ಚಿತ್ರದುರ್ಗ: ವಚನ ಚಳುವಳಿ ಒಂದರ್ಥದಲ್ಲಿ ಮಾದಿಗರ ಚಳುವಳಿಯೇ ಆಗಿತ್ತು. ಮಾದರ ಚೆನ್ನಯ್ಯ, ಸಮಗಾರ ಅರಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗಪೆದ್ದಿ, ಮರುಳ ಸಿದ್ದರು ಮುಂತಾದ ಮಾದಿಗ ಸಮುದಾಯದ ದೊಡ್ಡ ಪರಂಪರೆ ಇರುವುದೇ ಇದಕ್ಕೆ ಸಾಕ್ಷಿ ಎಂದು ಪ್ರೊ.ಲಿಂಗಪ್ಪ ಹೇಳಿದರು.
ನಗರದ ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‌ವತಿಯಿಂದ ಹಮ್ಮಿಕೊಂಡಿದ್ದ ಪ್ರೊ.ಅಂಜನಪ್ಪ ಅವರ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಜಿನಪ್ಪ ಅವರು ವಚನಗಳನ್ನು ಭಿನ್ನವಾಗಿ ವ್ಯಾಖ್ಯಾನಿಸುತ್ತಿದ್ದರು. ಆ ಮಟ್ಟದ ಬೌದ್ಧಿಕ ಶಕ್ತಿ ಅವರದಾಗಿತ್ತು. ಸಾಹಿತ್ಯ ಬಗೆಗಿನ ಅವರ ಅಧ್ಯಯನ ವಿಶೇಷವಾಗಿತ್ತು. ಭಾಷೆಯಲ್ಲಿ ಪ್ರಭುತ್ವ ಸಂಪಾದಿಸಿದ ಮಾದಿಗ ಜನಾಂಗದ ಅತ್ಯಂತ ಪ್ರಮುಖ ನಾಯಕ. ಅವರ ಸಾಹಿತ್ಯವನ್ನು ಎಲ್ಲರೂ ಅಧ್ಯಯನ ಮಾಡಬೇಕು ಎಂದರು.ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ಅಂಜಿನಪ್ಪ ಅವರು ದೈತ್ಯ ಪ್ರತಿಭೆ. ನೇರ ಮತ್ತು ನಿಷ್ಟುರವಾದಿ. ಬಹಳಷ್ಟು ಸಂದರ್ಭದಲ್ಲಿ ಟೀಕೆ ಮಾಡುತ್ತಿದ್ದರು. ಇಂತದ್ದೊಂದು ಪ್ರತಿಭೆ ಈ ಪರಿಸರದಲ್ಲಿ ಹುಟ್ಟಿದ್ದು, ಮಹತ್ವದ್ದು. ಒಂದು ಸಣ್ಣ ಕಾಯಿಲೆ ಅವರ ಜೀವವನ್ನೇ ಬಲಿತೆಗೆದುಕೊಂಡದ್ದು ಅತ್ಯಂತ ನೋವಿನ ಸಂಗತಿ ಎಂದರು.
ಸಾಹಿತಿ ಪ್ರೊ.ಶಿವಲಿಂಗಪ್ಪ ಮಾತನಾಡಿ, ಕೃತಿ ವಿಮರ್ಶೆ ಮಾಡಲು ಅಗಾಧ ಪ್ರತಿಭೆ ಬೇಕು. ಅಂತಹ ದೈತ್ಯ ಪ್ರತಿಭಾ ಶಕ್ತಿ ಅಂಜಿನಪ್ಪ ಅವರಲ್ಲಿತ್ತು. ಅವರು ಸಾಕಷ್ಟು ಬೇರೆ-ಬೇರೆ ಕೃತಿಗಳು ಬರೆದಿದ್ದಾರೆ. ಆದರೆ ಅವರಲ್ಲಿನ ಆಲೋಚನೆ, ಚಿಂತನೆ, ವಿರ್ಮಶಾತ್ಮಕ ದೃಷ್ಟಿಕೋನ, ವಿಚಾರ ಧಾರೆಗಳು, ಸಾಹಿತ್ಯಾಸಕ್ತಿ ಮುಂತಾದವುಗಳನ್ನು ಇಟ್ಟುಕೊಂಡು ಅವರ ಬಗ್ಗೆಯೇ ಒಂದು ಕೃತಿ ರಚನೆ ಆಗಬೇಕು ಎಂದರು.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಮಾತನಾಡಿ, ಇತ್ತೀಚಿನ ದಲಿತ ಯುವಪೀಳಿಗೆಯಲ್ಲಿ ಅಂಜಿನಪ್ಪ ಆಗ್ರಗಣ್ಯರು. ಅಳವಾದ ಅಧ್ಯಯನ, ಕಟುವಿಮರ್ಶೆ, ವಿಚಾರಗಳ ಭಿನ್ನತೆಯೊಂದಿಗೆ ರಾಜೀ ಮಾಡಿಕೊಳ್ಳದ ಮನಸ್ಥಿತಿಯುಳ್ಳ ವ್ಯಕ್ತಿತ್ವ ಉಳ್ಳವರಾಗಿದ್ದರು. ಅವರ ಸಾಮರ್ಥ್ಯವನ್ನು ಗುರುತಿಸಿ, ಸಮಾಜದ ಸಾಂಸ್ಕೃತಿಕ ಅಭಿವ್ಯಕ್ತಿಗಳನ್ನು ದಾಖಲಿಸುವಲ್ಲಿ ಅವರನ್ನು ಬಳಸಿಕೊಳ್ಳದಿರುವುದು ದೌರ್ಭಾಗ್ಯವೆಂದರು.
ಹಿತ್ತಲಗಿಡ ಮದ್ದಲವೆಂಬಂತೆ ಅವರ ನಿಷ್ಠುರ ನಡೆ ಬಹುತೇಕರನ್ನು ಅವರಿಂದ ದೂರ ಮಾಡಿತ್ತು. ದಲಿತ ಚಳುವಳಿಯ ಹಿರಿಯ ನಾಯಕ ಎಂ.ಜಯಣ್ಣ ಅವರ ದಾಖಲೆಗಳ ಕೃತಿ ಹೊರತರುವ ಪ್ರಯತ್ನ ಅರ್ಧಕ್ಕೆ ನಿಂತದ್ದು, ನೋವಿನ ಸಂಗತಿ. ಜಯಣ್ಣನವರ ಸಾಧನೆಯ ಕೃತಿ ಜತೆಗೆ ಡಿ.ಅಂದಜಿನಪ್ಪನವರ ಅಪ್ರಕಟಿತ ಬರಹಗಳು ಹೊರತರುವ ಕಾರ್ಯವಾಗಬೇಕಿದೆ ಎಂದರು.ಸಾಹಿತಿ ಪ್ರೊ.ಪರಮೇಶ್ವರಪ್ಪ, ಬಿ.ಪಿ.ಪ್ರೇಮನಾಥ್, ಜಿಲ್ಲಾ ಸ್ಕೌಟ್ ಆಂಡ್ ಗೈಡ್ಸ್ ಪ್ರಾಂಶುಪಾಲ ಮಂಜಪ್ಪ, ಪ್ರೊ.ಎಲ್.ನಾಗರಾಜ್, ಭೀಮನಕೆರೆ ತಿಪ್ಪೇಸ್ವಾಮಿ ಮಾತನಾಡಿದರು. ಉಪನ್ಯಾಸಕ ಈ.ನಾಗೇಂದ್ರಪ್ಪ ಸ್ವಾಗತಿಸಿದರು. ಬನ್ನಿಕೋಡ್ ರಮೇಶ್, ಶಿಕ್ಷಕಿ ಶಕುಂತಲಮ್ಮ, ಗಿರಿಜಾ, ಶಾಂತಮ್ಮ, ನಾಗೇಂದ್ರಪ್ಪ ಇದ್ದರು.