ವೀರಶೈವ ವಿದ್ಯಾವರ್ಧಕ ಸಂಘದ ಚುನಾವಣೆಗೆ ದಿನಗಣನೆ; ಅಭ್ಯರ್ಥಿಗಳ ಪ್ರಚಾರ ಚುರುಕು

KannadaprabhaNewsNetwork | Published : Mar 16, 2024 1:49 AM

ಸಾರಾಂಶ

ಬಿಸಿಲೂರು ಬಳ್ಳಾರಿಯಲ್ಲಿ ತಾಪಮಾನ ತೀವ್ರ ಏರಿಕೆ ನಡುವೆಯೂ ಚುನಾವಣಾ ಅಖಾಡದಲ್ಲಿರುವವರು ಹಗಲು-ರಾತ್ರಿಯೆನ್ನದೇ ಮತದಾರರ ಮನೆಯ ಕದ ತಟ್ಟುತ್ತಿದ್ದಾರೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಜಿಲ್ಲೆಯ ಪ್ರತಿಷ್ಠಿತ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಗೆ ದಿನಗಣನೆ ಶುರುವಾಗುತ್ತಿದ್ದಂತೆಯೇ ಅಭ್ಯರ್ಥಿಗಳ ಪ್ರಚಾರ ಮತ್ತಷ್ಟು ಚುರುಕುಗೊಂಡಿದೆ.ಬಿಸಿಲೂರು ಬಳ್ಳಾರಿಯಲ್ಲಿ ತಾಪಮಾನ ತೀವ್ರ ಏರಿಕೆ ನಡುವೆಯೂ ಚುನಾವಣಾ ಅಖಾಡದಲ್ಲಿರುವವರು ಹಗಲು-ರಾತ್ರಿಯೆನ್ನದೇ ಮತದಾರರ ಮನೆಯ ಕದ ತಟ್ಟುತ್ತಿದ್ದಾರೆ. ನಗರದ 16 ಹಾಗೂ ಗ್ರಾಮೀಣ 14 ಸೇರಿ ಒಟ್ಟು 30 ಸ್ಥಾನಗಳಿಗೆ ಮಾ.17ರಂದು ನಗರದ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚುನಾವಣೆ ಜರುಗಲಿದೆ. 2438 ಸಂಘದ ಆಜೀವ ಸದಸ್ಯರು ಮತ ಚಲಾಯಿಸಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಹಿರಿಯರ ತಂಡ, ಯುವಕ ವೃಂದದ ನಡುವೆ ತೀವ್ರ ಪೈಪೋಟಿ ನಡೆದಿದೆ.ಹಿರಿಯರ ತಂಡದ ಪ್ರಮುಖ ಅಭ್ಯರ್ಥಿಗಳಾಗಿ ಅಲ್ಲಂ ಗುರುಬಸವರಾಜ್, ಡಾ.ಅರವಿಂದ ಪಾಟೀಲ್, ಎರಿಸ್ವಾಮಿ ಬೂದಿಹಾಳ್ ಮಠ, ಎನ್.ವೀರಭದ್ರಗೌಡ, ಸಿದ್ಧರಾಮಕಲ್ಮಠ, ಚೋರನೂರು ಕೊಟ್ರಪ್ಪ, ಪಲ್ಲೇದ ಪ್ರಭುಲಿಂಗ ಸೇರಿದಂತೆ ವೀರಶೈವ ಸಮಾಜದ ಅನೇಕರು ಅಖಾಡದಲ್ಲಿದ್ದಾರೆ.ಯುವಕರ ವೃಂದದಿಂದ ಅಲ್ಲಂ ಪ್ರಮೋದ್, ವೀರಶೈವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ತಿಮ್ಮನಗೌಡ ಪಾಟೀಲ್, ಹಿರಿಯ ವಕೀಲ ಪಾಟೀಲ್ ಸಿದ್ದಾರೆಡ್ಡಿ, ಉದ್ಯಮಿ ಸಾಹುಕಾರ್ ಸತೀಶ್‌ ಬಾಬು, ಪಾಲಿಕೆ ಮಾಜಿ ಸದಸ್ಯ ಎಸ್. ಮಲ್ಲನಗೌಡ, ವೈದ್ಯೆ ಡಾ.ಭಾಗ್ಯಲಕ್ಷ್ಮಿ ಸ್ಪರ್ಧೆಯಲ್ಲಿದ್ದಾರೆ.ಯಾವುದೇ ಗುಂಪಿನಲ್ಲಿ ಗುರುತಿಸಿಕೊಳ್ಳಲಿಚ್ಛಿಸದವರು ಸ್ವತಂತ್ರವಾಗಿ ಸ್ಪರ್ಧಿಸಿದ್ದಾರೆ. ಈ ಪೈಕಿ ವೀರಶೈವ ಕಾಲೇಜು ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ದರೂರು ಶಾಂತನಗೌಡ, ಜಿ.ನೀಲಕಂಠಪ್ಪ, ಖಾರದಪುಡಿ ಮುದ್ದನಗೌಡ, ಶ್ರೀಧರಗಡ್ಡೆಯ ಎಚ್.ಎಂ.ವೀರಭದ್ರಯ್ಯ, ಕೆಎಂ ಕೊಟ್ರೇಶ್ , ಕೋಳೂರು ಚಂದ್ರಶೇಖರಗೌಡ ಪ್ರಮುಖರಾಗಿದ್ದಾರೆ.ವೀವಿ ಸಂಘದ 30 ಕಾರ್ಯಕಾರಿ ಸಮಿತಿಗೆ 71 ಜನರು ಅಖಾಡದಲ್ಲಿದ್ದು, ಮತದಾರರ ಮನವೊಲಿಕೆಯಲ್ಲಿ ನಿರತರಾಗಿದ್ದಾರೆ. ಗುಂಪಿನಲ್ಲಿ ಬಂದರು-ಪ್ರತ್ಯೇಕವಾಗಿ ಭೇಟಿಯಾದರು.ಚುನಾವಣೆಯಲ್ಲಿ ಪ್ರತಿ ಬಾರಿಯಂತಯೇ ಈ ಸಲವೂ ಲಿಂಗಾಯತ ಸಮುದಾಯ ಉಪ ಪಂಗಡಗಳ ಹೆಸರಿನಲ್ಲಿ ಮತದಾನದ ಬೇಡಿಕೆ ಕಂಡುಬಂದಿದೆ. ಗುಂಪಿನ ಜೊತೆ ಮತದಾನಕ್ಕೆ ಸಂಘದ ಆಜೀವ ಸದಸ್ಯರ ಮನೆಗೆ ಭೇಟಿ ಮಾಡಿ ಮನವಿ ಮಾಡಿಕೊಳ್ಳುವ ಅಭ್ಯರ್ಥಿಗಳು, ಬಳಿಕ ಪ್ರತ್ಯೇಕವಾಗಿ ಆಗಮಿಸಿ, ಮತದಾನಕ್ಕಾಗಿ ಮೊರೆ ಇಡುತ್ತಿದ್ದಾರೆ.ಇದೇ ವೇಳೆ ಸಮಾಜದ ಉಪ ಪಂಗಡದ ಅಸ್ತ್ರ ಬಳಸಿ ಮತಗಳ ಕ್ರೋಡೀಕರಣಕ್ಕಾಗಿ ಅಭ್ಯರ್ಥಿಗಳು ಪ್ರಯತ್ನಿಸುತ್ತಿದ್ದಾರೆ. ಕಳೆದ 15 ದಿನಗಳಿಂದಲೂ ಪ್ರಚಾರ ಕಾರ್ಯ ಚುರುಕಾಗಿದೆ. ಚುನಾವಣೆ ದಿನ ಸನಿಹವಾಗುತ್ತಿದ್ದಂತೆಯೇ ಓಡಾಡುತ್ತಿದ್ದಾರೆ.ಈ ಬಾರಿ ಸಮ್ಮಿಶ್ರ ಆಡಳಿತ?: ಚುನಾವಣೆಯಲ್ಲಿ ಯಾವುದೇ ಒಂದು ತಂಡ ಬಹುಮತ ಪಡೆದು ಅಧಿಕಾರ ಹಿಡಿಯುವ ಸಾಧ್ಯತೆಯಿಲ್ಲ. ಎರಡು ತಂಡಗಳಲ್ಲೂ ನಿರಂತರ ಜನಸಂಪರ್ಕ ಹೊಂದಿದವರಿದ್ದಾರೆ. ಕೆಲವರು ಸಂಘದ ಚುನಾವಣೆಯನ್ನು ಗಂಜಿಕೇಂದ್ರ ಮಾಡಿಕೊಂಡವರೂ ಇದ್ದಾರೆ. ಎರಡು ತಂಡದ ಅಭ್ಯರ್ಥಿಗಳಲ್ಲದೆ ಸ್ವತಂತ್ರವಾಗಿ ಚುನಾವಣೆ ಸ್ಪರ್ಧಿಸಿ ಗೆಲುವು ಸಾಮರ್ಥ್ಯವುಳ್ಳವರೂ ಇದ್ದಾರೆ.ಸಂಘದಲ್ಲಿ ಸಮ್ಮಿಶ್ರ ಆಡಳಿತ ಬರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎನ್ನುತ್ತಾರೆ ಚುನಾವಣೆಯ ಒಳ ಮರ್ಮ ಅರಿತ ಸಂಘದ ಆಜೀವ ಸದಸ್ಯರು.ಅಭ್ಯರ್ಥಿಗಳಿಗೆ ಮತದಾರರ ತರಾಟೆ: ಮತ ಯಾಚನೆಗೆ ತೆರಳಿದ ಅಭ್ಯರ್ಥಿಗಳಿಗೆ ಸಂಘದ ಆಜೀವ ಸದಸ್ಯರು ತರಾಟೆಗೈದ ಪ್ರಸಂಗ ನಡೆದಿದೆ. ಚುನಾವಣೆ ಸಮಯದಲ್ಲಿ ಮಾತ್ರ ಕೈ ಮುಗಿದು ಬರುತ್ತೀರಿ. ಆದರೆ, ಗೆದ್ದ ಮೇಲೆ ಸಂಘದ ಬೆಳವಣಿಗೆಗೆ ನೀವು ಮಾಡಿದ್ದೇನು ಎಂಬುದೇ ಗೊತ್ತಾಗುವುದಿಲ್ಲ. ಬೇರೆ ರಾಜ್ಯಗಳ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಆದರೆ, 100 ವರ್ಷ ಇತಿಹಾಸ ಇರುವ ವೀವಿ ಸಂಘದ ಶಾಲಾ-ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಏಕೆ ಸಾಧ್ಯವಾಗುತ್ತಿಲ್ಲ. ಚುನಾವಣೆಯಲ್ಲಿ ನಿಂತವರೇ ಮತ್ತೆ ಮತ್ತೆ ಸ್ಪರ್ಧಿಸುತ್ತೀರಿ. ಬೇರೆಯವರಿಗೆ ಅವಕಾಶ ಬೇಡವೇ ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದು, ಮತದಾನಕ್ಕಾಗಿ ತೆರಳಿದವರು ಮುಜುಗರ ಅನುಭವಿಸಿದ್ದಾರೆ.

Share this article