ಭೋವಿ ನಿಗಮದಲ್ಲಿ ಕೊರೋನಾ ಸಾಲದ ಹಗರಣ!

KannadaprabhaNewsNetwork | Published : Apr 10, 2025 2:04 AM

ಸಾರಾಂಶ

ನಾಲ್ಕು ವರ್ಷಗಳ ಹಿಂದೆ ಮಹಾಮಾರಿ ಕೋವಿಡ್‌ ದುರಿತ ಕಾಲದಲ್ಲಿ ತಳ ಸಮುದಾಯದವರಿಗೆ ‘ಕೊರೋನಾ ಸಾಲ’ ಎಂದು ಹೇಳಿ ಒಂದೇ ಯೋಜನೆಯಲ್ಲೇ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಕೆಲ ಅಧಿಕಾರಿಗಳು 47 ಕೋಟಿ ರು. ಅಕ್ರಮ ನಡೆಸಿದ್ದಾರೆಂಬುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.

==

ಅಕ್ರಮ ದಾಖಲೆ ಸೃಷ್ಟಿಸಿ ಅಧಿಕಾರಿಗಳಿಂದ ಕೋಟ್ಯಂತರ ಹಣ ಲೂಟಿ

ಭೋವಿ ಅಭಿವೃದ್ಧಿ ನಿಗಮದ ಹಗರಣ ಸಿಐಡಿ ತನಿಖೆಯಲ್ಲಿ ಪತ್ತೆ

===ಏನಿದು ಉದ್ಯಮಶೀಲತಾ ಯೋಜನೆ?1.ನಿರುದ್ಯೋಗಿ ಭೋವಿ ಸಮುದಾಯದವರಿಗೆ ಸರಕು ಸಾಗಣೆ ವಾಹನ ಖರೀದಿಸಲು 3.5 ಲಕ್ಷ ರು ವರೆಗೆ ಬ್ಯಾಂಕ್ ಸಾಲ ವಿತರಣೆ.2. ಸಣ್ಣ ಕೈಗಾರಿಕೆ, ವಾಹನಗಳು, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳು ಹಾಗೂ ಇತರೆ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ನಿರುದ್ಯೋಗಿ ಭೋವಿ ಸಮುದಾಯದವರಿಗೆ 2 ಲಕ್ಷ ರು ಸಾಲ ನೀಡುವ ಯೋಜನೆ.

==

ಕೋವಿಡ್‌ ಸಾಲ ಹಗರಣ

ಭೋವಿ ಅಭಿವೃದ್ಧಿ ನಿಗಮದಿಂದ ಸಮುದಾಯದ ನಿರುದ್ಯೋಗಿಗಳಿಗೆ ನೆರವಾಗಲು 2021-22ರ ಸಾಲಿನಲ್ಲಿ ‘ಉದ್ಯಮಶೀಲತಾ’ ಯೋಜನೆ ಜಾರಿ

ಯೋಜನೆ ಜಾರಿ ಹೆಸರಲ್ಲಿ 200ಕ್ಕೂ ಹೆಚ್ಚು ಜನರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅವರ ಹೆಸರಲ್ಲಿ ಸಾಲ ಪಡೆದು ಅಕ್ರಮ ಎಸಗಿದ್ದ ಅಧಿಕಾರಿಗಳು

ವಿಚಾರಣೆ ವೇಳೆ ತಾವು ಯಾವುದೇ ಸಾಲ ಪಡೆದಿಲ್ಲ. ಕೊರೋನಾ ಸಾಲದ ಹೆಸರಲ್ಲಿ ತಮಗೆ ಸ್ವಲ್ಪ ಹಣ ನೀಡಲಾಗಿದೆ ಎಂದಿದ್ದ ‘ಫಲಾನುಭವಿಗಳು’

ಪ್ರಕರಣದ ಕುರಿತು ಸಿಐಡಿ ತನಿಖೆ ನಡೆಸಿದ ಮಧ್ಯವರ್ತಿಗಳ ಜೊತೆ ಸೇರಿಕೊಂಡು ಅಧಿಕಾರಿಗಳು 47 ಕೋಟಿ ರು. ವಂಚನೆ ಎಸಗಿರುವುದು ಬೆಳಕಿಗೆ

==

ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಲ್ಕು ವರ್ಷಗಳ ಹಿಂದೆ ಮಹಾಮಾರಿ ಕೋವಿಡ್‌ ದುರಿತ ಕಾಲದಲ್ಲಿ ತಳ ಸಮುದಾಯದವರಿಗೆ ‘ಕೊರೋನಾ ಸಾಲ’ ಎಂದು ಹೇಳಿ ಒಂದೇ ಯೋಜನೆಯಲ್ಲೇ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಕೆಲ ಅಧಿಕಾರಿಗಳು 47 ಕೋಟಿ ರು. ಅಕ್ರಮ ನಡೆಸಿದ್ದಾರೆಂಬುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.

2021-22ರ ಸಾಲಿನಲ್ಲಿ ಭೋವಿ ಸಮುದಾಯದ ನವೋದ್ಯಮಕ್ಕೆ ಪ್ರೋತ್ಸಾಹಿಸುವ ಸಲುವಾಗಿ ‘ಉದ್ಯಮಶೀಲತಾ’ ಯೋಜನೆಯನ್ನು ರಾಜ್ಯ ಭೋವಿ ಅಭಿವೃದ್ಧಿ ನಿಗಮ ಜಾರಿಗೊಳಿಸಿತ್ತು. ಯೋಜನೆಯಡಿ ಕೆಲವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ನಿಗಮದ ಆಗಿನ ವ್ಯವಸ್ಥಾಪಕ ನಿರ್ದೇಶಕಿ ಲೀಲಾವತಿ, ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಹಾಗೂ ಅಧೀಕ್ಷಕ ಸುಬ್ಬಪ್ಪ ಹಾಗೂ ಕೆಲ ಭೋವಿ ಜನಾಂಗದ ನಾಯಕರು ಅಕ್ರಮ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಆ ವರ್ಷದ ಉದ್ಯಮಶೀಲತೆಯ ಯೋಜನೆಯ ದಾಖಲೆಗಳನ್ನು ಪರಿಶೀಲಿಸಲಾಯಿತು. ಆಗ ಹೊಸ ಉದ್ದಿಮೆ ಆರಂಭಿಸುವ ಉದ್ದೇಶದ ನೆಪ ಹೇಳಿ 210ಕ್ಕೂ ಹೆಚ್ಚಿನ ಫಲಾನುಭವಿಗಳ ಹೆಸರಿನಲ್ಲಿ 5 ರಿಂದ 10 ಲಕ್ಷ ರು. ವರೆಗೆ ನಿಗಮವು ಸಾಲ ಮಂಜೂರು ಮಾಡಿತ್ತು. ಆದರೆ ಈ ಸಾಲದ ಬಗ್ಗೆ ಫಲಾನುಭವಿಗಳನ್ನು ವಿಚಾರಣೆ ನಡೆಸಿದಾಗ ತಮ್ಮ ಹೆಸರಿಗೆ ನಿಗಮದಿಂದ ಲಕ್ಷ ಲಕ್ಷ ಹಣ ಬಂದಿರುವ ಸಂಗತಿಯೇ ತಿಳಿದಿರಲಿಲ್ಲ. ಅಂದು ಕೆಲವರಿಗೆ ‘ಕೊರೋನಾ ಸಾಲ’ ಎಂದು ಸರ್ಕಾರ ನೀಡಿರುವುದಾಗಿ ಹೇಳಿ ಸಹಿ ಪಡೆದು ಸ್ಪಲ್ಪ ಹಣ ಕೊಟ್ಟಿದ್ದರು ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಉದ್ಯಮಶೀಲತಾ ಯೋಜನೆ ಅಕ್ರಮ:

ಭೋವಿ ಸಮುದಾಯದ ಆರ್ಥಿಕ ಪ್ರಗತಿಗೆ ಉದ್ಯಮಶೀಲತಾ, ಸ್ವಯಂ ಉದ್ಯೋಗ ಯೋಜನೆ, ಗಂಗಾ ಕಲ್ಯಾಣ ಹಾಗೂ ಭೂ ಒಡೆಯತನ ಹೀಗೆ ಐದಕ್ಕೂ ಹೆಚ್ಚು ಯೋಜನೆಗಳನ್ನು ನಿಗಮದ ಮೂಲಕ ಆಗಿನ ಸರ್ಕಾರ ಜಾರಿಗೊಳಿಸಿತ್ತು. ಈ ಯೋಜನೆಗಳ ಪೈಕಿ ಉದ್ಯಮಶೀಲತಾ ಯೋಜನೆಯೊಂದರಲ್ಲೇ ಈವರೆಗಿನ ತನಿಖೆಯಲ್ಲಿ 47 ಕೋಟಿ ರು. ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಮೂಲಗಳು ವಿವರಿಸಿವೆ.

ಈ ಅಕ್ರಮ ಸಂಬಂಧ ನಿಗಮದ ಮೈಕ್ರೋ ಆಡಿಟಿಂಗ್ ಸಹ ನಡೆಸಲಾಗುತ್ತಿದ್ದು, ಅಂತಿಮ ವರದಿ ಬಳಿಕ ಅವ್ಯವಹಾರದ ಮೊತ್ತ ಹೆಚ್ಚಾಗಬಹುದು. ಅಲ್ಲದೆ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ (ನೇರ ಸಾಲ) ಹಾಗೂ ಭೂಒಡೆತನ ಸೇರಿ ಇತರೆ ಯೋಜನೆಗಳಲ್ಲೂ ಅಕ್ರಮ ನಡೆದಿರುವ ಬಗ್ಗೆ ಶಂಕೆ ಮೇರೆಗೆ ಸಿಐಡಿ ತನಿಖೆ ಮುಂದುವರೆಸಿದೆ.

ಮೂರು ಹುದ್ದೆಯಲ್ಲಿ ನಾಗರಾಜಪ್ಪ ದರ್ಬಾರ್‌

ಅಕ್ರಮ ನಡೆದಿರುವ ಅವಧಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಲೀಲಾವತಿ ಕಾರ್ಯನಿರ್ವಹಿಸಿದ್ದರೆ, ಅಂದು ಪ್ರಧಾನ ವ್ಯವಸ್ಥಾಪಕ ಹುದ್ದೆ ಮಾತ್ರವಲ್ಲದೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ನಿಗಮದ ಅಭಿವೃದ್ಧಿ ಅಧಿಕಾರಿಯಾಗಿ ಸಹ ನಾಗರಾಜಪ್ಪ ಕೆಲಸ ಮಾಡಿದ್ದರು. ಈ ಅವಧಿಯಲ್ಲಿ ಅಕ್ರಮ ದಾಖಲೆ ಸೃಷ್ಟಿಸಿ ಭಾನಗಡಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಮಧ್ಯವರ್ತಿಗಳ ಮೂಲಕ ಡೀಲ್

ಈ ಹಗರಣದಲ್ಲಿ ಮಧ್ಯವರ್ತಿಗಳ ಮೂಲಕ ಎಂಡಿ ಲೀಲಾವತಿ, ಪ್ರಧಾನ ವ್ಯವಸ್ಥಾಪಕ ನಾಗರಾಜಪ್ಪ ಹಾಗೂ ಅಧೀಕ್ಷಕ ಸುಬ್ಬಪ್ಪ ಡೀಲ್ ನಡೆಸಿದ್ದರು. ಉದ್ಯಮಶೀಲತಾ, ಗಂಗಾ ಕಲ್ಯಾಣ ಹಾಗೂ ಭೂ ಒಡೆತನ ಯೋಜನೆಗಳಿಗೆ ಫಲಾನುಭವಿಗಳನ್ನು ಕರೆತರುವ ಹೊಣೆಗಾರಿಕೆಯನ್ನು ಮಧ್ಯವರ್ತಿಗಳಿಗೆ ಅಧಿಕಾರಿಗಳು ಕೊಟ್ಟಿದ್ದರು. ಅಂತೆಯೇ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಭೋವಿ ಸಮುದಾಯದ ಮುಖಂಡ ರಾಮಕೃಷ್ಣ, ಉದಯ್ ಸೇರಿ ಕೆಲವರು ಅಕ್ರಮಕ್ಕೆ ಸಾಥ್ ಕೊಟ್ಟಿದ್ದರು. ಪ್ರಕರಣದಲ್ಲಿ ರಾಮಕೃಷ್ಣ ಹಾಗೂ ಉದಯ್ ಸೇರಿ ಮೂವರನ್ನು ಸಿಐಡಿ ಬಂಧಿಸಿ ಜೈಲಿಗೆ ಕಳುಹಿಸಿತ್ತು.

ಆರೋಪಿಗಳು ಜನರಿಗೆ ಹಣದಾಸೆ ತೋರಿಸಿ ಸ್ವವಿವರ ಪಡೆದು ಅ‍ವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುತ್ತಿದ್ದರು. ಬ‍ಳಿಕ ಅವರ ಹೆಸರಿನಲ್ಲಿ ನಿಗಮದ ಸಾಲ ಮಂಜೂರು ಮಾಡಿಸುತ್ತಿದ್ದರು. ಈ ಹಣ ಫಲಾನುಭವಿಗಳ ಖಾತೆಗೆ ಜಮೆಯಾದ ಬಳಿಕ ಆ ಖಾತೆಗಳಿಂದ ತಾವೇ ಸ್ಥಾಪಿಸಿದ್ದ ನಕಲಿ ಕಂಪನಿಗಳಿಗೆ ವರ್ಗಾಯಿಸಿದ್ದರು. ಅದೇ ರೀತಿ ಮೊದಲು ನಿಗಮದಿಂದ ಸುಮಾರು 210ಕ್ಕೂ ಹೆಚ್ಚಿನ ಫಲಾನುಭವಿಗಳ ಖಾತೆಗೆ ಹಣ ಹೋಗಿದೆ. ಬಳಿಕ ಆ ಖಾತೆಗಳಿಂದ ಹನಿಕಾ, ನ್ಯೂಡ್ರೀಮ್ಸ್ ಹಾಗೂ ಸೋಮನಾಥೇಶ್ವರ ಸೇರಿ ಐದು ಕಂಪನಿಗಳಿಗೆ ಹಣ ವರ್ಗಾವಣೆಯಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

Share this article