ಕನ್ನಡಪ್ರಭ ವಾರ್ತೆ ಬೆಳಗಾವಿ
ನೀರಿನ ಸಂರಕ್ಷಣೆಯಲ್ಲಿ ಎಲ್ಲರ ಪಾತ್ರ ಪ್ರಮುಖವಾಗಿದ್ದು, ಹೀಗಾಗಿ ಜಿಲ್ಲೆಯಾದ್ಯಂತ ಜಲ ಶಕ್ತಿ ಅಭಿಯಾನದ ಕುರಿತು ವ್ಯಾಪಕ ಪ್ರಚಾರ ಮಾಡುವ ಮೂಲಕ ಜನ ಸಾಮಾನ್ಯರಿಗೆ ಯೋಜನೆಯ ಕುರಿತು ತಿಳುವಳಿಕೆ ಮೂಡಿಸಬೇಕು ಎಂದು ಕೇಂದ್ರ ಜಲಶಕ್ತಿ ಅಭಿಯಾನ ನೋಡಲ್ ಅಧಿಕಾರಿ ಡಿ.ವಿ.ಸ್ವಾಮಿ ಹೇಳಿದರು. ಇಲ್ಲಿನ ಜಿಲ್ಲಾ ಪಂಚಾಯತಿ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಜಲಶಕ್ತಿ ಅಭಿಯಾನದ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬೈಲಹೊಂಗಲ ಮತ್ತು ಹುಕ್ಕೇರಿ ತಾಲೂಕಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಮನರೇಗಾ)ಡಿ ಅನುಷ್ಠಾನಗೊಂಡ ಅಮೃತ ಸರೋವರ, ಬ್ಲಾಕ್ ಪ್ಲಾಂಟೆಶನ್, ಹೊಸ ಕೆರೆ, ಕಂದಕ ಬದುಗಳು, ಮಳೆ ನೀರು ಕೊಯ್ಲು ಹೀಗೆ ಅನೇಕ ಕಾಮಗಾರಿಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಮಗಾರಿಗಳು ಉತ್ತಮವಾಗಿ ಅನುಷ್ಠಾನ ಮಾಡಿರುವ ಬಗ್ಗೆ ಸಭೆಗೆ ತಿಳಿಸಿದರು. ಹಿಡಕಲ್ ಡ್ಯಾಮ್ ಪಕ್ಕದಲ್ಲಿ ಮನರೇಗಾ ಯೋಜನೆಯಡಿ ಮಿಯಾವಾಕಿ ಪದ್ದತಿಯಲ್ಲಿ ಅರಣ್ಯೀಕರಣ ಮಾಡಿರುವ ಕಾಮಗಾರಿ ಅದ್ಭುತವಾಗಿ ಅನುಷ್ಠಾನಗೊಂಡಿದ್ದು, ಇನ್ನೇರಡು ವರ್ಷದಲ್ಲಿ ಗಿಡಗಳು ಎತ್ತರಕ್ಕೆ ಬೆಳೆದಾಗ ಅವುಗಳ ಮಧ್ಯ ಸುತ್ತಲು ಸಾಮಾನ್ಯ ಜನರಿಗೆ ಓಡಾಡಲು ಅವಕಾಶ ಮಾಡಿ ಕೊಡಬೇಕು ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗುತ್ತದೆ ಹಾಗೂ ಪರಿಸರದ ಕಾಳಜಿ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸಬಹುದಾಗಿದೆ ಎಂದು ಅಧಿಕಾರಿಗಳಿಗೆ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ನಿರ್ಮಿಸುವಾಗ ಅಕ್ಕ ಪಕ್ಕದಲ್ಲಿರುವ ಕೆರೆ, ಹಳ್ಳಗಳನ್ನು ಹೂಳೆತ್ತಿ ಅದೇ ಮಣ್ಣನ್ನು ರಸ್ತೆ ನಿರ್ಮಾಣ ಮಾಡಲು ಉಪಯೋಗಿಸುವುದರಿಂದ ಕೆರೆಗಳ ನೀರು ಸಂಗ್ರಹಣೆ ಕೂಡಾ ಹೆಚ್ಚಾಗುತ್ತದೆ. ಅಲ್ಲದೇ ರಸ್ತೆಗಳ ನಿರ್ಮಾಣಕ್ಕೆ ಮಣ್ಣು ಸಿಗುತ್ತದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಇಂತಹ ಕಾಮಗಾರಿಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನೀರಿನ ಸಂರಕ್ಷಣೆಯಲ್ಲಿ ಮಳೆ ನೀರು ಕೊಯ್ಲು ಕಾಮಗಾರಿಗಳನ್ನು ಜಿಲ್ಲೆಯಾದ್ಯಂತ ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಸರ್ಕಾರಿ ಕಟ್ಟಡ, ಶಾಲಾ-ಕಾಲೇಜುಗಳ ಕಟ್ಟಡಗಳಲ್ಲಿ ಕಾಮಗಾರಿಗಳನ್ನು ತೆಗೆದುಕೊಳ್ಳಿ ಸಾಂಪ್ರದಾಯಿಕ ಮತ್ತು ಇತರೆ ಜಲಮೂಲಗಳು, ಕೆರೆ-ಕಟ್ಟೆಗಳ ನವೀಕರಣ ಕೊಳವೆ ಬಾವಿಗಳ ಮರುಪೂರಣ, ಜಲಾನಯನ ಅಭಿವೃದ್ಧಿ, ಅರಣ್ಯೀಕರಣ ಕಾಮಗಾರಿಗಳನ್ನು ಹೆಚ್ಚಾಗಿ ತೆಗೆದುಕೊಳ್ಳಿ ಎಂದರು. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ನೂರು ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿಕೊಂಡು ರಿಡ್ಜಟು ವ್ಯಾಲಿ ಕಾನ್ಸಪ್ಟನ ಅಡಿ ಮೈಕ್ರೊ ಪ್ಲಾನ್ ಗಳನ್ನು ಮಾಡಿ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡು ಜಲ ಶಕ್ತಿ ಅಭಿಯಾನದ ಮಾದರಿ ಗ್ರಾಮಗಳನ್ನಾಗಿ ಮಾಡಬೇಕೆಂದು ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಸೆಂಟ್ರಲ್ ಗ್ರೌಂಡ ವಾಟರ್ ಬೊರ್ಡ್ ವಿಜ್ಞಾನಿ ಡಾ.ಸುಚೆತನಾ ಬಿಸ್ವಾಸ್, ಯೋಜನಾ ನಿರ್ದೇಶಕ ರವಿ ಎನ್.ಬಂಗಾರೆಪ್ಪನವರ ಸೇರಿದಂತೆ ಕೃಷಿ, ತೋಟಗಾರಿಕೆ, ಅರಣ್ಯ, ಜಿಯೋಲಾಜಿಕಲ್ ಇಲಾಖೆ, ಸಣ್ಣ ನೀರಾವರಿ, ನ್ಯಾಷನಲ್ ಹೈವೆ, ನಗರಾಭಿವೃದ್ಧಿ ಕೋಶ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.