ಕನ್ನಡಪ್ರಭ ವಾರ್ತೆ ಹರಿಹರ
ದೇಶದಲ್ಲಿನ ಜನಸಾಮಾನ್ಯರು ಜಾಗೃತರಾಗಿ ಪ್ರಜ್ಞಾವಂತಿಕೆ ಬೆಳೆಸಿಕೊಂಡರೆ ಭ್ರಷ್ಟಾಚಾರ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದು ದಾವಣಗೆರೆ ಜಿಲ್ಲಾ ಲೋಕಾಯುಕ್ತ ಇನ್‌ಸ್ಪೆಕ್ಟರ್ ಪ್ರಭುಸೂರಿನ್ ಹೇಳಿದರು.ದಾವಣಗೆರೆ ಜಿಲ್ಲಾ ಲೋಕಾಯುಕ್ತ ಸಂಸ್ಥೆ ಹಾಗೂ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ, ರೆಡ್‌ಕ್ರಾಸ್, ಎನ್‌ಎಸ್‌ಎಸ್ ಸಹಯೋಗದಲ್ಲಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ಜಾಗೃತಿ ನಮ್ಮ ಒಟ್ಟು ಜವಾಬ್ದಾರಿ’ ಎಂಬ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಡಳಿತ ಯಂತ್ರದಲ್ಲಿರುವ ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ, ಸ್ವಜನಪಕ್ಷಪಾತ, ಆಡಳಿತ ದುರ್ಬಳಕೆ, ಕರ್ತವ್ಯದಲ್ಲಿನ ಅಪ್ರಮಾಣಿಕತೆ ಮತ್ತು ಅಧಿಕಾರಸ್ಥರ ಅಶಿಸ್ತಿನಂತಹ ಪ್ರಕರಣಗಳೂ ಸೇರಿದಂತೆ, ಆಡಳಿತಾತ್ಮಕ ಕ್ರಮಗಳ ವಿರುದ್ಧದ ದೂರುಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಸಾರ್ವಜನಿಕ ಆಡಳಿತದ ಮಾನದಂಡಗಳನ್ನು ಸುಧಾರಣೆ ಮಾಡಲು ಕರ್ನಾಟಕ ರಾಜ್ಯಮಟ್ಟದಲ್ಲಿ ಲೋಕಾಯುಕ್ತ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.ಮುಖ್ಯಮಂತ್ರಿ, ಎಲ್ಲ ಇತರೆ ಮಂತ್ರಿಗಳು, ರಾಜ್ಯ ಶಾಸಕಾಂಗದ ಸದಸ್ಯರು, ಎಲ್ಲ ರಾಜ್ಯ ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಶಾಸನಬದ್ಧ ಸಂಸ್ಥೆಗಳಲ್ಲಿ ನೇಮಗೊಂಡ ಸಹಕಾರ ಸಂಘಗಳ, ನಿಗಮಗಳ ಅಧ್ಯಕ್ಷರು, ಉಪಾಧ್ಯಕ್ಷರು ಲೋಕಾಯುಕ್ತ ಸಂಸ್ಥೆಯ ಕಾಯಿದೆ ಅಡಿಯಲ್ಲಿ ಬರುವ ಸಾರ್ವಜನಿಕ ನೌಕರರಾಗಿದ್ದಾರೆ. ಸಾರ್ವಜನಿಕ ನೌಕರರ ವರ್ತನೆಗೆ ಸಂಬಂಧಪಟ್ಟ ಆಪಾದನೆಗಳನ್ನು ಅಥವಾ ಕುಂದುಕೊರತೆಗಳನ್ನು ತನಿಖೆ ಮಾಡಿ, ವರದಿ ಮಾಡಲು ಓರ್ವ ಲೋಕಾಯುಕ್ತರು, ಒಬ್ಬ ಅಥವಾ ಅದಕ್ಕಿಂತಲೂ ಹೆಚ್ಚಿನ ಉಪ ಲೋಕಾಯುಕ್ತರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎನ್. ರಮೇಶ್ ಮಾತನಾಡಿ, ನೈತಿಕಪ್ರಜ್ಞೆ ಮೂಲಕ ಭ್ರಷ್ಟಾಚಾರ ಪಿಡುಗನ್ನು ಹತೋಟಿಗೆ ತರಬಹುದು. ಈ ವಿಚಾರದಲ್ಲಿ ಯುವ ಸಮುದಾಯವು ಜನತೆಯಲ್ಲಿ ಅರಿವು ಮೂಡಿಸುತ್ತ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಒತ್ತಾಸೆಯಾಗಿ ನಿಲ್ಲಬೇಕು. ಸಮಾಜದಲ್ಲಿನ ನೈತಿಕತೆ ಹಾಗೂ ಆತ್ಮಸಾಕ್ಷಿ ಇಲ್ಲದೇ ಇರುವುದೆಲ್ಲವೂ ಭ್ರಷ್ಟಾಚಾರವೇ ಆಗಿದೆ ಎಂದು ಹೇಳಿದರು.ಲೋಕಾಯುಕ್ತ ಇಲಾಖೆಯ ಆಶಾ, ಸಂತೋಷ್, ಐ.ಕ್ಯೂ.ಎಸ್.ಸಿ ಸಹ ಸಂಯೋಜಕ ಅಬ್ದುಲ್ ಬಷೀರ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮನೋಹರ.ಬಿ.ಎಂ, ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ತಿರುಮಲ ಟಿ., ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಾಬು ಕೆ.ಎ., ಇತಿಹಾಸ ವಿಭಾಗದ ಮುಖ್ಯಸ್ಥ ಹನುಮಂತಪ್ಪ ಕೆ.ವೈ., ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮನೋಹರ್.ಕೆ.ಎಸ್. ಇತರರು ಇದ್ದರು.
ವಿದ್ಯಾರ್ಥಿನಿ ಅರ್ಪಿತಾ ಪ್ರಾರ್ಥಿಸಿದರು, ಐ.ಕ್ಯೂ.ಎಸ್.ಸಿ ಸಂಯೋಜಕ ಡಾ.ಅನಂತನಾಗ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಯೋಗೀಶ್.ಕೆ.ಜೆ. ಸ್ವಾಗತಿಸಿದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರ ಜಿ.ಪಿ. ಕಾರ್ಯಕ್ರಮ ನಿರ್ವಹಿಸಿದರು. ರೆಡ್‌ಕ್ರಾಸ್‌ನ ಸಂಚಾಲಕ ಡಾ.ಗಂಗರಾಜು ಎಸ್. ವಂದಿಸಿದರು.