- ಕಸಾಪದಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ- ಸನ್ಮಾನ
ಸಾಹಿತ್ಯ ಲೋಕಕ್ಕೆ ಜಾನಪದದ ಕೊಡುಗೆ ಅಪಾರವಾಗಿದೆ ಎಂದು ತಾಲೂಕು ಕಸಾಪ ಕೋಶಾಧ್ಯಕ್ಷ ಕೆ.ಎಸ್. ರಾಜಕುಮಾರ್ ಹೇಳಿದರು.
ರೋಟರಿ ಹಾಲ್‌ನಲ್ಲಿ ಸೋಮವಾರ ರಾತ್ರಿ ನಡೆದ ಖಂಡೋಜಿ ಗಣಪತಿ ಮತ್ತು ಸಹೋದರರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತ್ಯ ಲೋಕಕ್ಕೆ ಜಾನಪದದ ಕೊಡುಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಹಿಂದೆ ಸಂಬಂಧ ಗಳಿಗೆ ಬೆಲೆಯಿತ್ತು. ಸಂಬಂಧಗಳು ಒಂದಕ್ಕೊಂದು ಬೆಸುಗೆಯಾಗಿದ್ದವು. ಅಣ್ಣ, ತಂಗಿ, ತಾಯಿ, ತಂದೆ ಸಂಬಂಧಗಳಿಗೆ ಬಹಳ ಗೌರವವಿತ್ತು. ಕನ್ನಡ ಜಾನಪದ ಸಾಹಿತ್ಯದಲ್ಲಿ ಇಂತಹ ಸಂಬಂಧಗಳ ಬಗ್ಗೆ ಸುಂದರವಾಗಿ ವರ್ಣನೆ ಮಾಡಲಾಗಿದೆ. ಜಾನಪದ ಸಾಹಿತ್ಯ ಲೋಕಕ್ಕೆ ವರದಾನವಾಗಿದೆ. ಜಾನಪದದಿಂದ ಸಾಹಿತ್ಯ ಲೋಕಕ್ಕೆ ಹೆಚ್ಚು ಮೆರುಗು ಬಂದಿದೆ. ಗಂಡನಿಲ್ಲದ ಹೆಣ್ಣಿನ ಬಾಳು, ತಾಯಿ ಇಲ್ಲದ ತವರಿನ ಬಗ್ಗೆ ಜಾನಪದದಲ್ಲಿ ಮಾಡಿರುವ ವರ್ಣನೆ ಅದ್ಭುತವಾಗಿದೆ ಎಂದರು.ಕಸಾಪ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಆಶಯ ಭಾಷಣ ಮಾಡಿ, ದತ್ತಿ ದಾನಿಗಳು ಸಾಹಿತ್ಯ ಪರಿಷತ್ತಿನ ಆಸ್ತಿಗಳು. ಜಾನಪದ ಸಾಹಿತ್ಯ ಹಾಗೂ ಕುವೆಂಪು ಅವರ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದತ್ತಿ ದಾನಿಗಳಿಂದ ಕಸಾಪ ಹಿಂದಿನಿಂದಲೂ 30ಕ್ಕೂ ಅಧಿಕ ದತ್ತಿ ಉಪನ್ಯಾಸಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.
ಕಸಬಾ ಹೋಬಳಿ ಘಟಕದ ಅಧ್ಯಕ್ಷೆ ಜುಬೇದಾ ಮಾತನಾಡಿ, ದತ್ತಿ ಉಪನ್ಯಾಸಗಳಲ್ಲಿ ನೀಡಿರುವ ವಿಷಯಗಳು ಅತ್ಯಂತ ಅರ್ಥಗರ್ಭಿತ ಹಾಗೂ ಕಾಲಕ್ಕೆ ತಕ್ಕಂತಹ ವಿಷಯಗಳಾಗಿವೆ. ತಾಲೂಕು ಕಸಾಪ ನಮ್ಮ ಜಿಲ್ಲೆಯಲ್ಲಿಯೇ ಮಾದರಿ ಘಟಕವಾಗಿ ಹೊರಹೊಮ್ಮುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಕರಾಟೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಯಾಸೀನ್ ಅಹಮ್ಮದ್, ಬಿಂದುಸಾರ ಹಾಗೂ ಶಿಕ್ಷಣ ಇಲಾಖೆ ವಿಜಯಕುಮಾರ್, ಎಂ.ಜಯಣ್ಣ, ಎಸ್.ಜಿ.ರಾಜಾನಾಯ್ಕ ಹಾಗೂ ದತ್ತಿ ದಾನಿಗಳಾದ ಕೆ.ಗಣಪತಿ ಅವರನ್ನು ಗೌರವಿಸಲಾಯಿತು.