ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಅತಿ ಹೆಚ್ಚು ನಕಲಿ ವೈದ್ಯರು ಕೋಲಾರ ಜಿಲ್ಲೆಯಲ್ಲಿದ್ದು ನಂಬರ್ ಒನ್ ಸ್ಥಾನ ಪಡೆದಿರುವ ವಿಷಯಕ್ಕೆ ಸಂಬಂಧಿಸಿದಂತೆ ಹಂತ ಹಂತವಾಗಿ ಕಡಿವಾಣ ಹಾಕಲಾಗುವುದು ಎಂದು ಡಿಎಚ್‌ಒ ಡಾ.ಜಿ.ಶ್ರೀನಿವಾಸ್ ಭರವಸೆ ನೀಡಿದರು.ನಗರದ ಡಿ.ಎಚ್‌ಒ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ೧೦೦ಕ್ಕೂ ಹೆಚ್ಚು ಪ್ರಕರಣ ವಿರುದ್ದ ಕ್ರಮ ಕೈಗೊಂಡಿದೆ. ೪೦ ಪ್ರಕರಣಗಳು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಚಾರಣೆ ಹಂತದಲ್ಲಿದೆ, ಸರ್ಕಾರಿ ಆದೇಶಗಳ ಉಲ್ಲಂಘನೆ ಮಾಡಿರುವ ನಕಲಿ ಕ್ಲಿನಿಕ್‌ಗಳ ವಿರುದ್ದ ಎಫ್.ಐ.ಆರ್ ದಾಖಲಿಸುವಂತೆ ಜಿಲ್ಲಾಡಳಿತದ ಆದೇಶವಾಗಿದೆ ಎಂದು ತಿಳಿಸಿದರು.ನಿರ್ದಾಕ್ಷಿಣ್ಯ ಕ್ರಮ:
ಜನರ ಪ್ರಾಣದೊಂದಿಗೆ ಚೆಲ್ಲಾಟವಾಡಿ ಹಣ ದೋಚಲು ಅವಕಾಶ ನೀಡದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು, ಮುಳಬಾಗಿಲು, ಶ್ರೀನಿವಾಸಪುರ ಮತ್ತು ಮಾಲೂರು ತಾಲ್ಲೂಕಿನಲ್ಲಿ ಹೆಚ್ಚು ನಕಲಿ ಕ್ಲಿನಿಕ್‌ಗಳು ಕಂಡು ಬಂದಿದ್ದು ಅದರಲ್ಲೂ ಗಡಿ ಭಾಗದ ರಾಯಲ್ಪಾಡು, ಮಾಸ್ತಿ ಮತ್ತು ನಂಗಲಿ ಭಾಗದಲ್ಲಿ ಹೆಚ್ಚಾಗಿದೆ ಎಂಬ ಮಾಹಿತಿ ಬಂದಿದ್ದು ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿಸಿದ ಆರೋಗ್ಯಗಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಈಗಾಲೇ 45 ನಕಲಿ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ, ೨೨ ಪ್ರಕರಣಗಳು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಕ್ರಮ ಜರುಗಿಸಲಾಗುವುದು. ನಕಲಿ ಕ್ಲಿನಿಕ್ ಬಗ್ಗೆ ಶಾಶ್ವತವಾದ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.ವೈದ್ಯರ ಹುದ್ದೆ ಭರ್ತಿಗೆ ಕ್ರಮಆಸ್ಪತ್ರೆಗಳಲ್ಲಿ ಗ್ರಾಮೀಣ ಭಾಗದ ಪಿ.ಹೆಚ್ ಸೆಂಟರ್‌ಗಳಲ್ಲಿ ೩ ಮೇಡಿಕಲ್ ಅಧಿಕಾರಿಗಳು, ಜನರಲ್ ಆಸ್ಪತ್ರೆಗಳಲ್ಲಿ ೨ ಫಿಜೀಷೀಯನ್‌ಗಳು, ೧ ಸ್ತ್ರೀರೋಗ ತಜ್ಞರು, ಶ್ರೀನಿವಾಸಪುರದಲ್ಲಿ ೧ ಇ.ಎನ್.ಟಿ ವೈದ್ಯರ ಹುದ್ದೆಗಳು ಖಾಲಿಯಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ, ಉಳಿದ್ದಂತೆ ಬಹುತೇಕ ಆಸ್ಪತ್ರೆಯಲ್ಲಿದ್ದ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ವಿವರಿಸಿದರು.ಕೋಲಾರ ಜಿಲ್ಲೆಯಲ್ಲಿ ಗೃಹ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜ್ಯದಲ್ಲಿ ಪೈಲಟ್ ಯೋಜನೆಯಾಗಿ ಪರಿಗಣಿಸಲಾಗಿದೆ. ಈಗಾಗಲೇ ಪ್ರತಿ ಗ್ರಾಮದ ಮನೆ, ಮನೆಗೆ ಭೇಟಿ ನೀಡಲು ತಂಡಗಳನ್ನು ರಚಿಸಲಾಗಿದೆ. ತಂಡದಲ್ಲಿ ಆರೋಗ್ಯ ಅಧಿಕಾರಿ, ಅರೋಗ್ಯ ನಿರೀಕ್ಷಕರು ಹಾಗೂ ಓರ್ವ ಅಂಗನವಾಡಿ ಕಾರ್ಯಕರ್ತೆಯರಿದ್ದು, ಈ ತಂಡವು ಬೆಳಗ್ಗೆ ಮನೆಗಳಿಗೆ ಭೇಟಿ ನೀಡಿ ರಕ್ತದ ಒತ್ತಡ ಹಾಗೂ ಮಧುಮೇಹದ ಬಗ್ಗೆ ತಪಾಸಣೆ ನಡೆಸಲಿದ್ದಾರೆ, ತಿಂಗಳಲ್ಲಿ ಕನಿಷ್ಠ ೧೫ ದಿನ ಕೆಲಸ ನಿರ್ವಹಿಸಲಿದ್ದಾರೆ ಎಂದು ವಿವರ ನೀಡಿದರು.ರೋಗಿಗಳಿಗೆ ಔಷದ ಪೂರೈಕೆ
ರಕ್ತದ ಒತ್ತಡ ಹಾಗೂ ಮಧುಮೇಹಕ್ಕೆ ಸಂಬಂಧಿಸಿದಂತೆ ಉಚಿತವಾಗಿ ಒಂದು ತಿಂಗಳಿಗೆ ಅಗತ್ಯವಾದಷ್ಟು ಔಷಧದ ಬಾಕ್ಸ್ ನೀಡಲಾಗುವುದು. ಒಂದು ವೇಳೆ ಹೆಚ್ಚಿನ ಚಿಕಿತ್ಸೆ ಅಗತ್ಯವಾದಲ್ಲಿ ನುರಿತ ವೈದ್ಯರ ಬಳಿ ತಪಾಸಣೆ ಮಾಡಿಸಲಾಗುವುದು. ರಕ್ತದೊತ್ತಡ ಶೇ೨೫ ರಷ್ಟು ಹಾಗೂ ಶೇ೧೪ ರಷ್ಟು ಜನರಲ್ಲಿ ಮಧುಮೇಹ ಕಾಯಿಲೆ ಗುರುತಿಸಲಾಗಿದೆ. ಈ ಸಂಬಂಧವಾಗಿ ವಿಭಾಗೀಯ ಮಟ್ಟದ ಪೂರ್ವ ಭಾವಿ ಸಭೆಯಲ್ಲಿ ಚರ್ಚಿಸಿ ಅಗತ್ಯ ಕ್ರಮಗಳನ್ನು ಜರುಗಿಸಲಾಗುವುದು ಎಂದು ಹೇಳಿದರು.