ಗದಗ: ಡೆಂಘೀ ಜ್ವರ ಈಡಿಸ್ ಜಾತಿಯ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ಡೆಂಘೀ ಬಗ್ಗೆ ಮುಂಜಾಗೃತಾ ಕ್ರಮ ಕೈಗೊಳ್ಳಲು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ಅವರು ನಗರದ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜರುಗಿದ ಆರೋಗ್ಯ ಇಲಾಖೆ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸಾರ್ವಜನಿಕರು ಡೆಂಘೀ ಜ್ವರದ ಕುರಿತು ಭಯ ಹಾಗೂ ಆತಂಕಕ್ಕೆ ಒಳಗಾಗದೇ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಡೆಂಘೀ ಜ್ವರದಿಂದ ಸಂರಕ್ಷಿಸಿಕೊಳ್ಳಬೇಕು. ಡೆಂಘೀ ನಿಯಂತ್ರಣಕ್ಕಾಗಿ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆವಾಗಿಟ್ಟುಕೊಳ್ಳುವುದು ಬಹುಮುಖ್ಯವಾಗಿದೆ. ಈ ಕುರಿತು ಎಲ್ಲ ಇಲಾಖೆ ಅಧಿಕಾರಿಗಳು ಜನಜಾಗೃತಿ ಮೂಡಿಸುವ ಮೂಲಕ ಡೆಂಘೀ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ನಿರ್ಲಕ್ಷ್ಯ ಬೇಡ:2ನೇ ಬಾರಿ ಡೆಂಘೀ ಬಾಧೆಗೆ ಒಳಗಾದವರು ಸ್ವಲ್ಪವೂ ನಿರ್ಲಕ್ಷ್ಯ ಮಾಡಬಾರದು.ಯಾಕೆಂದರೆ ಅದು ತೀವ್ರ ಸ್ವರೂಪಕ್ಕೆ ಹೋಗುವ ಸಾಧ್ಯತೆ ಅಧಿಕವಾಗಿದೆ. ತಕ್ಷಣ ಚಿಕಿತ್ಸೆ ಪಡೆದು ಆರೋಗ್ಯ ಸಂರಕ್ಷಣೆ ಮಾಡಿಕೊಳ್ಳಬೇಕು ಎಂಬುದನ್ನು ಸಹ ಜನಸಾಮಾನ್ಯರಿಗೆ ಅರಿವು ಮೂಡಿಸುವದನ್ನು ಮರೆಯಬಾರದು ಎಂದರು.
ಜಿಪಂ ಸಿಇಒ ಭರತ್.ಎಸ್ ಮಾತನಾಡಿ, ಸೊಳ್ಳೆ ಉತ್ಪತ್ತಿ ಸಂಪೂರ್ಣ ನಿಯಂತ್ರಿಸಬೇಕು. ಸೊಳ್ಳೆಗಳ ಸಂಭಾವ್ಯ ಸಂತಾನೋತ್ಪತ್ತಿ ಸ್ಥಳ ನಾಶಪಡಿಸಲು ಎಲ್ಲರೂ ಮುಂದಾಗಬೇಕು. ನಿಂತ ನೀರು ಸೊಳ್ಳೆಗಳ ಉತ್ಪತ್ತಿಗೆ ಕಾರಣ. ನಿಂತ ನೀರನ್ನು ತೊಡೆದು ಹಾಕಲು ಬ್ಯಾರಲ್, ಹೂದಾನಿ, ಕಪ್‍ಗಳು ಮತ್ತು ಬಳಕೆಯಾಗದ ಟಯರ್ ಸೇರಿದಂತೆ ನಿಂತಿರುವ ನೀರಿನ ಎಲ್ಲ ಮೂಲ ತೆರವುಗೊಳಿಸಿ ಸೊಳ್ಳೆ ನಿವಾರಕ ಬಳಸಿ ಸಾರ್ವಜನಿಕರು ಡೆಂಘೀ ನಿಯಂತ್ರಿಸಬೇಕು ಎಂದರು.ಚರಂಡಿ ನಾಲೆಗಳಲ್ಲಿ ಕಸ ಕಡ್ಡಿ ಎಸೆಯದೇ ನೀರು ಸರಾಗವಾಗಿ ಸಾಗುವಂತೆ ನೋಡಿಕೊಳ್ಳಬೇಕು. ಮನೆಯಲ್ಲಿರುವ ನೀರು ಸಂಗ್ರಹಣಾ ಪಾತ್ರೆಗಳು ಮತ್ತು ಡ್ರಮ್‍ಗಳನ್ನು ಸರಿಯಾದ ಮುಚ್ಚಳದಿಂದ ಮುಚ್ಚಿರಿ ಹಾಗೂ ದೊಡ್ಡ ತೊಟ್ಟಿಗಳನ್ನು ವಾರಕ್ಕೊಮ್ಮೆ ಸಂಪೂರ್ಣವಾಗಿ ಖಾಲಿ ಮಾಡಿ, ಸರಿಯಾಗಿ ಮುಚ್ಚಿರಿ ಅಥವಾ ಸೊಳ್ಳೆ ನಿಯಂತ್ರಣ ಜಾಲರಿ ಅಳವಡಿಸುವ ಕುರಿತು ಅರಿವು ಮೂಡಿಸಿ ಎಂದು ನಿರ್ದೇಶಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಎಸ್.ನೀಲಗುಂದ ಮಾತನಾಡಿ, ತೀವ್ರ ಜ್ವರ, ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು ಉಂಟಾಗುವುದು ಡೆಂಘೀ ಜ್ವರದ ಲಕ್ಷಣಗಳಾಗಿವೆ. ಜ್ವರದ ಲಕ್ಷಣಗಳೊಂದಿಗೆ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತ ಸ್ರಾವದ, ಚರ್ಮದ ಮೇಲೆ ರಕ್ತ ಸ್ರಾವದ ಗುರುತು, ಕಪ್ಪುಮಲ ವಿಸರ್ಜನೆ, ವಿಪರೀತ ಬಾಯಾರಿಕೆ ಇವು ಡೆಂಘೀ ಶಾಕ್ ಸಿಂಡ್ರೋಮ್ ದ ಲಕ್ಷಣಗಳಾಗಿವೆ.ಸಾರ್ವಜನಿಕರು ಯಾವುದೇ ಜ್ವರವಿದ್ದರೂ ಮೊದಲು ರಕ್ತ ಪರೀಕ್ಷೆ ಮಾಡಿಸಬೇಕು. ಸೊಳ್ಳೆಗಳ ನಾಶಕ್ಕೆ ಕೀಟನಾಶಕ ಸಿಂಪಡಿಸಲು ಬರುವ ಆರೋಗ್ಯ ಸಿಬ್ಬಂದಿಗೆ ನೆರವಾಗಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಎಲ್ಲ ಕಿಟಕಿ ಬಾಗಿಲುಗಳಿಗೆ ಕೀಟ ತಡೆಗಟ್ಟುವ ಜಾಲರಿ ಅಳವಡಿಸಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆ ಉಪಯೋಗಿಸಬೇಕು. ನೀರಿನ ಬಾವಿ, ಕಾರಂಜಿ, ಕಟ್ಟಡ ನಿರ್ಮಾಣಕ್ಕಾಗಿ ಸಂಗ್ರಹಿಸಿದ ನೀರು ಶೇಖರಣೆ, ಕೆರೆ, ಹೊಂಡ, ಗದ್ದೆ ಜೌಗು ಪ್ರದೇಶದಲ್ಲಿ ಸೊಳ್ಳೆ ಮರಿಗಳನ್ನು ತಿನ್ನುವ ಗ್ಯಾಂಬೂಸಿಯಾ ಮತ್ತು ಗಪ್ಪಿಯೆಂಬ ಲಾರ್ವಾಹಾರಿ ಮೀನುಗಳನ್ನು ಬಿಟ್ಟು ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಬೇಕು ಎಂದರು.
ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಠೋಡ ಮಾತನಾಡಿ, ಜಿಲ್ಲೆಯಲ್ಲಿ ಜನವರಿಯಿಂದ ಇದುವರೆಗೆ 1479 ಡೆಂಘಿ ಸಂಶಯಾಸ್ಪದ ಪ್ರಕರಣಗಳು ಕಂಡುಬಂದಿದ್ದು, ಅದರಲ್ಲಿ 1102 ಪ್ರಕರಣ ಪರೀಕ್ಷಿಸಲಾಗಿದ್ದು, 70 ಡೆಂಘೀ ಪ್ರಕರಣಗಳು ಖಚಿತಪಟ್ಟಿವೆ. 49 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 32 ಜನರಿಗೆ ಗದಗನ ಜಿಮ್ಸ್ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 12 ಜನ ಐಸಿಯುನಲ್ಲಿದ್ದಾರೆ. 2 ಜನರು ವೆಂಟಿಲೇಟರ್ ಇಡಲಾಗಿತ್ತು ಅವರು ಕೂಡ ಈಗ ವೆಂಟಿಲೇಟರ್ ದಿಂದ ಹೊರಬಂದಿದ್ದಾರೆ ಎಂದು ಮಾಹಿತಿ ನೀಡಿದರು.ಸಭೆಯಲ್ಲಿ ಜಿಮ್ಸ್ ನಿರ್ದೇಶಕ ಡಾ.ಬಸವರಾಜ ಬೊಮ್ಮನಹಳ್ಳಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಿ.ಸಿ.ಕರೆಗೌಡ್ರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ್, ನಗರಸಭೆ ಪೌರಾಯುಕ್ತ ಪ್ರಶಾಂತ ವರಗಪ್ಪನವರ ಸೇರಿದಂತೆ ಆರೋಗ್ಯ ಇಲಾಖೆಯ ಕಾರ್ಯಕ್ರಮಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಇದ್ದರು.