- ಬೀರೂರು ಪಟ್ಟಣಕ್ಕೆ ಆಗಮಿಸಿದ ‘ ಸಂವಿಧಾನ ಜಾಗೃತಿ ರಥ ಯಾತ್ರೆಗೆ ಅದ್ಧೂರಿ ಸ್ವಾಗತ
ಪ್ರತಿಯೊಬ್ಬರು ದೇಶದ ಸಂವಿಧಾನದ ಶ್ರೇಷ್ಠತೆ ಹಾಗೂ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು. ಸಂವಿಧಾನ ಅರಿಯಲು ಜಾಗೃತಿ ಜಾಥಾ ಸಹಕಾರಿ ಎಂದು ತರೀಕೆರೆ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಕೆ.ಜೆ.ಕಾಂತರಾಜ್ ಹೇಳಿದರು.
ಬಳ್ಳಿಗನೂರು ಮಾರ್ಗವಾಗಿ ಬೀರೂರು ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ರಥ ಯಾತ್ರೆ ಮಾರ್ಗದ ಕ್ಯಾಂಪಿನ ಮಹಾತ್ಮ ಗಾಂಧಿ ಉದ್ಯಾನವನ ಮುಂಭಾಗ ಬಂದಾಗ ತಾಲೂಕು ಆಡಳಿತ ಹಾಗೂ ಪುರಸಭೆ ಮತ್ತು ನಾಗರಿಕರೊಂದಿಗೆ ಸೇರಿ ಅವರು ಪುಷ್ಪಾರ್ಚನೆ ಮಾಡಿ ಮಾತನಾಡಿದರು.ಜಗತ್ತಿನ 192 ದೇಶಗಳಲ್ಲಿ ಎಲ್ಲಾ ಸಂವಿಧಾನ ಅವಲೋಕನ ಮಾಡಿದಾಗ ಬಹು ದೊಡ್ಡ ಲಿಖಿತ ಸಂವಿಧಾನ ನಮ್ಮದಾಗಿದೆ. ಸಂವಿಧಾನ ಸಮಾನತೆ, ಭಾತೃತ್ವ, ರಾಷ್ಟ್ರೀಯತೆ, ಏಕತೆ ತರುವಲ್ಲಿ ತನ್ನದೆ ಆದ ಪಾತ್ರ ವಹಿಸಿದೆ. ಸಂವಿಧಾನದ ಕರ್ತವ್ಯಗಳನ್ನು ಬರಿ ಓದಿಗಷ್ಟೆ ಸೀಮಿತವಾಗಿಸದೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಕೀಲ ತಿಪ್ಪೇಶ್ ಮಾತನಾಡಿ, ಸಮಾನತೆ, ಮಾನವತಾವಾದ, ಸಮಾಜವಾದ ಹಾಗೂ ಧರ್ಮ ನಿರಪೇಕ್ಷಗಳಂಥ ಮೌಲ್ಯ ಗಳನ್ನು ಜನರಿಗೆ ಸಂವಿಧಾನ ಕೊಡುಗೆಯಾಗಿ ನೀಡಿದೆ. ಇಂತಹ ಪವಿತ್ರ ಸಂವಿಧಾನ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಮರ್ಪಿಸಿರುವುದು ಸ್ಮರಣೀಯ. ಭಾರತದ ಸಂವಿಧಾನ 5 ಪ್ರಮುಖ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಏಕತೆ, ಕಲ್ಪಿಸಿ ವಿಶ್ವದಲ್ಲಿಯೇ ವಿಶೇಷ ಸ್ಥಾನ ಸ್ಥಾನ ಹೊಂದಿದೆ ಎಂದರು.
ಪುರಸಭೆ ನೂರಾರು ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಜಾಥ ಆಗಮಿಸುತ್ತಿದಂತೆ ಪೂರ್ಣಕುಂಭ ಸ್ವಾಗತ ಕೋರಿದರು. ಪಟ್ಟಣದ ಮಹಾತ್ಮಗಾಂಧಿ ವೃತ್ತದಿಂದ ಅಂಬೇಡ್ಕರ್ ಪ್ರತಿಮೆಯವರೆಗೂ ಮೆರವಣಿಗೆ ನಡೆಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಮೇಣದ ಬತ್ತಿ ಹಚ್ಚಿ ವಿವಿಧ ಕಲಾ ತಂಡಗಳೊಂದಿಗೆ ಸಾಗಿದರು.
ಬೀರೂರು ಪಟ್ಟಣಕ್ಕೆ ಮಂಗಳವಾರ ಸಂಜೆ ಆಗಮಿಸಿದ್ದ ಸಂವಿಧಾನ ಜಾಗೃತಿ ರಥಾ ಯಾತ್ರೆಯನ್ನು ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್, ತಹಶೀಲ್ದಾರ್ ಕವಿರಾಜ್, ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ಸ್ವಾಗತ ಕೋರಿ ಪುಷ್ಪಾರ್ಚನೆ ಮಾಡಿದರು.