ನೀರು, ಮೇವಿನ ಲಭ್ಯತೆ ಬಗ್ಗೆ ಜಾಗೃತಿ ಮೂಡಿಸಿ

KannadaprabhaNewsNetwork | Published : Apr 6, 2024 12:59 AM

ಸಾರಾಂಶ

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು.

ಧಾರವಾಡ

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಳವಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ, ಕುಡಿಯುವ ನೀರು, ಜಾನುವಾರು ಮೇವು, ನರೇಗಾ ಉದ್ಯೋಗ ನೀಡುತ್ತಿರುವ ಬಗ್ಗೆ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನದ ವರೆಗೆ ಜಿಲ್ಲೆಯ 37 ಗ್ರಾಮಗಳಿಗೆ 58 ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತೆ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉಂಟಾದಲ್ಲಿ ತಕ್ಷಣ ಕ್ರಮಕೈಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೋರ್‌ವೆಲ್, ಪೈಪ್‌ಲೈನ್, ಖಾಸಗಿ ಕೊಳವೆ ಬಾವಿ ಬಾಡಿಗೆ ಪಡೆಯಲು ಒಪ್ಪಂದ ಎಲ್ಲವೂ ಆಗಿದೆ. ಸಾರ್ವಜನಿಕರಲ್ಲಿ ನೀರಿನ ಮಿತ ಬಳಕೆ, ಅಪವ್ಯಯ, ಸೋರಿಕೆ ಬಗ್ಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.

ನವಿಲುತೀರ್ಥ ಜಲಾಶಯದಿಂದ ಎಂಆರ್‌ಬಿಸಿ ಕಾಲುವೆ ಮುಖಾಂತರ ನವಲಗುಂದ-37, ಅಣ್ಣಿಗೇರಿ-13, ಹುಬ್ಬಳ್ಳಿ-07 ಮತ್ತು ಕುಂದಗೋಳ-01 ಸೇರಿ ಒಟ್ಟು 58 ಕುಡಿಯುವ ನೀರಿನ ಕೆರೆ ತುಂಬಿಸಲಾಗಿದ್ದು, ಮೇ ತಿಂಗಳ ಅಂತ್ಯದವರೆಗೆ ಈ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುಶಃ ಉಂಟಾಗುವುದಿಲ್ಲ. ಕೆರೆಗಳ ನೀರಿನ ಸುರಕ್ಷತೆ ಮತ್ತು ಸ್ವಚ್ಛತೆ ಬಗ್ಗೆ ಅಧಿಕಾರಿಗಳು ಗಮನ ನೀಡಬೇಕೆಂದು ಹೇಳಿದರು.

ಜಿಲ್ಲೆಯಲ್ಲಿ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಮೇವು ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲೆಯ ಏಳು ಸ್ಥಳಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದ್ದು, ರೈತರು ಮೇವು ಪಡೆದುಕೊಳ್ಳುತ್ತಿದ್ದಾರೆ. ಮೇ ತಿಂಗಳನ್ನು ಗಮನದಲ್ಲಿಟ್ಟುಕೊಂಡು ರೈತರಿಂದ ಮೇವು ಬೇಡಿಕೆ ಅಂದಾಜಿಸಿ, ಈಗಲೇ ಮೇವು ಪೂರೈಕೆಗೆ ಕ್ರಮಕೈಗೊಳ್ಳಿ. ರೈತರು ಪಶುಪಾಲಕರಿಗೆ ಹೆಚ್ಚು ತಾಪಮಾನ ಇರುವ ಈ ಸಂದರ್ಭದಲ್ಲಿ ಜಾನುವಾರು ಪಾಲನೆ ಮತ್ತು ಸುರಕ್ಷತೆ ಬಗ್ಗೆ ತಿಳಿವಳಿಕೆ ನೀಡಿ ಅಗತ್ಯ ಔಷಧಿ ಪೂರೈಸಿ ಎಂದು ಸೂಚಿಸಿದರು.

ನೀರಾವರಿ ಸೌಲಭ್ಯವಿರುವ ರೈತರಿಗೆ ನವೆಂಬರ್ ತಿಂಗಳಲ್ಲಿ 37 ಸಾವಿರ ಮೇವು ಬೀಜಗಳ ಕಿಟ್ ವಿತರಿಸಲಾಗಿತ್ತು. ಇದರಿಂದ ರೈತರಿಗೆ ಅಂದಾಜು 45 ಸಾವಿರ ಟನ್ ಮೇವು ಲಭ್ಯವಾಗಿದೆ. ಈಗ ಮತ್ತೆ ಸರ್ಕಾರದಿಂದ ಮೇವು ಬೀಜದ ಕಿಟ್ ಬಂದಿದ್ದು, ಅಗತ್ಯವಿರುವ ರೈತರಿಗೆ ವಿತರಿಸಲು ತಿಳಿಸಿದರು.

ಸಭೆಯಲ್ಲಿ ಜಿಪಂ ಉಪಕಾರ್ಯದರ್ಶಿ ವಿಜಯಕುಮಾರ ಆಜೂರ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪಶುಪಾಲನೆ ಇಲಾಖೆಯ ನಿರ್ದೇಶಕ ಡಾ. ರವಿ ನಿಲಿಗೌಡರ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣಕುಮಾರ, ಭೂದಾಖಲೆಗಳ ಉಪನಿರ್ದೇಶಕ ಮೋಹನ ಶಿವಣ್ಣವರ ಇದ್ದರು. ವಿಫಲ ಬೋರ್‌ವೆಲ್‌ ಮುಚ್ಚಿಸಿ

ಪ್ರತಿ ತಿಂಗಳು ಪಂಚಾಯತ್‌ ರಾಜ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಆಗಿ ತಮ್ಮ ವ್ಯಾಪ್ತಿಯ ಸಫಲ ಮತ್ತು ವಿಫಲ ಕೊಳವೆ ಬಾವಿಗಳ ಸಮೀಕ್ಷೆ ಮಾಡಿ ವರದಿ ನೀಡಲು ತಿಳಿಸಲಾಗಿದೆ. ಅದರಂತೆ ಈಗ ಬೇಸಿಗೆ ಆಗಿದ್ದು ರೈತರು ಕೃಷಿ, ಕುಡಿಯುವ ನೀರಿಗಾಗಿ ಹೆಚ್ಚು ಕೊಳವೆ ಬಾವಿ ತೋಡಿಸುತ್ತಾರೆ. ಅದರಲ್ಲಿ ನೀರು ಬಂದರೆ ಮೋಟಾರ್‌ ಇಳಿಸಿ ಬಳಕೆ ಮಾಡುತ್ತಾರೆ. ನೀರು ಬರದಿದ್ದಲ್ಲಿ ಹಾಗೆ ತೆರೆದು ಬಿಟ್ಟು ಬಿಡುತ್ತಾರೆ. ಇದರಿಂದ ಮಕ್ಕಳ ಜೀವಕ್ಕೆ ಆಪತ್ತು ಆಗುವ ಸಾಧ್ಯವಿರುತ್ತದೆ. ಅಂತಹ ಅಪಾಯಕಾರಿ ಕೊಳವೆ ಬಾವಿ ಬಂದ್ ಮಾಡಿಸಬೇಕು. ವಿಫಲ ಕೊಳವೆ ಬಾವಿ ಕಡ್ಡಾಯವಾಗಿ ಮುಚ್ಚಿಸುವುದು ತಹಸೀಲ್ದಾರ್ ಹಾಗೂ ತಾಪಂ ಇಒಗಳ ಕರ್ತವ್ಯ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಸಂದೇಶ ನೀಡಿದರು.

Share this article