ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಮಂಡ್ಯಭ್ರಷ್ಟಾಚಾರದಿಂದ ನಷ್ಟದ ಕೂಪಕ್ಕೆ ಸಿಲುಕಿ ಮತ್ತೊಂದು ಬ್ಯಾಂಕ್‌ನೊಂದಿಗೆ ವಿಲೀನಗೊಳ್ಳುವುದಕ್ಕೆ ಹೆಜ್ಜೆ ಇಟ್ಟಿರುವ ಲೋಕಪಾವನಿ ಮಹಿಳಾ ಸಹಕಾರ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಮತ್ತೆ ಚುನಾವಣೆ ಎದುರಾಗಿದೆ. ಜಿಲ್ಲೆಯ ಏಕೈಕ ಮಹಿಳಾ ಸಹಕಾರಿ ಬ್ಯಾಂಕ್ ಚುನಾವಣಾ ಪ್ರಕ್ರಿಯೆ ಬಿರುಸುಗೊಂಡಿದೆ. ನಾರಿಮಣಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಚುನಾವಣಾ ಅಖಾಡ ರಂಗೇರಿದೆ.
ಬ್ಯಾಂಕ್‌ನಲ್ಲಿ ಒಟ್ಟು ೧೭ ನಿರ್ದೇಶಕ ಸ್ಥಾನಗಳಿದ್ದು, ಈ ಪೈಕಿ ಮಂಡ್ಯ ತಾಲೂಕು ವ್ಯಾಪ್ತಿಯಲ್ಲಿ ಏಳು ನಿರ್ದೇಶಕ ಸ್ಥಾನ ಹಾಗೂ ಆರು ತಾಲೂಕುಗಳಿಂದ ತಲಾ ಒಂದೊಂದು ನಿರ್ದೇಶಕ ಸ್ಥಾನ ಹಾಗೂ ಎಸ್‌ಸಿ-ಎಸ್‌ಟಿ, ೨ಎ, ೨ಬಿಗೆ ತಲಾ ಒಂದೊಂದು ಸ್ಥಾನ ಹಂಚಿಕೆಯಾಗಿದೆ.ಮಂಡ್ಯ ತಾಲೂಕಿನಿಂದ ಏಳು ನಿರ್ದೇಶಕ ಸ್ಥಾನಗಳಿಗೆ ಒಟ್ಟು ೧೩ ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಅಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಗೆಲುವಿಗೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಪ್ರಭಾವಿ ಮಹಿಳೆಯರು ಗೆಲುವಿಗಾಗಿ ಸದ್ದಿಲ್ಲದೆ ತೆರೆಮರೆ ಕಸರತ್ತು ನಡೆಸುತ್ತಿದ್ದಾರೆ.
ಮಂಡ್ಯ ತಾಲೂಕಿನಲ್ಲೇ ತೀವ್ರ ಪೈಪೋಟಿ:ಮಂಡ್ಯ ತಾಲೂಕಿನಿಂದ ಸಿ.ಜೆ.ಸುಜಾತ (ಸುಜಾತ ಕೃಷ್ಣ), ಕೆ.ಸಿ.ನಾಗಮ್ಮ, ಹಾಲಿ ಅಧ್ಯಕ್ಷೆ ಉಷಾ ಚೈತನ್ಯಕುಮಾರ್, ಎಚ್.ಟಿ.ಕವಿತಾ, ಎಚ್.ಟಿ ತುಳಸಿ, ಎಂ.ಬಿ.ಕಮಲಮ್ಮ, ಪುಟ್ಟಗೌರಮ್ಮ, ಎ.ಜೆ.ವತ್ಸಲ ಪ್ರಕಾಶ್, ಕೆ.ಹೇಮಲತಾ, ರತ್ನಶ್ರೀ, ಶಿಲ್ಪ, ಎಸ್.ಚೇತನ ಸ್ಪರ್ಧೆಗಿಳಿದಿದ್ದಾರೆ. ಉಳಿದಂತೆ ಹಿಂದುಳಿದ ವರ್ಗ- ಎ ಅಭ್ಯರ್ಥಿಯಾಗಿ ಎಂ.ಬಿ.ಶಕುಂತಲಾ ಹಾಗೂ ಎಚ್.ಸಿ.ಸವಿತಾ, ಪರಿಶಿಷ್ಟ ಜಾತಿಯಿಂದ ಜ್ಯೋತಿ, ಎಂ.ಎಸ್.ಸುಜಾತ ಮಣಿ ಹಾಗೂ ಮಮತಾ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಐದು ಸ್ಥಾನಗಳಿಗೆ ತಲಾ ಒಬ್ಬರೇ ಅಭ್ಯರ್ಥಿ:ಮಳವಳ್ಳಿ ತಾಲೂಕಿನ ಒಂದು ಸ್ಥಾನಕ್ಕೆ ಬಿ.ಎಸ್.ಲೀಲಾವತಮ್ಮಣಿ, ಮದ್ದೂರು ತಾಲೂಕಿನಿಂದ ಎನ್.ಎ.ರೇಣುಕಾ, ನಾಗಮಂಗಲ ತಾಲೂಕಿನಿಂದ ಕೆ.ಎಸ್.ಪುಷ್ಪ ರಾಮೇಗೌಡ, ಕೆ.ಆರ್.ಪೇಟೆ ಕ್ಷೇತ್ರದಿಂದ ಅನುರಾಧ ಸೇರಿದಂತೆ ಇರುವ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಕ್ಕೆ ಕೆ.ಶ್ವೇತಾ ಒಬ್ಬರೇ ಅರ್ಜಿ ಸಲ್ಲಿಸಿರುವುದರಿಂದ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಈ ಐದು ನಿರ್ದೇಶಕ ಸ್ಥಾನಗಳಿಗೆ ಬಹುತೇಕ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ. ೪೬೦೦ ಸದಸ್ಯರು, ೩೪೦ ಜನ ಮತದಾರರು: ಸದಸ್ಯರ ಆಕ್ರೋಶ
ಲೋಕಪಾವನಿ ಮಹಿಳಾ ಸಹಕಾರಿ ಬ್ಯಾಂಕ್‌ನಲ್ಲಿ ಒಟ್ಟು ೪೬೦೦ ಸದಸ್ಯರಿದ್ದಾರೆ. ಇವರಲ್ಲಿ ವಿವಿಧ ಕಾರಣಗಳಿಂದ ಸಾಕಷ್ಟು ಸದಸ್ಯರನ್ನು ಮತದಾರರಿಂದ ಅನರ್ಹರನ್ನಾಗಿ ಮಾಡಲಾಗಿದೆ ಎಂಬ ಆರೋಪವಿದೆ. ಸಹಜವಾಗಿ ಇದು ಸದಸ್ಯರನ್ನು ಕೆರಳುವಂತೆ ಮಾಡಿದೆ. ಕೇವಲ ೩೪೦ ಸದಸ್ಯರಿಗೆ ಮಾತ್ರ ಮತ ಚಲಾಯಿಸಲು ಅವಕಾಶ ಕೊಟ್ಟಿರುವುದರ ಹಿಂದೆ ಆಡಳಿತ ಮಂಡಳಿಯ ಕೈವಾಡವಿದೆ ಎಂಬ ಆರೋಪವೂ ಬಲವಾಗಿ ಕೇಳಿಬರುತ್ತಿದೆ.ಈ ಬ್ಯಾಂಕ್ ೧೯೯೭ರಲ್ಲಿ ಪ್ರಾರಂಭಗೊಂಡು ೨೦೦೮ ರವರೆಗೂ ಚೆನ್ನಾಗಿಯೇ ನಡೆಯುತ್ತಿತ್ತು. ನಂತರ ಅಧಿಕಾರಕ್ಕೆ ಬಂದ ಆಡಳಿತ ಮಂಡಳಿಗಳು ನಡೆಸಿದ ಅವ್ಯವಹಾರ ಹಾಗೂ ಭ್ರಷ್ಟಾಚಾರದಿಂದ ಬ್ಯಾಂಕ್ ಹಳಿ ತಪ್ಪಿತ್ತು. ಅಲ್ಲಿಂದ ಬ್ಯಾಂಕ್ ಕುಂಟುತ್ತಾ ತೆವಳುತ್ತಾ ಸಾಗಿತ್ತು. ಈ ನಡುವೆ ಹಾಲಿ ಇದ್ದ ಆಡಳಿತ ಮಂಡಳಿ ಲೋಕಪಾವನಿ ಬ್ಯಾಂಕ್ ನಷ್ಟದಲ್ಲಿದೆ. ಹಾಗಾಗಿ ಈ ಬ್ಯಾಂಕ್‌ನ್ನು ಬೆಂಗಳೂರಿನ ವಿಕಾಸ ಸೌಹಾರ್ದ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವ ಹುನ್ನಾರ ನಡೆಸಲಾಗಿತ್ತು. ವಿಲೀನವನ್ನು ಪ್ರಶ್ನಿಸಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಸುಜಾತ ಕೃಷ್ಣ ಹಾಗೂ ಜಯಶೀಲಮ್ಮ ಅವರ ಸದಸ್ಯತ್ವವನ್ನು ಹಿಂದಿನ ಆಡಳಿತ ಮಂಡಳಿ ವಜಾಗೊಳಿಸಿತ್ತು. ನಂತರ ಇಬ್ಬರು ನ್ಯಾಯಾಲಯ ಮೊರೆ ಹೋಗಿ ಸದಸ್ಯತ್ವವನ್ನು ಮರಳಿ ಪಡೆದಿದ್ದರು. ಬಳಿಕ ಇತರೆ ಕೆಲವು ಸದಸ್ಯರು ಬ್ಯಾಂಕ್ ವಿಲೀನವನ್ನು ವಿರೋಧಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಈ ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದೆ. ಈ ನಡುವೆ ಚುನಾವಣೆ ಘೋಷಣೆಯಾಗಿರುವುದು ಸದಸ್ಯರಲ್ಲಿ ಕೌತುಕ ಹಾಗೂ ಆತಂಕವನ್ನು ಹುಟ್ಟು ಹಾಕಿದೆ.
ಹಾಲಿ ಅಧ್ಯಕ್ಷರು ಹಾಗೂ ನಿರ್ದೇಶಕರು ಎರಡು-ಮೂರು ಬಾರಿ ನಿರ್ದೇಶಕರಾಗಿ ಆಡಳಿತ ನಡೆಸಿ ಬ್ಯಾಂಕನ್ನು ನಷ್ಟಕ್ಕೂ ದೂಡಿದರೂ ಸಹ ಮತ್ತೆ ಮರು ಆಯ್ಕೆಗೆ ನಾಮಪತ್ರ ಸಲ್ಲಿಸಿರುವುದು ಎಷ್ಟು ಸರಿ ಎಂಬುದು ಸದಸ್ಯರ ಪ್ರಶ್ನೆಯಾಗಿದೆ.ಫೆ.೧೬ರಂದು ಚುನಾವಣೆಲೋಕಪಾವನಿ ಮಹಿಳಾ ಬ್ಯಾಂಕ್ ಮುಂದಿನ ಐದು ವರ್ಷಗಳ ಅವಧಿಗೆ ಫೆ.೧೬ ರಂದು ಚುನಾವಣೆ ನಿಗದಿಯಾಗಿದೆ. ಉಮೇದುವಾರಿಕೆ ಸಲ್ಲಿಸಲು ಫೆ.೮ ಕೊನೆಯ ದಿನವಾಗಿದೆ. ಫೆ.೯ ರಂದು ನಾಮಪತ್ರ ಪರಿಶೀಲನೆ, ಫೆ.೯ ನಾಮಪತ್ರ ವಾಪಸ್‌ಗೆ ಕಡೇ ದಿನ. ಫೆ.೧೬ ರಂದು ಚುನಾವಣೆ ನಡೆಯಲಿದ್ದು, ಅಂದೇ ಮತ ಎಣಿಕೆ ಪ್ರಕ್ರಿಯೆ ನಡೆದು ಫಲಿತಾಂಶ ಹೊರಬೀಳಲಿದೆ. ಬ್ಯಾಂಕಿನಲ್ಲಿ ನಡೆದ ಅವ್ಯವಹಾರವೇನು?
ಲೋಕಪಾವನಿ ಮಹಿಳಾ ಬ್ಯಾಂಕ್‌ನ ೨೦೦೮-೦೯ನೇ ಸಾಲಿನ ಆಡಳಿತ ಮಂಡಳಿ ಕೇಂದ್ರ ಸರ್ಕಾರದ ಕೃಷಿ ಸಾಲಮನ್ನಾ ಯೋಜನೆ ಮೂಲಕ ೮೨ ಲಕ್ಷ ರು. ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿಬಂದಿತ್ತು. ಬ್ಯಾಂಕ್‌ನಲ್ಲಿ ನಡೆದಿರುವ ಹಣ ದುರುಪಯೋಗವನ್ನು ಲೆಕ್ಕ ಪರಿಶೋಧಕರು ಹಾಗೂ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಪತ್ತೆ ಹಚ್ಚಿ ಅಕ್ರಮವಾಗಿ ಪಡೆದಿದ್ದ ಹಣವನ್ನು ತಕ್ಷಣ ವಾಪಸ್ ಮಾಡುವಂತೆ ಆಡಳಿತ ಮಂಡಳಿಗೆ ಸೂಚಿಸಿತ್ತು. ಇದರಿಂದ ಆತಂಕಗೊಂಡ ಆಡಳಿತ ಮಂಡಳಿ ನಿರ್ದೇಶಕರು ಸಾರ್ವಜನಿಕರ ಠೇವಣಿ ಹಣವನ್ನು ರಿಸರ್ವ್ ಬ್ಯಾಂಕ್‌ಗೆ ಪಾವತಿ ಮಾಡಿದ್ದರು. ೨೪೭ ಮಂದಿಗೆ ೨೦ ಸಾವಿರ ರು.ನಿಂದ ೫೦ ಸಾವಿರ ರು.ವರೆಗೆ ಸಾಲ ನೀಡಿರುವ ಆಡಳಿತ ಮಂಡಳಿ ಅವರಿಂದ ಒಂದು ನಯಾ ಪೈಸೆಯನ್ನೂ ವಸೂಲಿ ಮಾಡಿಲ್ಲ. ಸುಸ್ತಿದಾರರಿಂದ ಹಣ ಪಾವತಿಸುವಂತೆ ನೋಟಿಸ್ ನೀಡಿದ್ದರೂ ಸಹ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿತ್ತು.ಜಿಲ್ಲೆಯ ಏಕೈಕ ಮಹಿಳಾ ಸಹಕಾರಿ ಬ್ಯಾಂಕ್ ಉಳಿವಿಗೆ ಸತತವಾಗಿ ಹೋರಾಟ ನಡೆಸಿದ್ದೇವೆ. ಬ್ಯಾಂಕ್ ಉಳಿಸುವ ಸಲುವಾಗಿ ಸಿಂಡಿಕೇಟ್ ಮಾಡಿಕೊಂಡು ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡುತ್ತಿದ್ದೇವೆ. ನಮ್ಮನ್ನು ಅರ್ಹ ಮತದಾರರ ಪಟ್ಟಿಯಿಂದ ಕೈ ಬಿಡಲಾಗಿತ್ತು. ಕಾನೂನು ಹೋರಾಟ ಮಾಡಿ ಸ್ಪರ್ಧೆ ಮಾಡುತ್ತಿದ್ದೇವೆ. ಬ್ಯಾಂಕ್ ಯಾವುದೇ ಕಾರಣಕ್ಕೂ ವಿಲೀನವಾಗಲು ಬಿಡುವುದಿಲ್ಲ. ವದಂತಿಗಳಿಗೆ ಸದಸ್ಯರು ಕಿವಿಗೊಡಬೇಡಿ. ಹೋರಾಟ ಮಾಡಿ ಈ ಬ್ಯಾಂಕ್ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
- ಸುಜಾತ ಕೃಷ್ಣ, ಸದಸ್ಯರು, ಲೋಕಪಾವನಿ ಮಹಿಳಾ ಬ್ಯಾಂಕ್