ಕನ್ನಡಪ್ರಭ ವಾರ್ತೆ ಕಲಬುರಗಿ
ಗುಲ್ಬರ್ಗ ಲೋಕಸಭೆಯ ಮತ ಎಣಿಕೆ ಕಾರ್ಯ ಮಂಗಳವಾರ ನಡೆಯಲಿರುವ ಹಿನ್ನೆಲೆಯಲ್ಲಿ ಸೋಮವಾರ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಸಾಮಾನ್ಯ ವೀಕ್ಷಕ ದೀನಪಕರ್ ಸಿನ್ಹಾ ಜೊತೆಗೆ ಗುಲ್ಬರ್ಗ ವಿ.ವಿ.ಗೆ ಭೇಟಿ ನೀಡಿ ಮತ ಎಣಿಕೆಯ ಅಂತಿಮ ಸಿದ್ಧತಾ ಕಾರ್ಯ ಪರಿಶೀಲಿಸಿದರು.ಇದೇ ಸಂದರ್ಭದಲ್ಲಿ ಇ.ವಿ.ಎಂ. ಯಂತ್ರಗಳು ಇರಿಸಲಾದ ಸ್ಟ್ರಾಂಗ್ ರೂಂಗಳಿಗೂ ಭೇಟಿ ನೀಡಿ ಅಲ್ಲಿನ ಭದ್ರತೆ ವೀಕ್ಷಿಸಿದರು. ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್.ಚೇತನಕುಮಾರ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ, ಸ್ಟ್ರಾಂಗ್ ರೂಂ ನೋಡಲ್ ಅಧಿಕಾರಿ ಸಮದ್ ಪಟೇಲ್, ಮಹಾನಗರ ಪಾಲಿಕೆ ಎ.ಇ.ಇ. ಶಿವಣಗೌಡ ಪಾಟೀಲ ಮತ್ತಿತರಿದ್ದರು.
ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ:ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಏಕಕಾಲದಲ್ಲಿ ಬೆಳಗ್ಗೆ 8 ಗಂಟೆಗೆ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ಪ್ರಾರಂಭವಾಗಲಿದೆ. ಬೆಳಗ್ಗೆ 6 ಗಂಟೆಯಿಂದಲೆ ಸ್ಟ್ರಾಂಗ್ ತೆರೆಯುವ ಕಾರ್ಯ ನಡೆಯಲಿದ್ದು, ಎಲ್ಲಾ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಗುಲ್ಬರ್ಗ ವಿ.ವಿ.ಯ ಗಣಿತ ವಿಭಾಗದ ಭಾಸ್ಕರ್ ಹಾಲ್‍ನಲ್ಲಿ ಅಫಜಲಪೂರ, ಪರೀಕ್ಷಾ ಕೇಂದ್ರದಲ್ಲಿ ಚಿತ್ತಾಪುರ, ಗುಲ್ಬರ್ಗ ಗ್ರಾಮೀಣ ಹಾಗೂ ಪರೀಕ್ಷಾ ಕೇಂದ್ರದ ಸೆಲುಲಾರ್ ಹಾಲ್‍ನಲ್ಲಿ ಜೇವರ್ಗಿ, ಇಂಡೋರ್ ಸ್ಟೇಡಿಯಂನಲ್ಲಿ ಗುರುಮಠಕಲ್ ಮತ್ತು ಗುಲ್ಬರ್ಗ ಉತ್ತರ, ಕನ್ನಡ ವಿಭಾಗದ ಹರಿಹರ ಸಭಾಂಗಣದಲ್ಲಿ ಸೇಡಂ ಹಾಗೂ ಸಸ್ಯಶಾಸ್ತ್ರ ವಿಭಾಗದ ಬೋಸ್ ಸಭಾಂಗಣದಲ್ಲಿ ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಪರೀಕ್ಷಾಂಗ ಕಟ್ಟಡದಲ್ಲಿ ಜೇವರ್ಗಿ ಮತ ಕ್ಷೇತ್ರ ಎಣಿಕೆ ಕೇಂದ್ರ ಪಕ್ಕದಲ್ಲಿಯೇ ಪೋಸ್ಟಲ್ ಬ್ಯಾಲೆಟ್ ಮತಪತ್ರಗಳ ಎಣಿಕೆ ಕಾರ್ಯ ಪ್ರತ್ಯೇಕವಾಗಿ ನಡೆಯಲಿದೆ ಎಂದರು.ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 14 ಟೇಬಲ್‍ಗಳನ್ನು ಮತ ಎಣಿಕೆಗೆ ಹಾಕಲಾಗಿದೆ. ಪ್ರತಿ ಟೇಬಲ್‍ಗೆ ಓರ್ವ ಎಣಿಕೆ ಮೇಲ್ವಿಚಾರಕರು, ಓರ್ವ ಎಣಿಕೆ ಸಹಾಯಕರು, ಓರ್ವ ಮೈಕ್ರೋ ವೀಕ್ಷಕರು ಹಾಗೂ ಓರ್ವ ಗ್ರೂಪ್ ‘ಡಿ’ ಸಿಬ್ಬಂದಿಯನ್ನು ನೇಮಿಸಲಾಗಿದೆ. ಪ್ರತಿ ವಿಧಾನಸಭಾವಾರು ತಲಾ 18 ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕರು, ಮೈಕ್ರೋ ವೀಕ್ಷಕರು, ಗ್ರೂಪ್ ‘ಡಿ’ ಸಿಬ್ಬಂದಿ ಹಾಗೂ ಇತರೆ 40-50 ಸಿಬ್ಬಂದಿ ಇರಲಿದ್ದಾರೆ. ಅಧಿಕಾರಿಗಳು, ಅಭ್ಯರ್ಥಿಗಳು, ಕೌಂಟಿಂಗ್ ಏಜೆಂಟ್ ಆಗಮನಕ್ಕೆ ಪ್ರತ್ಯೇಕ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಕ್ಷಣ-ಕ್ಷಣದ ಮಾಹಿತಿ ಸಿ.ಇ.ಓ. ಕಚೇರಿ ವಮತ್ತು ಮಾಧ್ಯಮದವರಿಗೆ ನೀಡಲು ಹೈಸ್ಪೀಡ್ ಇಂಟರ್ನೆಟ್ ಸೇವೆ ಪಡೆಯಲಾಗಿದೆ ಎಂದರು.
ಕೌಂಟಿಂಗ್ ಏಜೆಂಟ್‍ಗಳು ಪೆನ್, ಸಿಂಪಲ್ ಕ್ಯಾಲ್ಕುಲೇಟರ್ ಹಾಗೂ ಪೇಪರ್ ಮಾತ್ರ ತರಲು ಅವಕಾಶ ನೀಡಿದ್ದು, ಮೋಬೈಲ್ ಫೋನ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ವಿವಿಧ ರೀತಿಯ ತಂಬಾಕು, ಗುಟಕಾ, ಬೀಡಿ, ಸಿಗರೇಟ್, ಬೆಂಕಿ ಪೊಟ್ಟಣ, ಲೈಟರ್ ಹಾಗೂ ಮದ್ಯಪಾನಗ ಮತ ಎಣಿಕೆ ತರುವಂತಿಲ್ಲ ಎಂದರು.700 ಪೊಲೀಸ್ ಸಿಬ್ಬಂದಿ ನಿಯೋಜನೆ:
ಗುಲ್ಬರ್ಗ ವಿ.ವಿ.ಯ ವಿವಿಧ ಕಟ್ಟಡದಲ್ಲಿ ಮತ ಎಣಿಕೆ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಮತ ಎಣಿಕೆ ನಡೆಯುವ ಎಲ್ಲಾ ಕಡೆ ಸುಮಾರು 700 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮುಂಜಾಗ್ರತೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 144 ಜಾರಿಗೊಳಿಸಿದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮಾಹಿತಿ ನೀಡಿದರು.ರಾಜಕೀಯ ಪಕ್ಷದ ಮುಖಂಡರೊಂದಿಗೆ ಡಿ.ಸಿ. ಸಭೆ
ಕಲಬುರಗಿ: ಲೋಕಸಭೆ ಚುನಾವಣೆಯ ಮತ ಎಣಿಕೆ ಇದೇ ಜೂ.4ರಂದು ಗುಲ್ಬರ್ಗ ವಿ.ವಿ.ಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಕಲಬುರಗಿ ಡಿ.ಸಿ. ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಬಿ.ಪೌಜಿಯಾ ತರನ್ನುಮ್ ಅವರು ರಾಜಕೀಯ ಪಕ್ಷಗಳ ಮುಖಂಡರ ಸಭೆ ನಡೆಸಿ, ಲೋಕಸಭೆ ಚುನಾವಣೆ ಘೋಷಣೆಯಾದ ದಿನದಿಂದ ಇದೂವರೆಗಿನ ಸಗಕಾರಕ್ಕೆ ದನ್ಯವಾದ ತಿಳಿಸಿದ ಅವರು ಜೂ.4ರ ಮತ ಎಣಿಕೆ ಕಾರ್ಯ ಸಹ ಶಾಂತಿಯುತವಾಗಿ ನಡೆಯಲು ಎಲ್ಲಾ ರಾಜಕೀಯ ಪಕ್ಷಗಳು ಸಹಕರಿಸಬೇಕೆಂದು ಮನವಿ ಮಾಡಿದರು.ಜೂ.4ರಂದು ಬೆ.6 ಗಂಟೆಗೆ ಸ್ಟ್ರಾಂಗ್ ರೂಂ ತೆರೆಯಲಾಗುತ್ತಿದ್ದು, ಅಭ್ಯರ್ಥಿ ಅಥವಾ ಅವರ ಚುನಾವಣಾ ಏಜೆಂಟ್ ಆಗಮಿಸಬಹುದಾಗಿದೆ. ಬೆ.8 ಗಂಟೆಗೆ ಗುಲ್ಬರ್ಗ ವಿ.ವಿ. ಯ ವಿವಿಧ ಕಟ್ಟಡದಲ್ಲಿ ಲೋಕಸಭಾ ಕ್ಷೇತ್ರದ ಎಲ್ಲ 8 ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭವಾಗಲಿದೆ ಎಂದರು. ಪ್ರತಿ ವಿಧಾನಸಭಾ ಎಣಿಕೆ ಹಾಲ್‌ನಲ್ಲಿ 14 ಟೇಬಲ್ ಹಾಕಲಾಗುತ್ತದೆ. ಪ್ರತಿ ಟೇಬಲ್‍ಗೆ ಓರ್ವ ಎಣಿಕೆ ಮೇಲ್ವಿಚಾರಕರು, ಓರ್ವ ಎಣಿಕೆ ಸಹಾಯಕರು ಹಾಗೂ ಓರ್ವ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದ್ದು, ಅವರಿಗೆ ತರಬೇತಿ ಸಹ ನೀಡಲಾಗಿದೆ. ಪ್ರತಿ ಟೇಬಲ್‌ಗಳಿಗೆ ಓರ್ವ ಕೌಂಟಿಂಗ್ ಏಜೆಂಟ್ ಅಭ್ಯರ್ಥಿ ನೇಮಿಸಬಹುದಾಗಿದೆ ಎಂದರು.