ಕನ್ನಡಪ್ರಭ ವಾರ್ತೆ ಹೊನ್ನಾಳಿ
ಈಗಾಗಲೇ ತುಮ್ಮಿನಕಟ್ಟೆ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ದೊರಕಿರುವುದರಿಂದ ಬೀದಿ ಬದಿ ವ್ಯಾಪಾರಿಗಳು ಸಂತೆ ಮೈದಾನದಲ್ಲಿ ವ್ಯಾಪಾರ ವಹಿವಾಟು ನಡೆಸಬೇಕಾಗುತ್ತದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಕನಕದಾಸ ರಂಗಮಂದಿರದಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿ ಪಟ್ಟಣದಲ್ಲಿ ಅನೇಕ ಸಮಸ್ಯೆಗಳಿದ್ದು, ಅದಕ್ಕೆ ಪರಿಹಾರ ಕಂಡುಕೊಳ್ಳಲು ಪುರಸಭೆ ಎಲ್ಲಾ 18 ಸದಸ್ಯರ ಸಹಕಾರ ಅಗತ್ಯ. ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಒಟ್ಟಾಗಿ ಕುಳಿತು ಸಮಸ್ಯೆಗಳಿಗೆ ಪರಿಹಾರ ಕೊಡುವ ಕೆಲಸ ಆಗಬೇಕಾಗಿದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಎಚ್.ನಿರಂಜನಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳು ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ಮಾಡುವುದರಿಂದ ಜನರ ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪುರಸಭೆ ಸಿಬ್ಬಂದಿ ಎಷ್ಟೇ ಹೇಳಿದರೂ ದೌರ್ಜನ್ಯ ಎಂದು ಬಿಂಬಿಸುತ್ತಿದ್ದಾರೆ. ನಮ್ಮ ಮನವಿಗೂ ಸ್ಪಂದಿಸುತ್ತಿಲ್ಲ, ನಾವು ರಸ್ತೆ ಸುರಕ್ಷತಾ ಸಂಚಾರದ ಕಡೆಗೂ ಗಮನ ಕೊಡಬೇಕಾಗಿದೆ. ಅಪಘಾತ, ಅನಾಹುತಗಳು ನಡೆದರೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಬೀದಿ ಬದಿ ವ್ಯಾಪಾರದಿಂದ ಸೃಷ್ಟಿಯಾಗುತ್ತಿರುವ ತ್ಯಾಜ್ಯ ಸಂಗ್ರಹಣೆಯ ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಸೂಕ್ತವಾಗಿ ನಿರ್ವಹಿಸಬೇಕು, ಪುರಸಭೆ ಸಿಬ್ಬಂದಿ ಸಹಕಾರ ಕೊಡುತ್ತಾರೆ ಎಂದರು. ಈಗ ವಿತರಿಸುತ್ತಿರುವ ಗುರುತಿನ ಚೀಟಿಗಳ ಎರಡು ವರ್ಷಕ್ಕೊಮ್ಮೆ ನವೀಕರಣ ಮಾಡಿಕೊಳ್ಳಬೇಕು ಎಂದರು.ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷೆ ರೇಣುಕಮ್ಮ ಮಾತನಾಡಿ, ಸ್ಮಾರ್ಟ್ ಕಾರ್ಡ್ ಕೊಡಲು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕ ಡಿ.ಜಿ.ಶಾಂತನಗೌಡ 124 ಮಂದಿ ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿಗಳ ವಿತರಿಸಿದರು.
ಈ ವೇಳೆ ಪುರಸಭೆ ಸದಸ್ಯ ಧರ್ಮಪ್ಪ ಮಾತನಾಡಿದರು. ಪುರಸಭೆ ಸದಸ್ಯರಾದ ಮೈಲಪ್ಪ, ರಾಜೇಂದ್ರ ಕುಮಾರ್, ಎಂಜಿನಿಯರ್ ದೇವರಾಜ್, ಆರೋಗ್ಯ ನಿರೀಕ್ಷಕ ಪರಮೇಶ್ ನಾಯ್ಕ ಹಾಗೂ ಫಲಾನುಭವಿಗಳಿದ್ದರು.