ಹರಪನಹಳ್ಳಿ ಪಟ್ಟಣ ಅಭಿವೃದ್ಧಿಗೆ ಸಹಕಾರ: ಡಾ.ಪ್ರಭಾ

KannadaprabhaNewsNetwork | Published : Nov 11, 2024 11:49 PM

ಸಾರಾಂಶ

ಮುಂದೆ ಪುರಸಭೆ ಜಾಗ ಒತ್ತುವರಿಯಾಗದಂತೆ ಕ್ರಮ ಕೈಗೊಳ್ಳಿ ಎಂದು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಸಲಹೆ ನೀಡಿದರು.

ಹರಪನಹಳ್ಳಿ: ಪಟ್ಟಣದ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇರುತ್ತದೆ ಎಂದು ದಾವಣಗೆರೆ ಲೋಕಸಭಾ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಅವರು ಪಟ್ಟಣದ ಪುರಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಂತರ ಅವರನ್ನು ಅಭಿನಂದಿಸಿ ಸೋಮವಾರ ಮಾತನಾಡಿದ ಅವರು, ಇಲ್ಲಿಯ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ನನ್ನ ಬೆಂಬಲವಿದೆ ಎಂದು ಹೇಳಿದರು.ಪಟ್ಟಣದಲ್ಲಿ ಒತ್ತುವರಿಯಾಗಿರುವ ಜಾಗಗಳನ್ನು ತೆರವು ಗೊಳಿಸಬೇಕು. ಮುಂದೆ ಪುರಸಭೆ ಜಾಗ ಒತ್ತುವರಿಯಾಗದಂತೆ ಕ್ರಮ ಕೈಗೊಳ್ಳಿ ಎಂದು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಸಲಹೆ ನೀಡಿದರು.

ಪಟ್ಟಣದ ಸಮಸ್ಯೆಗಳ ಬಗ್ಗೆ ನನ್ನ ಗಮನಕ್ಕೆ ತಂದರೆ ಬಗೆಹರಿಸಲು ಪ್ರಯತ್ನಿಸುವೆ. ಗ್ರಾಮ ಸಡಕ್ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಇಲ್ಲಿಗೆ ಮುಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಅವರು ತಿಳಿಸಿದರು.

ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಮಾತನಾಡಿ, ಸಣ್ಣ ಪುಟ್ಟ ತಪ್ಪುಗಳಿಂದ ಈ ಹಿಂದೆ ಕಾಂಗ್ರೆಸ್‌ ಪಕ್ಷವು ಪುರಸಭೆಯಲ್ಲಿ ಅಧಿಕಾರವನ್ನು ಕಳೆದುಕೊಂಡಿತ್ತು. ಆದರೆ ಈಗ ಅಧಿಕಾರ ಪಡೆದುಕೊಂಡಿದ್ದೇವೆ ಎಂದರು.

ಪ್ರತಿ ವಾರ್ಡಿನಲ್ಲಿ ಏನೇನು ಕೆಲಸ ಆಗಬೇಕಿದೆ? ಪಟ್ಟಿ ಮಾಡಿ ಕೊಡಿ, ಬಗೆಹರಿಸುವ ಪ್ರಯತ್ನ ಮಾಡುವೆ. ಹೆಚ್ಚಿನ ಅನುದಾನ ತಂದು ಹರಪನಹಳ್ಳಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸುವೆ ಎಂದು ಅವರು ತಿಳಿಸಿದರು.

ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಪ್ರಯತ್ನ ನಡೆಸಿರುವೆ ಎಂದು ಶಾಸಕರು ಹೇಳಿದರು.

ಪುರಸಭಾ ಸದಸ್ಯರೂ ಆಗಿರುವ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ ಪ್ರತಿ ಸಲ ಪುರಸಭೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದರೂ ವ್ಯಕ್ತಿಗತ ಭಿನ್ನಮತ ದಿಂದ ಅಧಿಕಾರ ಹಿಡಿಯಲು ಆಗುತ್ತಿರಲಿಲ್ಲ, ಇಂದು ಶಾಸಕಿ ಎಂ.ಪಿ.ಲತಾ ಅವರ ಮಾರ್ಗದರ್ಶನದಲ್ಲಿ ಒಗ್ಗಟ್ಟಾಗಿ 17 ಸದಸ್ಯರು ಶಕ್ತಿ ಪ್ರದರ್ಶನ ಮಾಡಿ ಬಹಳ ವರ್ಷಗಳ ನಂತರ ಪುರಸಭೆಯಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಿದ್ದೇವೆ ಎಂದರು.

ಎಂ.ಪಿ. ರವೀಂದ್ರ ಬಿಟ್ಟರೆ ಹಿಂದಿನ ಯಾವ ಶಾಸಕರು ಪುರಸಭೆಗೆ ವಿಶೇಷ ಅನುದಾನ ತಂದಿಲ್ಲ. ಜೋಡೆತ್ತಾಗಿರುವ ಶಾಸಕಿ ಎಂ.ಪಿ.ಲತಾ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೆಚ್ಚಿನ ಅನುದಾನ ಒದಗಿಸಬೇಕು ಹಾಗೂ ಇದನ್ನು ನಗರಸಭೆಯನ್ನಾಗಿ ಪರಿವರ್ತಿಸಲು ಪ್ರಯತ್ನ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಹಿರಿಯ ಸದಸ್ಯ ಅಬ್ದುಲ್‌ ರಹಿಮಾನ್‌ ಮಾತನಾಡಿ, ಪಟ್ಟಣದ ಅಭಿವೃದ್ದಿಗೆ ಶಾಸಕರು ಹಾಗೂ ಸಂಸದರ ಸಹಕಾರ ಕೋರಿದರು.

ಪುರಸಭೆಯಿಂದ ಹೊಸಬಸ್‌ ನಿಲ್ದಾಣ ಹಾಗೂ ಹೊಸಪೇಟೆ ರಸ್ತೆ ಮೂಲಕ ಐ.ಬಿ.ವೃತ್ತದ ವರೆಗೆ ತೆರೆದ ವಾಹನದಲ್ಲಿ ನೂತನ ಅಧ್ಯಕ್ಷರು, ಉಪಾದ್ಯಕ್ಷರು, ಶಾಸಕರು, ಸಂಸದರು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನೊಳಗೊಂಡ ಗಣ್ಯರನ್ನು ಮೆರವಣಿಗೆ ಮಾಡಲಾಯಿತು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ಪುರಸಭಾ ಅಧ್ಯಕ್ಷೆ ಪಾತೀಮಾಭಿ, ಉಪಾದ್ಯಕ್ಷ ಎಚ್‌.ಕೊಟ್ರೇಶ, ಸದಸ್ಯರುಗಳಾದ ಗೊಂಗಡಿ ನಾಗರಾಜ, ಟಿ.ವೆಂಕಟೇಶ, ಲಾಟಿದಾದಾಪೀರ,ಉದ್ದಾರ ಗಣೇಶ, ಜಾಕೀರ ಹುಸೇನ್, ಭರತೇಶ, ನಿಂಗಮ್ಮ,ಹನುಮಕ್ಕ, ತಳವಾರ ಲಕ್ಕಮ್ಮ, ಸತ್ತೂರು ಯಲ್ಲಮ್ಮ ಶೋಭಾ ಹಾಗೂ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಜಯಲಕ್ಷ್ಮಿ,ಗಾಯತ್ರಮ್ಮ, ಚಿಗಟೇರಿ ಬ್ಲಾಕ್‌ ಅಧ್ಯಕ್ಷ ಕೆ.ಕುಬೇರಗೌಡ,ವನಜಾಕ್ಷಮ್ಮ, ಉಮಾ ಇತರರು ಉಪಸ್ಥಿತರಿದ್ದರು.

ಹರಪನಹಳ್ಳಿ ಪಟ್ಟಣದಲ್ಲಿ ಪುರಸಭೆಯ ನೂತನ ಅಧ್ಯಕ್ಷ ಪಾತೀಮಾಬಿ ಹಾಗೂ ಉಪಾದ್ಯಕ್ಷ ಕೊಟ್ರೇಶ, ಶಾಸಕಿ ಎಂ.ಪಿ.ಲತಾ ,ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.

Share this article