ಅಗಿಲೆ ಬಳಿ ನಾಯಿಗಳ ದಾಳಿಗೆ ಹಸು ಬಲಿ

KannadaprabhaNewsNetwork | Updated : Dec 26 2023, 01:31 AM IST

ಸಾರಾಂಶ

ಅಗಿಲೆ ಬಳಿ, ಜಕ್ಕೆನಹಳ್ಳಿ ಕೊಪ್ಪಲು ಹತ್ತಿರ ನಗರಸಭೆಯ ಎಲ್ಲಾ ಕಸವನ್ನು ಸುರಿಯುವುದರಿಂದ ನಾಯಿಗಳ ಹಾವಳಿ ಹೆಚ್ಚಾಗಿ ಇಲ್ಲಿನ ಸುತ್ತಮುತ್ತಲ ಇರುವ ಹಸುಗಳು, ಕರುಗಳು, ಕುರಿ, ಕೋಳಿಗಳನ್ನು ತಿಂದು ಹಾಕುತ್ತಿವೆ. ಕಸ ಸುರಿಯುವ ಜಾಗದ ಸುತ್ತ ೪೦೦ಕ್ಕೂ ಹೆಚ್ಚು ನಾಯಿಗಳಿದ್ದು, ಜನರು ಓಡಾಡಲು ಹೆದರುವಂತಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ಅಗಿಲೆ ಗ್ರಾಮದ ಬಳಿಯ ಜಕ್ಕೇನಹಳ್ಳಿ ಕೊಪ್ಪಲಿನಲ್ಲಿ ನಾಯಿಗಳ ದಾಳಿಗೆ ಹಸು ಬಲಿಯಾಗಿ ಒಂದು ದಿನಗಳಾದರೂ ಸಂಬಂಧಪಟ್ಟ ಯಾವ ಅಧಿಕಾರಿಗಳು ಸ್ಥಳಕ್ಕೆ ಬಾರದಿದ್ದನ್ನು ಖಂಡಿಸಿ ಜಕ್ಕೇನಹಳ್ಳಿ ಕೊಪ್ಪಲು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಕಸವಿಲೇವಾರಿ ಘಟಕದ ಮುಖ್ಯದ್ವಾರದ ಮುಂದೆ ಸೋಮವಾರ ಬೆಳಿಗ್ಗೆ ಸತ್ತ ಹಸುವಿನ ಶವ ಇಟ್ಟು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಯಾವ ವಾಹನವು ಕಸ ಸುರಿಯಲು ಬಿಡದೇ ದಿಗ್ಬಂಧನ ಹಾಕಿದ ಘಟನೆ ನಡೆದಿದೆ.

ಇದೆ ವೇಳೆ ಮಾಧ್ಯಮದೊಂದಿಗೆ ಗ್ರಾಮಸ್ಥರಾದ ಜಾನಕಿ ಮಾತನಾಡಿ, ಅಗಿಲೆ ಬಳಿ, ಜಕ್ಕೆನಹಳ್ಳಿ ಕೊಪ್ಪಲು ಹತ್ತಿರ ನಗರಸಭೆಯ ಎಲ್ಲಾ ಕಸವನ್ನು ಸುರಿಯುವುದರಿಂದ ನಾಯಿಗಳ ಹಾವಳಿ ಹೆಚ್ಚಾಗಿ ಇಲ್ಲಿನ ಸುತ್ತಮುತ್ತಲ ಇರುವ ಹಸುಗಳು, ಕರುಗಳು, ಕುರಿ, ಕೋಳಿಗಳನ್ನು ತಿಂದು ಹಾಕುತ್ತಿದೆ. ನಾಯಿಗಳ ಗುಂಪು ಒಂದು ಹಸುವನ್ನು ತಿಂದು ಹಾಕಿದ್ದರೂ ಕೂಡ ಯಾವ ಅಧಿಕಾರಿಗಳು ಕೂಡ ಬಂದು ಸ್ಪಂದಿಸುತ್ತಿಲ್ಲ. ಹಸು ಸತ್ತು ದುರ್ವಾಸನೆ ಬರುತ್ತಿದ್ದರೂ ಇದುವರೆಗೂ ಯಾರು ತಿರುಗಿ ನೋಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಇನ್ನು ಕಸದ ಗಲೀಜು ನೀರು ಹರಿದು ಬಂದು ಕುಡಿಯುವ ನೀರಿಗೂ ಸೇರಿದೆ. ದನಕರುಗಳು ಕುಡಿಯಲು ಉತ್ತಮ ನೀರಿಲ್ಲ. ಇನ್ನು ಹೊಲ ಗದ್ದೆಗಳಿಗೆ ಈ ನೀರು ನುಗ್ಗುತ್ತಿದೆ. ನಮ್ಮ ಹಸುವನ್ನು ನಾವು ಕಳೆದುಕೊಂಡು ಇಲ್ಲಿವರೆಗೂ ಯಾರು ಇತ್ತ ಕಡೆ ಗಮನಹರಿಸುತ್ತಿಲ್ಲ ಎಂದು ದೂರಿದರು.

ಕಸ ಸಂಗ್ರಹಿಸುವ ತಡೆಗೋಡೆ ಕೂಡ ಬಿದ್ದು ಹೋಗಿದ್ದರೂ ಇದುವರೆಗೂ ಸರಿಪಡಿಸಿಲ್ಲ. ಇಲ್ಲಿಂದ ಪ್ಲಾಸ್ಟಿಕ್ ಹಾಗೂ ಇತರೆ ಗಲೀಜು ಪೇಪರ್‌ ಹಾರಿ ನಮ್ಮ ಮನೆ, ಹೊಲ-ಗದ್ದೆಗೆ ಬೀಳುತ್ತಿವೆ. ಇದರಿಂದ ಅನೇಕ ಕಾಯಿಲೆಗಳು ಉದ್ಭವಿಸುತ್ತಿವೆ. ಇಲ್ಲಿ ಕಸ ಹಾಕುವುದು ಬೇಡ. ಬೇರೆ ಕಡೆ ಕಾಡು ಒಳಗೆ ಮಾಡಿಕೊಳ್ಳಲಿ. ಊರಿನ ಒಳಗೆ ಕಸ ಹಾಕುವುದು ಬೇಡ ಎಂದು ತಮ್ಮ ಅಳಲು ತೋಡಿಕೊಂಡರು.

ಗ್ರಾಮ ಪಂಚಾಯತಿ ಸದಸ್ಯ ಕೃಷ್ಣ ಮಾತನಾಡಿ, ನಾನೊಬ್ಬ ಗ್ರಾಮ ಪಂಚಾಯತಿ ಸದಸ್ಯನಾಗಿ ರೈತರನ್ನು ಕಾಪಾಡಿಕೊಳ್ಳಲು ವಿಫಲರಾಗಿದ್ದೇವೆ. ಇದೇ ರೀತಿ ಕಸ ಹಾಕಲು ಮುಂದಾದರೇ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಪತ್ರ ಬರೆಯಬೇಕಾಗುತ್ತದೆ. ಈ ಭಾಗದಲ್ಲಿರುವ ಮನುಷ್ಯರು ಬದುಕುವಂತಿಲ್ಲ. ಜೀವ ಕೈಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ. ಇದುವರೆಗೂ ನೂರಾರು ಸಾಕು ಪ್ರಾಣಿಗಳು ಈ ನಾಯಿಗಳಿಗೆ ಬಲಿಯಾಗಿವೆ. ಪ್ರಾಣಿಗಳ ಸಾವಿಗೆ ಸೂಕ್ತ ಪರಿಹಾರ ನೀಡಬೇಕು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಬಂದು ಸ್ಪಂದಿಸಬೇಕು. ಚುನಾವಣೆ ವೇಳೆ ರಾಜಕಾರಣಿಗಳು ಬಂದು ಮತ ಕೇಳುತ್ತಾರೆ. ಈಗ ನಮ್ಮ ಸಮಸ್ಯೆ ಕೇಳುವವರಿಲ್ಲ. ಮುಂದಿನ ಚುನಾವಣೆಯನ್ನು ಬಹಿಷ್ಕಾರ ಮಾಡಬೇಕಾಗುತ್ತದೆ. ಸರಕಾರವು ಕೂಡ ಇತ್ತ ಕಡೆ ಗಮನಹರಿಸುವಂತೆ ಕೋರಿದರು.

ಈ ಕೂಡಲೇ ಈ ಕಸವಿಲೇವಾರಿ ಘಟಕ ಬಂದ್‌ ಮಾಡಬೇಕು. ಕಸ ವಿಲೇವಾರಿ ವಾಹನ ಇಲ್ಲಿಗೆ ಬರಬಾರದು. ಏನಾದರೂ ಬಂದು ಒಳ ಹೋಗಲು ಮುಂದಾದರೇ ಜಕ್ಕೇನಹಳ್ಳಿ ಮತ್ತು ಜಕ್ಕೇನಹಳ್ಳಿ ಕೊಪ್ಪಲು, ಅಗಿಲೆ, ಕಿತ್ತಾನೆ, ಅರಿವಿ ಕೊಪ್ಪಲು ಇತರೆ ಎಲ್ಲಾ ಗ್ರಾಮದ ಜನರು ಸೇರಿ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಇದೆ ವೇಳೆ ಗ್ರಾಮದ ರಂಗೇಗೌಡ ಜಯರಾಂ, ತಿಮ್ಮೇಗೌಡ, ಕಿಟ್ಟಿ, ಮಂಜಮ್ಮ, ಜಯಂತ್, ಇತರರು ಉಪಸ್ಥಿತರಿದ್ದರು.

* ಹೇಳಿಕೆ-1

ಅಗಿಲೆ ಬಳಿ, ಜಕ್ಕೆನಹಳ್ಳಿ ಕೊಪ್ಪಲು ಹತ್ತಿರ ನಗರಸಭೆಯ ಎಲ್ಲಾ ಕಸವನ್ನು ಸುರಿಯುವುದರಿಂದ ನಾಯಿಗಳ ಹಾವಳಿ ಹೆಚ್ಚಾಗಿ ಇಲ್ಲಿನ ಸುತ್ತಮುತ್ತಲ ಇರುವ ಹಸುಗಳು, ಕರುಗಳು, ಕುರಿ, ಕೋಳಿಗಳನ್ನು ತಿಂದು ಹಾಕುತ್ತಿವೆ. ಕಸ ಸುರಿಯುವ ಜಾಗದ ಸುತ್ತ ೪೦೦ಕ್ಕೂ ಹೆಚ್ಚು ನಾಯಿಗಳಿದ್ದು, ನಾವು ಓಡಾಡುವಂತಿಲ್ಲ, ನಮ್ಮ ಮೇಲೂ ಆಕ್ರಮಣ ಮಾಡುತ್ತಿವೆ. ಈ ಭಾಗದ ಸುತ್ತ ಜೀವನ ಮಾಡುವುದೇ ಕಷ್ಟಕರವಾಗಿದೆ.

- ಜಾನಕಿ,ಗ್ರಾಮಸ್ಥರು* ಹೇಳಿಕೆ-2

ಇದುವರೆಗೂ ನೂರಾರು ಸಾಕು ಪ್ರಾಣಿಗಳು ಈ ನಾಯಿಗಳಿಗೆ ಬಲಿಯಾಗಿವೆ. ಪ್ರಾಣಿಗಳ ಸಾವಿಗೆ ಸೂಕ್ತ ಪರಿಹಾರ ನೀಡಬೇಕು. ಇದೆ ರೀತಿ ಕಸ ಹಾಕಲು ಮುಂದಾದರೇ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಪತ್ರ ಬರೆಯಬೇಕಾಗುತ್ತದೆ. ಈ ಭಾಗದಲ್ಲಿರುವ ಮನುಷ್ಯರು ಬದುಕುವಂತಿಲ್ಲ. ಜೀವ ಕೈಲಿ ಹಿಡಿದುಕೊಂಡು ಹೋಗುವ ಪರಿಸ್ಥಿತಿ ಬಂದಿದೆ.

- ಕೃಷ್ಣ, ಗ್ರಾಪಂ ಸದಸ್ಯ

Share this article