ಕೂಲಿ ಕಾರ್ಮಿಕರಿಗೆ ನಿವೇಶನಕ್ಕೆ ಆಗ್ರಹಿಸಿ ಸಿಪಿಐ ಪ್ರತಿಭಟನೆ

KannadaprabhaNewsNetwork | Published : Oct 10, 2024 2:30 AM

ಸಾರಾಂಶ

ಸಿಪಿಐ ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ದಾರ್‌ರಿಗೆ ಮನವಿ ಪತ್ರ ನೀಡಿತು. ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ತೆರಳಿ ಪ್ರತಿಭಟನಾ ಸಭೆ ನಡೆಸಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಕೊಡಗಿನಾದ್ಯಂತ ಗುರುತು ಮಾಡಿರುವ ಸರ್ಕಾರಿ ಪೈಸಾರಿ ಜಾಗಗಳು ದೊಡ್ಡ ಬೆಳೆಗಾರರ ಸುಪರ್ದಿಯಲ್ಲಿದ್ದು ಸರ್ಕಾರ ಕೂಡಲೇ ಇದನ್ನು ವಶಕ್ಕೆ ಪಡೆದು ನಿವೇಶನ ರಹಿತರು, ಕೂಲಿ ಕಾರ್ಮಿಕರಿಗೆ ನೀಡಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿ.ಪಿ.ಐ) ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ದಾರ್‌ರಿಗೆ ಮನವಿ ಪತ್ರ ನೀಡಿದರು.ಕಳೆದ 22 ವರ್ಷಗಳ ಹಿಂದೆಯೇ ಸತತವಾಗಿ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತಕ್ಕೆ ಹಾಗೂ ಕಂದಾಯ ಇಲಾಖೆಗೆ ನಿವೇಶನ ರಹಿತರು, ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಬಾಡಿಗೆ ಮನೆಯಲ್ಲಿ ವಾಸ ಮಾಡುವವರಿಗೆ ನಿವೇಶನ ನೀಡಬೇಕೆಂದು ಮನವಿ ಮಾಡಿದ್ದರೂ ಇದುವರೆಗೂ ಯಾರಿಂದಲೂ ಸ್ಫಂದನೆ ದೊರೆತಿಲ್ಲ. ದುಡಿಯುವ ವರ್ಗದವರ ಬೇಡಿಕೆಗಳನ್ನು ಯಾರೂ ಕೂಡ ಈಡೇರಿಸುತ್ತಿಲ್ಲ. ಕೇವಲ ಮತಬ್ಯಾಂಕ್ ವರ್ಗ ಎಂದು ಕಡೆಗಣಿಸುತ್ತಿದೆ. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನಾಕಾರರು ಇಲ್ಲಿನ ವಿವೇಕಾನಂದ ವೃತ್ತದ ಬಳಿಯಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ತೆರಳಿ, ಬಳಿಕ ಜೇಸೀ ವೇದಿಕೆಯಲ್ಲಿ ಸಮಾವೇಶಗೊಂಡು ಬೃಹತ್ ಪ್ರತಿಭಟನಾ ಸಭೆ ನಡೆಸಿದರು.ಭಾರತ ಕಮ್ಯುನಿಸ್ಟ್ ಪಕ್ಷ(ಸಿ.ಪಿ.ಐ)ದ ಮುಖಂಡ ಎಚ್. ಎಂ. ಸೋಮಪ್ಪ ಮಾತನಾಡಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಬಡವ ಇನ್ನೂ ಬಡವನಾಗಿಯೇ ಉಳಿದಿದ್ದಾನೆ. ಸರ್ಕಾರವೂ ಎಲ್ಲರಿಗೂ ಸೂರು ಎಂದು ಭರವಸೆಗಳನ್ನು ಮಾತ್ರ ನೀಡುತ್ತಿದೆ.ಬಡ ಕೂಲಿ ಕಾರ್ಮಿಕರನ್ನು ಶೋಷಣೆ ಮಾಡಿ ಭೂ ಮಾಲೀಕರಿಗೆ ಪೂರಕವಾದ ನಿಯಮಗಳನ್ನು ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು. ಇನ್ನು ಮುಂದಾದರೂ ಜಿಲ್ಲೆಯ ಶಾಸಕರು, ಜಿಲ್ಲಾಡಳಿತ ಮತ್ತು ಆಯಾ ತಾಲೂಕು ಆಡಳಿತಗಳು ಬಡವರಿಗೆ ಸೂರು ಕಲ್ಪಿಸಲು ಮುಂದಾಗಲಿ ಎಂದು ಒತ್ತಾಯಿಸಿದರು.

ನಂತರ ತಾಲೂಕು ತಹಸೀಲ್ದಾರ್ ಮೂಲಕ ಶಾಸಕರು ಹಾಗೂ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.ಪ್ರತಿಭಟನೆಯಲ್ಲಿ ವಕೀಲರಾದ ಸುನಿಲ್, ಅಮ್ಜದ್, ಶಬಾನಾ ಮತ್ತಿತರರು ಇದ್ದರು.

Share this article