ತ್ರಿವಿಧ ದಾಸೋಹಿಯ ೫೦ನೇ ವರ್ಷದ ಜಾತ್ರಾ ಮಹೋತ್ಸವ ಇಂದಿನಿಂದ
ಕನ್ನಡಪ್ರಭ ವಾರ್ತೆ ಕಾರಟಗಿಪಟ್ಟಣದ ಆರಾಧ್ಯ ದೈವ, ತ್ರಿವಿಧ ದಾಸೋಹಿ ಕಲಬುರಗಿ ಶ್ರೀ ಶರಣಬಸವೇಶ್ವರರ ಚರಿತಾಮೃತ ಪುರಾಣ ಪ್ರವಚನ ಮಹಾ ಮಂಗಲೋತ್ಸವ, ಜೋಡು ರಥೋತ್ಸವ ಹಾಗೂ ೫೦ನೇ ವರ್ಷದ ಜಾತ್ರಾ ಮಹೋತ್ಸವ ಗುರುವಾರದಿಂದ 2 ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ. ಈ ಕಾರ್ಯಕ್ರಮಕ್ಕಾಗಿ ಇಡೀ ಪಟ್ಟಣ ಸಜ್ಜಾಗಿ ನಿಂತಿದ್ದು, ಕ್ಷಣಗಣನೆ ಪ್ರಾರಂಭವಾಗಿದೆ.
ಶರಣ ಪರಂಪರೆಗೆ ಕಿರೀಟ ಪ್ರಾಯ ಕಲಬುರ್ಗಿ ಶ್ರೀ ಶರಣಬಸವೇಶ್ವರರು ಅಕ್ಷರ, ಅನ್ನ ಹಾಗೂ ಜ್ಞಾನ ದಾಸೋಹದ ಮೂಲಕ ನಾಡಿಗೆ ಚಿರಪರಿಚಿತರಾಗಿದ್ದಾರೆ. ಐತಿಹಾಸಿಕ ಮತ್ತು ವಾಣಿಜ್ಯ ಪಟ್ಟಣ ಕಾರಟಗಿಯಲ್ಲಿ ಚರಿತ್ರೆಯ ಹತ್ತಾರು ಕುರುಹುಗಳು ಇವೆ. ಎಂಟನೇ ಶತಮಾನದಲ್ಲಿಯೇ ಬಾದಾಮಿ ಚಾಲುಕ್ಯರು ಇಲ್ಲಿ ದೇವಸ್ಥಾನ ಕಟ್ಟಿದ್ದಾರೆ. ಪುರಾತನ ಕಾಲದ ಕಲ್ಯಾಣಿ ಇಲ್ಲಿವೆ.ಆರಾಧ್ಯದೈವ:ಪಟ್ಟಣದ ಆರಾಧ್ಯ ದೈವ ಕಲಬುರಗಿ ಶ್ರೀ ಶರಣಬಸವೇಶ್ವರರ ಜಾತ್ರಾ ಮಹೋತ್ಸವಕ್ಕೆ ಈಗ ಐದು ದಶಕಗಳು. ಅಂದಿನಿಂದ ಇಂದಿನವರೆಗೂ ಸಾಂಗವಾಗಿ ಈ ಪರಂಪರೆ ನಡೆದುಕೊಂಡು ಬರುತ್ತಿದೆ. ಈ ಮಹೋತ್ಸವಕ್ಕೆ ಸರ್ವ ಜಾತಿಯ ಜನ ಯಾವುದೇ ಬೇಧ -ಭಾವವಿಲ್ಲದೆ, ತನು ಮನ ಧನದ ಸೇವೆ ಅರ್ಪಿಸುತ್ತಾರೆ. ಪಟ್ಟಣದ ಸಾಮರಸ್ಯದ ಸಂಕೇತಕ್ಕೆ ಜಾತ್ರಾಮಹೋತ್ಸವ ಒಂದು ಸಾಕ್ಷಿ.
ತಾಮ್ರ ಪ್ರಭಾವಳಿ:ಐದು ದಶಕಗಳ ಪೂರೈಸಿದ ಹಿನ್ನೆಲೆ ಇಲ್ಲಿನ ಏಕದಂತ ಯುವ ಸೇನೆಯಿಂದ ಶ್ರೀಶರಣಬಸವೇಶ್ವರ ಮೂರ್ತಿಗೆ ತಾಮ್ರ ಪ್ರಭಾವಳಿಯ ಸೇವೆ ಮಾಡಿದ್ದಾರೆ. ತೆಲಂಗಾಣದ ಆದೋನಿ ಪಟ್ಟಣದ ಕಲಾಕಾರದಿಂದ ೧೩ ಕೆಜಿ ತಾಮ್ರದಿಂದ ಈ ಪ್ರಭಾವಳಿಯನ್ನು ತಯಾರಿಸಿ ಪಟ್ಟಣಕ್ಕೆ ಮಂಗಳವಾರ ತರಲಾಗಿದೆ. ದೇವಸ್ಥಾನಕ್ಕೆ ಇಲ್ಲಿನ ಬಸ್‌ನಿಲ್ದಾಣದಿಂದ ಮೆರವಣಿಗೆ ಮಾಡುವ ಮೂಲಕ ದೇವಸ್ಥಾನಕ್ಕೆ ಪ್ರಭಾವಳಿಯನ್ನು ತಂದ ಯುವಕರ ತಂಡ ಪುರಾಣಿ ಸಮಿತಿಗೆ ಅರ್ಪಿಸಿದರು. ನಂತರ ವಿವಿಧ ಧಾರ್ಮಿಕ ಪೂಜೆಗಳನ್ನು ಮಾಡುವ ಮೂಲಕ ಶ್ರೀಶರಣಬಸವೇಶ್ವರ ಮೂರ್ತಿಗೆ ಅಲಂಕರಿಸಲಾಯಿತು. ಈ ವೇಳೆ ಮಲ್ಲಿಕಾರ್ಜುನ ಚಿನಿವಾಲ್, ಕಿರಣಕುಮಾರ್, ಶಿವುಕುಮಾರ್, ಶಿವುಮಾಸ್, ನಾಗರಾಜ, ಮಂಜುನಾಥ, ದೇವರಾಜ, ರಮೇಶ, ದೊಡ್ಡಬಸವ, ನಂದೀಶ, ಟಿ.ಮಂಜುನಾಥ, ಪ್ರಸನ್ನ ಸೇರಿದಂತೆ ಇತರರು ಇದ್ದರು.
೨೫ನೇ ವರ್ಷ:ಶ್ರೀ ಶರಣಬಸವೇಶ್ವರರ ಚರಿತಾಮೃತ ಪುರಾಣ ಪ್ರವಚನ ಕಾರ್ಯಕ್ರಮ ಆರಂಭಗೊಂಡು ಹಲವು ವರ್ಷಗಳು ಸಾಗಿದರೂ ಜಾತ್ರಾ ಮಹೋತ್ಸವಕ್ಕೆ ತೇರು ಇರಲಿಲ್ಲ. ಬಳಿಕ ಪುರಾಣ ಸಮಿತಿಯ ಹಿರಿಯರು ತೆಗೆದುಕೊಂಡ ನಿರ್ಧಾರದಿಂದ ಇಂದು ಶರಣಬಸವೇಶ್ವರರ ಜೋಡು ರಥೋತ್ಸವ ಆರಂಭವಾಗಿ ೨೬ನೇ ವರ್ಷಕ್ಕೆ ಕಾಲಿಟ್ಟಿದೆ. ಪಟ್ಟಣದಲ್ಲಿ ತ್ರಿವಿಧ ದಾಸೋಹಿ ಶರಣಬಸವೇಶ್ವರರ ಪುರಾಣ ಸಮಿತಿಯಿಂದ ಪ್ರತಿ ವರ್ಷವೂ ದೇವಸ್ಥಾನದಲ್ಲಿ ಶರಣರ ಪುರಾಣ ನಡೆಸಿಕೊಂಡು ಬರಲಾಗುತ್ತಿದೆ. ಈಗ ಮಹತ್ಕಾರ್ಯ ಐದು ದಶಕ ಪೂರ್ಣವಾಗಲಿದೆ.
ಈ ಬಾರಿ ಪಟ್ಟಣದ ಪುರಸಭೆಯಿಂದ ದೇವಸ್ಥಾನದವರೆಗ ಸುಮಾರು ೨ ಕಿಮೀ ದೂರದವರೆಗೂ ರಸ್ತೆಯ ಎರಡು ಬದಿಯಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದೆ.ಕಾರ್ಯಕ್ರಮಗಳು:ಸೆ.೧೨ರಂದು ಪ್ರಾತಃ ಕಾಲ ೫ಗಂಟೆಗೆ ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ಶರಣಬಸವೇಶ್ವರರ ಮೂರ್ತಿಗೆ ಮಹಾ ರುದ್ರಾಭಿಷೇಕ, ೭ಗಂಟೆಗೆ ಸಕಲ ವಾದ್ಯ, ವೈಭವ, ಕಳಸ ಕನ್ನಡಿ ಸುಮಂಗಲೆಯರೊಂದಿಗೆ ಹಾಗೂ ನಂದಿಕೋಲು, ಡೊಳ್ಳಿನ ಮೇಳ ಹಾಗೂ ಪುರಂತರೊಂದಿಗೆ ಪುರ ಪ್ರಮುಖ ಬೀದಿಗಳಲ್ಲಿ ಗಂಗೆ ಸ್ಥಳಕ್ಕೆ ಹೋಗಿ ಬರುವುದು ನಂತರ ಮಧ್ಯಾಹ್ನ ೧ ಗಂಟೆಗೆ ಭೂರಿ ಗಣಾರಾಧನೆ ನಡೆಯಲಿದೆ. ಸೆ.೧೩ರ ಸಂಜೆ ೫.೩೦ಕ್ಕೆ ಪುರಾಣ ಸಮಿತಿಯ ಹಿರಿಯರು ವಿದ್ಯುಕ್ತ ಚಾಲನೆ ನಂತರ ೨೫ನೇ ವರ್ಷದ ಜೋಡು ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ವಿವಿಧ ಶ್ರೀಗಳು ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ.