಆಗುತ್ತದೆ ಎಂದರು.ಮತದಾನ ವಿಷಯವಾಗಿ ಪತ್ರಿಕೆಗಳಲ್ಲಿ, ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿ ಇದೆ. ಬೇರೆಡೆ ಮತದಾನ ಹಕ್ಕಿಗಾಗಿ ಮಹಿಳೆಯರು ಹೋರಾಟ ಮಾಡುವ ಸಂದರ್ಭಗಳು ಸಾಕಷ್ಟಿವೆ. ನಾಯಕನನ್ನು ಆಯ್ಕೆ ಮಾಡುವ ಅಧಿಕಾರ ಪ್ರಜೆಗಳಿಗಿದೆ. ಜನಪ್ರತಿನಿಧಿಗಳು ಹೆಚ್ಚು ಮತದಾನಕ್ಕೆ ಶ್ರಮ ಹಾಕಬೇಕು ಎಂದು ಅಭಿಪ್ರಾಯಪಟ್ಟರು.
ಅಹಿತಕರ ಘಟನೆ, ಪ್ರತಿಮೆ ವಿಚಾರಗಳಿಗಾಗಿ ಭಾನುವಳ್ಳಿಗೆ ಈಗಾಗಲೇ ಹೆಚ್ಚು ಬಾರಿ ಭೇಟಿ ನೀಡಿದ್ದೇವೆ. ಚುನಾವಣೆ ದಿನವೂ ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ ಕದಡಿದರೆ ನಿರ್ದಾಕ್ಷಿಣ್ಯ ಕ್ರಮ ಗ್ಯಾರಂಟಿ ಎಂದು ಎಸ್‌ಪಿ ಉಮಾ ಎಚ್ಚರಿಸಿದರು.ವೃತ್ತ ನಿರೀಕ್ಷಕ ಸುರೇಶ್ ಸಗರಿ ಮಾತನಾಡಿ, ಭಾರತದಲ್ಲಿ ಚುನಾವಣೆಯು ಮಹತ್ವದ ಪಾತ್ರ ವಹಿಸಲಿದೆ. ಆ ದಿನ ಭಯ, ಪ್ರಭಾವ ಉಂಟುಮಾಡುವ ಯಾವುದೇ ಘಟನೆಯನ್ನು ಹತ್ತಿಕ್ಕಲು ಪೊಲೀಸರು ಸಿದ್ಧರಾಗಿದ್ದಾರೆ. ಮತಗಟ್ಟೆ ಬಳಿ ಸ್ವಯಂ ಸೇವಕರು ನೇಮಕವಾಗಿದ್ದು, ಯಾವುದೇ ವಾಗ್ವಾದ, ಅಶಾಂತಿ ವಾತಾವರಣ ನಡೆದಲ್ಲಿ ಸಹಾಯವಾಣಿ ೧೧೨ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದರು.
ಪಿಎಸ್‌ಐ ಮಹದೇವ್ ಪತ್ತೆ, ಪಿಡಿಒ ಮಹೇಶ್, ಎಎಸ್‌ಐ ಪಾಲಾಕ್ಷ, ಬರಹಗಾರ ಶಿವಕುಮಾರ್, ಪೊಲೀಸ್ ಮಲ್ಲಿಕಾರ್ಜುನ್, ಗ್ರಾಪಂ ಕಾರ್ಯದರ್ಶಿ, ನೂರಾರು ಪ್ರಜೆಗಳು ಹಾಜರಿದ್ದರು. ಕೆಲವರು ಪ್ರಶ್ನೆಗೆ ಉತ್ತರ ಪಡೆದರು.- - - -ಚಿತ್ರ-೧:
ಜಿಲ್ಲಾ ಎಸ್‌ಪಿ ಉಮಾಪ್ರಶಾಂತ್ ಗ್ರಾಮಸ್ಥರಿಗೆ ಮತದಾನ ಪ್ರತಿಜ್ಞೆ ಬೋಧಿಸಿದರು.