ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
ಯಲಬುರ್ಗಾ: ಮಕ್ಕಳ ಹಕ್ಕುಗಳ ರಕ್ಷಣೆಗೆ ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.
ತಾಲೂಕಿನ ಹಿರೇಅರಳಿಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಪಂ ಹಾಗೂ ನಾನಾ ಇಲಾಖೆಯಿಂದ ಆಯೋಜಿಸಿದ್ದ ಲಿಂಗನಮಂಡಿ ಗ್ರಾಮದಲ್ಲಿ ಮಕ್ಕಳ ಗ್ರಾಮ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಹಕ್ಕುಗಳು ಸಂರಕ್ಷಿಸುವಲ್ಲಿ ಆಯೋಗ ರಾಜ್ಯದಲ್ಲಿ ತೀವ್ರವಾಗಿ ಗಮನಹರಿಸುತ್ತಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣವಾಗಿರುವ ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಶ್ರಮ ವಹಿಸಿದೆ ಎಂದರು.
ಬಾಲ್ಯವಿವಾಹ ತಡೆಗಟ್ಟಲು ಗ್ರಾಪಂ ಮಟ್ಟದ ಮಹಿಳೆ ಮತ್ತು ಮಕ್ಕಳ ಕಾವಲು ಸಮಿತಿ ಹಾಗೂ ತಾಲೂಕು ಮಟ್ಟದ ಕಾವಲು ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಭೆಯಲ್ಲಿ ಈ ಕುರಿತು ಚರ್ಚಿಸಲು ಎಲ್ಲ ಇಲಾಖೆಗಳ ಬಾಲ್ಯ ವಿವಾಹ ನಿಷೇಧ ಅಧಿಕಾರಗಳು ಅಂಕಿ ಅಂಶಗಳೊಂದಿಗೆ ಹಾಜರಾಗಿ ಬಾಲ್ಯವಿವಾಹ ತಡೆಗಟ್ಟುವಲ್ಲಿ ಎಲ್ಲರೂ ಮುಂದಾಗಬೇಕು ಎಂದು ಹೇಳಿದರು.
ಮಕ್ಕಳು ಶಾಲೆಯಿಂದ ಹೊರ ಉಳಿಯುತ್ತಿದ್ದು ಶಿಕ್ಷಣ ಇಲಾಖೆ ತೀವ್ರ ಗಮನಹರಿಸಬೇಕು. ಪೊಕ್ಸೊ ೨೦೧೨ ಕಾಯ್ದೆ ಕುರಿತಂತೆ ಜನರಿಗೆ ಅರಿವು ಇಲ್ಲದ ಕಾರಣ ಪ್ರಕರಣಗಳು ದಾಖಲಾಗುತ್ತಿದ್ದು, ಹದಿಹರಿಯದ ಮಕ್ಕಳು ಇಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಬಾಲ ತಾಯಂದಿರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದಕ್ಕೆ ಮೂಲ ಕಾರಣ ಬಾಲ್ಯ ವಿವಾಹವಾಗಿದೆ. ಇದನ್ನು ತಡೆಗಟ್ಟುವ ಅಗತ್ಯವಿದೆ. ಇದಕ್ಕೆ ಪೂರಕವಾಗಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಿಡಿಒಗಳು ಜಾಗೃತರಾಗಿ ಕರ್ತವ್ಯ ನಿರ್ವಹಿಸುವುದು ಮುಖ್ಯವಾಗಿದೆ.
ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಇರುವ ೧೮ ವರ್ಷದ ಒಳಗಿನ ಎಲ್ಲ ಮಕ್ಕಳ ಸಮಗ್ರ ಮಾಹಿತಿ ಇರಿಸುವಂತೆ ಕ್ರಮ ವಹಿಸಬೇಕು ಎಂದು ಹೇಳಿದರು.ಗ್ರಾಪಂ ಅಧ್ಯಕ್ಷೆ ದೇವಮ್ಮ ಶರಣಪ್ಪ ಭೂತಲ್, ಪಿಡಿಒ ಸೋಮಪ್ಪ ಪ್ರಜಾರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ವಿ.ಕೆ.ಬ ಡಿಗೇರ್ ಇದ್ದರು.