ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ವಾರ್ಡ್‌ಗಳಿಗೆ ತೆರಳಿ ಜ್ವರದಿಂದ ದಾಖಲಾಗಿರುವ ರೋಗಿಗಳ ಯೋಗಕ್ಷೇಮ ವಿಚಾರಿಸಿ, ಸೂಕ್ತ ಔಷದೋಪಚಾರ, ವೈದ್ಯಕಿಯ ಚಿಕಿತ್ಸೆ ದೊರೆಯುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು, ಜಿಲ್ಲಾ ಸರ್ಜನ್ ಡಾ.ಮೋಹನ್‌ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಸೀಮ, ಡಾ. ಭರತ್, ಡಾ. ಚಂದ್ರಶೇಖರ್ ಮತ್ತಿತರರೊಂದಿಗೆ ಸಭೆ ನಡೆಸಿ ಡೆಂಘೀ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆ, ಸ್ವಚ್ಛತೆ ಕಾಪಾಡುವ ಜೊತೆಗೆ ಇನ್ನಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮನೆಗಳ ಸುತ್ತ ನೀರು ನಿಲ್ಲದಂತೆ ಹಾಗೂ ಅನುಪಯುಕ್ತ ವಸ್ತು ತೆರವುಗೊಳಿಸಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಇನ್ನಷ್ಟು ಚುರುಕುಗೊಳಿಸುವಂತೆ ಸೂಚಿಸಿದರು.ಇದೇ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ಕಳೆದ ಕೆಲವು ದಿನಗಳಿಂದ ಡೆಂಘೀ ಜ್ವರದ ಪ್ರಕರಣಗಳು ಇಳಿಮುಖಗೊಂಡಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧಿ, ಮಾತ್ರೆಗಳು, ವೈದ್ಯರ ಲಭ್ಯತೆ ಇದೆ. ಹಾಸಿಗೆಗಳಿಗೆ ಒಂದಷ್ಟು ಬೇಡಿಕೆ ಹೆಚ್ಚಿದೆ. ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾ ಸರ್ಜನ್‌ರಿಗೆ ತಿಳಿಸಿದ್ದೇವೆ. ಜ್ವರದ ಪ್ರಕರಣಗಳು ಹೆಚ್ಚಾಗಿ ವರದಿಯಾದಲ್ಲಿ ಬೇಲೂರು ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ ಹಳೇ ಕಟ್ಟಡವನ್ನು ತಾತ್ಕಾಲಿಕವಾಗಿ ಬಳಸಿಕೊಳ್ಳಲು ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ ಬಾಬು ಮಾತನಾಡಿ, ಈ ವರ್ಷ ಜನೇವರಿಯಿಂದ ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 385 ಡೆಂಘೀ ಪ್ರಕರಣಗಳು ವರದಿಯಾಗಿತ್ತು. ಜೂನ್, ಜುಲೈನಲ್ಲೇ 170 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಇದೀಗ ಇಡೀ ಜಿಲ್ಲೆಯಲ್ಲಿ 25 ಸಕ್ರಿಯ ಪ್ರಕರಣಗಳಿವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಮಾತನಾಡಿ, ಜಿಲ್ಲಾಸ್ಪತ್ರೆಗೆ ಪ್ರತಿದಿನ ಜ್ವರದ ಪ್ರಕರಣಗಳು ಬರುತ್ತಿವೆ. ಇದರಲ್ಲಿ ಡೆಂಘೀಗಿಂತಲೂ ವಿಷಮ ಶೀತ ಜ್ವರದ ಪ್ರಕರಣಗಳು ಹೆಚ್ಚಿವೆ. ವಾರದ ಹಿಂದೆ ಆಸ್ಪತ್ರೆಯಲ್ಲಿ ಪ್ರತಿದಿನ ಕನಿಷ್ಠ 10 ಮಂದಿಗೆ ಪ್ಲೇಟ್‌ಲೆಟ್ ಹಾಕಬೇಕಿತ್ತು. ಹಾಲಿ ದಿನಕ್ಕೆ ಹೆಚ್ಚೆಂದರೆ ಒಬ್ಬರಿಗೆ ಮಾತ್ರ ಪ್ಲೇಟ್‌ಲೆಟ್ ಅಗತ್ಯ ಬೀಳುತ್ತಿದೆ. ಈಗ ಒಟ್ಟು 10 ಡೆಂಗ್ಯು ಜ್ವರ ಇರುವವರ ಮಾತ್ರ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.