ಡೆಂಘೀ ನಿಯಂತ್ರಣಕ್ಕೆ ಜಾಗೃತಿ ಮೂಡಿಸಿ: ಶಿವಾನಂದ

KannadaprabhaNewsNetwork |  
Published : Jul 06, 2024, 12:46 AM IST
ಬೇವೂರನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾ ಆವರಣದಲ್ಲಿ ಡೆಂಘೀ ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯ ಬೇವೂರು ಮೊರಾರ್ಜಿ ಶಾಲೆ ಆವರಣದಲ್ಲಿ ಡೆಂಘೀ ಅರಿವು ಕಾರ್ಯಕ್ರಮ ನಡೆಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಅವರು ಡೆಂಘೀ ಲಕ್ಷಣ, ನಿಯಂತ್ರಣ ಕುರಿತು ಮಾಹಿತಿ ನೀಡಿದರು.

ಕೊಪ್ಪಳ: ಡೆಂಘೀ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಕಾಯಿಲೆಯ ನಿಯಂತ್ರಣಕ್ಕೆ ಎಲ್ಲರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಹೇಳಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬೇವೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಯುಕ್ತಾಶ್ರಯದಲ್ಲಿ ಡೆಂಘೀ ನಿಯಂತ್ರಣ ಕುರಿತು ಶಾಲೆಯ ಸಭಾ ಆವರಣದಲ್ಲಿ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಮಳೆಗಾಲ ಪ್ರಾರಂಭವಾದ ಕಾರಣ ಶುದ್ಧ ನೀರಿನಲ್ಲಿ ಸೋಂಕಿತ ಈಡಿಸ್ ಜಾತಿಯ ಸೊಳ್ಳೆಗಳು ಮೊಟ್ಟೆಗಳನ್ನಿಟ್ಟು ಸಂತಾನಾಭಿವೃದ್ಧಿ ಮಾಡುತ್ತವೆ. ಆನಂತರ ಮನುಷ್ಯರಿಗೆ ಕಚ್ಚುವುದರಿಂದ ಈ ಕಾಯಿಲೆ ಹರಡುತ್ತದೆ. ತಲೆನೋವು, ವಾಂತಿ, ಕಣ್ಣಿನ ಹಿಂಭಾಗದಲ್ಲಿ ನೋವು, ಮೈಮೇಲೆ ಬಿಲ್ಲೆ ಆಕಾರದ ಕೆಪ್ಪು ಗಂಧೆಗಳು, ಕಪ್ಪು ಮಲ ವಿಸರ್ಜನೆ, ವಸಡುಗಳಲ್ಲಿ ರಕ್ತಸ್ರಾವ ಇಂತಹ ಲಕ್ಷಣಗಳಿದ್ದರೆ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ರಕ್ತ ಪರೀಕ್ಷೆ ಮಾಡಿಸಿ, ಖಚಿತಪಟ್ಟರೆ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜ್ವರದ ಬಗ್ಗೆ ನಿರ್ಲಕ್ಷ್ಯತನ ಮಾಡಬಾರದು ಎಂದರು.

ಎಲ್ಲರೂ ಮನೆಗಳಲ್ಲಿ ನೀರು ಶೇಖರಿಸುವ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟೆ, ಕಲ್ಲಿನ ದೋಣಿ ಇನ್ನಿತರ ನೀರು ಸಂಗ್ರಹ ಪರಿಕರಗಳನ್ನು ವಾರದಲ್ಲಿ 2 ಬಾರಿ ಸ್ವಚ್ಛವಾಗಿ ತೊಳೆದು, ಒಣಗಿಸಿ ಪುನಃ ನೀರು ತುಂಬಬೇಕು. ಸಲಕರಣೆಗಳಿಗೆ ಭದ್ರವಾಗಿ ಮುಚ್ಚಳದಿಂದ ಮುಚ್ಚಬೇಕು. ಸಾಯಂಕಾಲ ವೇಳೆ ಮನೆಯ ಮುಂದೆ ಬೇವಿನ ಸೊಪ್ಪಿನ ಹೊಗೆ ಹಾಕಬೇಕು. ಸೊಳ್ಳೆ ಕಡಿತದಿಂದ ದೂರವಿರಲು ವೈಯಕ್ತಿಕ ರಕ್ಷಣೆ ಮಾಡಿಕೊಳ್ಳಬೇಕು. ಮನೆಯ ಸುತ್ತ ಮುತ್ತಲು ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ಮನೆಗೆ ಭೇಟಿ ನೀಡಿದಾಗ ಸಹಕರಿಸಿ, ಕೈಜೋಡಿಸಬೇಕು. ತಮ್ಮ ಮನೆಯ ಸುತ್ತಮುತ್ತ ತ್ಯಾಜ್ಯ ವಸ್ತುಗಳಾದ ಟೈರ್, ಒರಳುಕಲ್ಲು, ತೆಗ್ಗಿನ ಚಿಪ್ಪು, ಹೊಡೆದ ಪ್ಲಾಸ್ಟಿಕ್ ಬಕೆಟ್ ಇತ್ಯಾದಿಗಳನ್ನು ಬಿಸಾಡಬಾರದು. ಸ್ವಚ್ಛತೆ ಕಾಪಾಡಬೇಕು. ಇದರ ಬಗ್ಗೆ ಎಲ್ಲ ವಿದ್ಯಾರ್ಥಿಗಳು ತಮ್ಮ ಮನೆ ಹಾಗೂ ಸುತ್ತಮುತ್ತಲಿನಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಸಮುದಾಯ ಆರೋಗ್ಯಾಧಿಕಾರಿ ಈಶಪ್ಪ ರಾಠೋಡ, ಮಲೇರಿಯಾ, ಕ್ಷಯರೋಗ, ಕುಷ್ಠರೋಗ, ಹದಿಹರೆಯದವರ ಆರೋಗ್ಯದ ಮಹತ್ವ, ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ತಿಳಿಸಿದರು.

ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಚಂದ್ರಕಲಾ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಆರೋಗ್ಯಾಧಿಕಾರಿ ಮಂಜುಳಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಉಮಾ, ಸಹಶಿಕ್ಷಕರಾದ ಪ್ರವೀಣ, ಶ್ರೀಶೈಲ ಬಡಿಗೇರ, ಮಹಾಂತೇಶ, ಮಹಮ್ಮದ್ ಜಹೀರ್, ಅಹಮ್ಮದಪಾಷಾ, ಕೀಮಪ್ಪ ದೇವರಮನಿ ಹಾಗೂ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?