ಕನ್ನಡಪ್ರಭ ವಾರ್ತೆ ವಿಜಯಪುರ
ಜಲಮೂಲಗಳಾದ ನದಿ, ಕೆರೆ, ಕಾಲುವೆ ಮತ್ತು ಬಾವಿಗಳು ಮಾಲಿನ್ಯಕ್ಕೊಳಗಾಗದಂತೆ ಸಂರಕ್ಷಿಸುವ ಉದ್ದೇಶದಿಂದ ಪರಿಸರ ಸ್ನೇಹಿ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಔಷದೀಯ ಗುಣವುಳ್ಳ ಸಸಿಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮುಂದಾಗುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ನಗರದ ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲೆಯಾದ್ಯಂತ ಪರಿಸರ ಸ್ನೇಹಿ ಗಣೇಶ ವಿಗ್ರಹ ಪ್ರತಿಷ್ಠಾಪನೆ ಕುರಿತು ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪರಿಸರ ಅಧಿಕಾರಿಗಳು, ಕೆ.ಎಸ್.ಪಿ.ಎಸಿ.ಬಿ ವಿಜಯಪುರ ಹಾಗೂ ಮುಖ್ಯಾಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪರಿಸರ ಸಂರಕ್ಷಣೆ ಹಾಗೂ ನೀರಿನ ಸಂರಕ್ಷಣೆಗಾಗಿ ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂತಹ ಯಾವುದೇ ರೀತಿಯ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ವಿಗ್ರಹಗಳ ಉತ್ಪಾದನೆ, ಮಾರಾಟ ಹಾಗೂ ನೀರಿನ ಮೂಲಗಳಲ್ಲಿ ವಿಸರ್ಜನೆ ನಿಷೇಧಿಸಲಾಗಿದೆ. ಇಂತಹ ವಿಗ್ರಹಗಳ ಮಾರಾಟ, ಉತ್ಪಾದನೆಗೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಸಹಯೋಗದಲ್ಲಿ ನಿಯಂತ್ರಣ ಮಾಡಬೇಕು ಎಂದರು.
ಔಷಧೀಯ ಗುಣವುಳ್ಳ ಬೀಜವನ್ನು ಮಣ್ಣಿನ ಶೀಡ್‌ಬಾಲ್‌ದಲ್ಲಿ ತಯಾರಿಸಿ ಗಣಪತಿ ಮೂರ್ತಿಯಲ್ಲಿ ಇಟ್ಟು ಮಾರಾಟ ಮಾಡಲು ಎಲ್ಲ ಮೂರ್ತಿ ತಯಾರಕರಿಗೆ ಹಾಗೂ ಮಾರಾಟಗಾರರಿಗೆ ತಿಳಿ ಹೇಳಿ, ವಿಸರ್ಜನೆ ನಂತರ ಸಾರ್ವಜನಿಕರು ಔಷಧೀಯ ಗುಣವುಳ್ಳ ಸಸ್ಯವನ್ನು ತಮ್ಮ ತಮ್ಮ ಮನೆಯ ಪಾಟ್‌ಗಳಲ್ಲಿ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗುವಂತೆ ಸೂಕ್ತ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅನಧಿಕೃತವಾಗಿ ವಿಗ್ರಹಗಳ ತಯಾರಿ-ಮಾರಾಟ ಮಾಡುವವರ ಮೇಲೆ ಹಾಗೂ ನಗರ ಸ್ಥಳೀಯ ಮುಖ್ಯಸ್ಥರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ ಅವರು, ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಎಲ್ಲ ಮೂರ್ತಿ ತಯಾರಕರು, ಗಣೇಶ ಉತ್ಸವ ಸಮಿತಿ ಸದಸ್ಯರು, ಊರಿನ ಮುಖಂಡರುಗಳು, ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನೊಳಗೊಂಡು ಸಭೆ ನಡೆಸಿ ಸರ್ಕಾರದ ಆದೇಶ-ನಿರ್ದೇಶನಗಳನ್ನು ಪಾಲಿಸುವಂತೆ ಸೂಕ್ತ ತಿಳಿವಳಿಕೆ ನೀಡಬೇಕು ಎಂದರು.
ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಮನಿಯಾರ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಪರಿಸರ ಅಭಿಯಂತರರು ಉಪಸ್ಥಿತರಿದ್ದರು.