ಆರ್ಥಿಕ ಸಬಲೀಕರಣಕ್ಕೆ ಸಹಕಾರ ಸಂಘಗಳ ಕೊಡುಗೆ ಅಪಾರ: ಸ್ವರ್ಣವಲ್ಲೀ ಸ್ವಾಮೀಜಿ

KannadaprabhaNewsNetwork |  
Published : Mar 14, 2024, 02:01 AM IST
ಫೋಟೋ ಮಾ.೧೩ ವೈ.ಎಲ್.ಪಿ. ೦೭ | Kannada Prabha

ಸಾರಾಂಶ

ರೈತರೂ ಮತ್ತು ಎಲ್ಲ ವರ್ಗದ ಸಾರ್ವಜನಿಕರು ಸುವ್ಯವಸ್ಥಿತವಾದ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ.

ಯಲ್ಲಾಪುರ: ಉತ್ತರ ಕನ್ನಡದಲ್ಲಿನ ಸಹಕಾರ ಸಂಘಗಳು ಅತ್ಯಂತ ಸಬಲವಾಗಿದ್ದು, ಇಲ್ಲಿನ ಜನರ ಆರ್ಥಿಕ ಸುಭದ್ರತೆಗೆ ಕಾರಣವಾಗಿದೆ. ಉಳಿದ ಜಿಲ್ಲೆಗಳ ಸಹಕಾರಿ ಸಂಘಗಳಿಗೆ ಮಾದರಿಯಾಗಿದೆ ಎಂದು ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು.

ಬುಧವಾರ ತಾಲೂಕಿನ ಹಿತ್ಲಳ್ಳಿಯಲ್ಲಿ ನಿರ್ಮಿಸಿದ ಹಿತ್ಲಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ, ಸಂಘದ ಭದ್ರತಾ ಕೊಠಡಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಈ ಪ್ರದೇಶದಲ್ಲಿ ಇಷ್ಟೆಲ್ಲ ಸಹಕಾರಿ ವ್ಯವಸ್ಥೆಗಳ ಅಸ್ತಿತ್ವದ ನಡುವೆಯೂ ಇಲ್ಲಿಯವರೆಗೆ ಬಡವರೂ, ಸಾಲಗಾರರೂ, ಇರುವುದು ವಿಪರ್ಯಾಸದ ಸಂಗತಿ. ಅಂತಹ ವ್ಯಕ್ತಿಗಳು ಇನ್ನಾದರೂ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಬೇಕು. ಸುಮಾರು ೯ ದಶಕಗಳಿಗಿಂತ ಅಧಿಕ ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಹಿತ್ಲಳ್ಳಿಯ ಸೇವಾ ಸಹಕಾರಿ ಸಂಘ ಇಂದಿಗೂ ತನ್ನೊಂದಿಗೆ ತನ್ನ ಗ್ರಾಹಕರ ಹಿತರಕ್ಷಣೆಗಾಗಿ ಬದ್ಧತೆಯಿಂದ ಕಾರ್ಯ ನಿರ್ವಹಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.

ಓರ್ವ ವ್ಯಕ್ತಿ ಚಿಕಿತ್ಸೆಗಾಗಿ ವೈದ್ಯರ ಭೇಟಿ ಆದ ನಂತರ ಪುನಃ ಅದೇ ವ್ಯಕ್ತಿ ಪದೇ ಪದೇ ವೈದ್ಯರ ಭೇಟಿ ಆಗುತ್ತಿರಬಾರದು ಎಂಬುದು ನಮ್ಮೆಲ್ಲರ ಸದಾಶಯ. ಅಂತೆಯೇ ಇಲ್ಲಿನ ರೈತರೂ ಮತ್ತು ಎಲ್ಲ ವರ್ಗದ ಸಾರ್ವಜನಿಕರು ಸುವ್ಯವಸ್ಥಿತವಾದ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಇದೀಗ ನಮ್ಮ ಜಿಲ್ಲೆಯಲ್ಲಿ ದೈವಾನುಗ್ರಹದಿಂದ ಅಡಕೆಗೆ ಸ್ಥಿರವಾದ ಬೆಲೆ ದೊರಕಿ, ಅಡಕೆಗೆ ಯಾವುದೇ ಮಾರಕ ರೋಗಗಳು ಬಾಧಿಸಿಲ್ಲ ಎಂಬುದು ನಮ್ಮ ಅದೃಷ್ಟ. ಜನರೂ ತಮ್ಮ ಸಂಪಾದನೆಯ ಕೆಲ ಭಾಗವನ್ನು ದೇವತಾರಾಧನೆಗೆ ಮತ್ತು ಧಾರ್ಮಿಕತೆಯ ಕಾರ್ಯಕ್ರಮಗಳಿಗಾಗಿ ಮೀಸಲಿಡಬೇಕು ಎಂದರು.

ಈ ಸಂದರ್ಭದಲ್ಲಿ ಗಣಪತಿ ಭಟ್ಟ ಇಳೇಹಳ್ಳಿ, ಎಂ.ಬಿ. ಶೇಟ್ ಪುರದ್ಮನೆ, ಜಿ.ಎನ್. ಹೆಗಡೆ ಹಿರೇಸರ, ಶ್ರೀಪಾದ ಹೆಗಡೆ ಶಿರನಾಲಾ, ಜ್ಯೋತಿಷ್ಯಾಚಾರ್ಯ ವಿ. ನಾಗೇಂದ್ರ ಭಟ್ಟ ಹಿತ್ಲಳ್ಳಿ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ಶ್ರೀಧರ ನಾಯ್ಕ್ ನಂದಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಘ ನಡೆದು ಬಂದ ದಾರಿಯ ಬಗೆಗೆ ಆರ್.ಎನ್. ಹೆಗಡೆ ಹಿರೇಸರ, ಗಣಪತಿ ಭಟ್ಟ, ನಾಗೇಂದ್ರ ನಾಯ್ಕ್, ನರಸಿಂಹ ಭಟ್ಟ, ಅನಿಸಿಕೆ ವ್ಯಕ್ತಪಡಿಸಿದರು. ಮಾತೆಯರ ಪೂರ್ಣಕುಂಭ ಸ್ವಾಗತದೊಂದಿಗೆ ಆಗಮಿಸಿದ ಶ್ರೀಗಳನ್ನು ಸಭೆಗೆ ಬರಮಾಡಿಕೊಳ್ಳಲಾಯಿತು. ಹಿತ್ಲಳ್ಳಿಯ ಮಾತೆಯರು ಪ್ರಾರ್ಥನಾ ಗೀತೆ ಹಾಡಿ, ಭಗವದ್ಗೀತೆ ಮತ್ತು ಶಾಂಕರ ಸ್ತೋತ್ರ ಪಠಿಸಿದರು. ಅಲ್ಲದೇ ಸ್ಥಳೀಯ ಪ್ರಾಥಮಿಕ ಮತ್ತು ಅಂಗನವಾಡಿ ವಿದ್ಯಾರ್ಥಿಗಳು ವಿಷ್ಣು ಸಹಸ್ರನಾಮ ಮತ್ತು ಭಗವದ್ಗೀತೆಯನ್ನು ಪಠಿಸಿದರು.

ಶ್ರೀಗಳ ಪಾದಪೂಜೆಯನ್ನು ಸಂಘದ ಅಧ್ಯಕ್ಷ ಜಿ.ವಿ. ಹೆಗಡೆ ದಂಪತಿ ನೆರವೇರಿಸಿದರು. ಸಂಘದ ಉಪಾಧ್ಯಕ್ಷ ಗಜಾನನ ಭಟ್ಟ ಹಿತ್ಲಳ್ಳಿ ಸ್ವಾಗತಿಸಿದರು. ಅರುಣ ಭಟ್ಟ ಮತ್ತು ರವೀಂದ್ರ ನಾಯ್ಕ್ ನಿರ್ವಹಿಸಿದರು. ಆಡಳಿತ ಮಂಡಳಿ ಸದಸ್ಯ ಗಣಪತಿ ಹೆಗಡೆ ಹಿರೇಸರ ವಂದಿಸಿದರು. ಕಟ್ಟಡ ನಿರ್ಮಿಸಿದ ಶ್ಯಾಮಸುಂದರ ಭಟ್ಟ ಮತ್ತು ಕಟ್ಟಡ ವಿನ್ಯಾಸಕ ವಸಂತ ಭಟ್ಟ ದಂಪತಿಯನ್ನು ಶ್ರೀಗಳು ಸಂಘದ ಪರವಾಗಿ ಸನ್ಮಾನಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...