ದೇಶಾಭಿಮಾನದೊಂದಿಗೆ ದೇಶ ಸಂರಕ್ಷಣೆಗೆ ಸಹಕರಿಸಿ- ಧನಂಜಯ ಮಾಲಗತ್ತಿ

KannadaprabhaNewsNetwork |  
Published : Jan 27, 2024, 01:17 AM IST
ಮುಂಡರಗಿಯಲ್ಲಿ 75ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ತಹಸೀಲ್ದಾರ ಧನಂಜಯ ಮಾಲಗತ್ತಿ ಮಾತನಾಡಿದರು. | Kannada Prabha

ಸಾರಾಂಶ

ಭಾರತ ಶಾಂತಿ ಹಾಗೂ ಸೌಹಾರ್ದತೆಗೆ ಹೆಸರಾದ ದೇಶ. ಈ ದೇಶದಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ದೇಶಾಭಿಮಾನದೊಂದಿಗೆ ದೇಶ ಸಂರಕ್ಷಣೆಗೆ ಸಹಕರಿಸಬೇಕು ಎಂದು ತಹಸೀಲ್ದಾರ್ ಧನಂಜಯ ಮಾಲಗತ್ತಿ ಹೇಳಿದರು.

ಮುಂಡರಗಿ: ಭಾರತ ಶಾಂತಿ ಹಾಗೂ ಸೌಹಾರ್ದತೆಗೆ ಹೆಸರಾದ ದೇಶ. ಈ ದೇಶದಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ದೇಶಾಭಿಮಾನದೊಂದಿಗೆ ದೇಶ ಸಂರಕ್ಷಣೆಗೆ ಸಹಕರಿಸಬೇಕು ಎಂದು ತಹಸೀಲ್ದಾರ್ ಧನಂಜಯ ಮಾಲಗತ್ತಿ ಹೇಳಿದರು. ಅವರು ಪಟ್ಟಣದ ಅನ್ನದಾನೀಶ್ವರ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಜರುಗಿದ 75ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಐಕ್ಯತೆ ನಮ್ಮ ಉಸಿರಾಗಬೇಕು. ಯುವ ಶಕ್ತಿ ದೇಶ ಶಕ್ತಿಯಾಗಿದ್ದು, ಪ್ರತಿಯೊಬ್ಬರೂ ಉನ್ನತ ಆಲೋಚನೆ ಹಾಗೂ ಮಹೋನ್ನತ ಕನಸುಗಳೊಂದಿಗೆ ಉನ್ನತ ಶಿಕ್ಷಣ ಪೊರೈಸಿ ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇರಿಸಬೇಕಾಗಿದೆ ಎಂದರು. ದೇಶದ ಸರ್ವ ಜನರ ಅಭಿವೃದ್ಧಿಗೆ ಶಾಂತಿ ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ಏಳಿಗೆಗಾಗಿ ರಚನೆಗೊಂಡ ನಮ್ಮ ಸಂವಿಧಾನ ಯಾವುದೇ ದೇಶದ ಲಿಖಿತ ಸಂವಿಧಾನಕ್ಕಿಂತ ದೀರ್ಘವಾದುದು ಮತ್ತು ಸಮಗ್ರವಾದುದು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ನಾವಿಂದು ಸಶಕ್ತರಾಗಿ ಪ್ರತಿಯೊಬ್ಬರೂ ಸ್ವಾವಲಂಬಿಗಳಾಗಿ ಬೆಳೆಯಲು ಕೌಶಲ್ಯಾಭಿವೃದ್ಧಿಯೊಂದಿಗೆ ಕುಶಲಿಗಳಾಗಿ ಬೆಳೆಯುವತ್ತ ಬದ್ಧತೆ ತೋರಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಕಾರ್ಯಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತ ಎಲ್ಲರೂ ಒಗ್ಗೂಡಿ ಕಾರ್ಯ ಮಾಡಬೇಕು ಎಂದರು.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಅತ್ಯುನ್ನತವಾದುದು. ಅಂತೆಯೇ ನಾವೆಲ್ಲರೂ ವಿಭಿನ್ನ ಜಾತಿ, ಧರ್ಮ, ಭಾಷೆ ಇದ್ದರೂ ಸಹ ಎಲ್ಲರೂ ಒಗ್ಗಟ್ಟಿನಿಂದ ಬದುಕುತ್ತಿದ್ದೇವೆ. ಇದಕ್ಕೆಲ್ಲ ಕಾರಣವೇ ನಮ್ಮ ಸಂವಿಧಾನ. ಉತ್ತಮ ಸಂಸ್ಕಾರ ಹಾಗೂ ಸಂಸ್ಕೃತಿ, ಸಹಬಾಳ್ವೆ, ಸಹೋದರತ್ವ ಮುಂತಾದ ಮೂಲ ಮಂತ್ರಗಳನ್ನು ನಮ್ಮ ಸಂವಿಧಾನದಿಂದ ಕಲಿಯುತ್ತಿದ್ದೇವೆ, ಸಂವಿಧಾನದ ಆಶಯದ ಅನುಪಾಲನೆ ಮಾಡುತ್ತಾ ಸಾಮಾಜಿಕ ನ್ಯಾಯದತ್ತ ಸರ್ವರೂ ಸಾಗೋಣ. ಸಂವಿಧಾನ ಆಶಯಗಳನ್ನು ಹಾಗೂ ಸಾರ್ವಭೌಮತ್ವವನ್ನು ಎತ್ತಿ ಹಿಡಿಯೋಣ ಎಂದರು. ಪ್ರೊ. ಎ.ವೈ. ನವಲಗುಂದ ಉಪನ್ಯಾಸ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರಾರಂಭದಲ್ಲಿ ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಪಟ್ಟಣದ ವಿವಿಧ ಶಾಲಾ-ಕಾಲೇಜು ಎನ್.ಸಿ.ಸಿ. ಎನ್.ಎಸ್.ಎಸ್. ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಸೇರಿದಂತೆ ವಿವಿಧ ವಿದ್ಯಾರ್ಥಿಗಳಿಂದ ಧ್ವಜ ವಂದನೆ ಜರುಗಿತು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರಾದ ಲಿಂಗರಾಜಗೌಡ ಪಾಟೀಲ, ನಾಗರಾಜ ಹೊಂಬಳಗಟ್ಟಿ, ಕವಿತಾ ಉಳ್ಳಾಗಡ್ಡಿ, ತಾಪಂ ಇಓ ವಿಶ್ವನಾಥ ಹೊಸಮನಿ, ಸಿಪಿಐ ಮಂಜುನಾಥ ಕುಸುಗಲ್, ಬಿಇಓ ಪಡ್ನೇಶಿ, ಮುಖ್ಯಾಧಿಕಾರಿ ಡಿ.ಎಚ್.ನದಾಫ್, ಉದಯಕುಮಾರ ಯಲಿವಾಳ, ವೀರಣ್ಣ ಮರಿಬಸಣ್ಣವರ, ಸುವರ್ಣ ಕೋಟಿ, ಪ್ರಮೋದ ತುಂಬಳ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಗಂಗಾಧರ ಅಣ್ಣೀಗೇರಿ ಸ್ವಾಗತಿಸಿದರು. ಹನಮರಡ್ಡಿ ಇಟಗಿ ನಿರೂಪಿಸಿದರು. ಎಸ್.ಡಿ.ಬಸೇಗೌಡ್ರ ವಂದಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ