ಮುಕ್ತ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ
ಕನ್ನಡಪ್ರಭ ವಾರ್ತೆ ಕುಷ್ಟಗಿಇತ್ತೀಚಿನ ದಿನಗಳಲ್ಲಿ ಕವಿಗಳ ಸಂಖ್ಯೆ ಹೆಚ್ಚುತ್ತಿದೆ. ಹೊರತು ಗುಣಾತ್ಮಕ ಹಾಗೂ ರಚನಾತ್ಮಕ ಕವಿತೆ ಸೃಷ್ಟಿಯಾಗುತ್ತಿಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಮುಕ್ತ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕವಿಗಳು ಸಾಹಿತ್ಯದ ಪರಂಪರೆ ಅಧ್ಯಯನ ಮಾಡುವ ಮೂಲಕ ಕವಿತೆ ರಚನೆ ಮಾಡಬೇಕು ಎಂದರು.ಕುಷ್ಟಗಿಯಲ್ಲಿ ಕಳೆದ 2 ವರ್ಷಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸಮ್ಮೇಳನ ಮಾಡಲು ಮುಂದಾಗಬೇಕು. ಆ ಕಾರ್ಯಕ್ರಮದ ಮೂಲಕ ಉತ್ತಮ ವಿಚಾರ ಪಸರಿಸುವ ಕೆಲಸ ಮಾಡಬೇಕು. ಸಮ್ಮೇಳನಕ್ಕೆ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದರು.
ಉಪನ್ಯಾಸಕ ಡಾ. ನಾಗರಾಜ ಹೀರಾ ಪ್ರಾಸ್ತಾವಿಕವಾಗಿ ಮಾತನಾಡಿ, ಕವಿತೆಗಳು ಮನಸ್ಸನ್ನು ಕಟ್ಟುವ ಕೆಲಸ ಮಾಡುವಂತಿರಬೇಕು. ಅಂತಹ ಗುಣಾತ್ಮಕ ಕೃತಿಗಳನ್ನು ರಚನೆ ಮಾಡಬೇಕಿದೆ ಎಂದರು. ಒಬ್ಬ ಕವಿಯು ಸಾಮಾಜಿಕ ಬದ್ಧತೆ ಹೊಂದಿರಬೇಕು. ಸಾಹಿತ್ಯದ ಕುರಿತು ಇರುವ ಪರಂಪರೆ ಅರಿತುಕೊಂಡಿರಬೇಕು. ಹೃದಯ ವಿಶಾಲತೆ, ತಾಳ್ಮೆಇರಬೇಕು. ಮುಖ್ಯವಾಗಿ ತಾವು ಬರೆದಂತಹ ಕವಿತೆಯ ಅರ್ಥವನ್ನು ಇತರರಿಗೂ ತಿಳಿಸುವ ಸಾಮರ್ಥ್ಯ ಹೊಂದಿರಬೇಕು ಎಂದರು.ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಎಂ. ಮದರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಆಯುವ ಕವಿಯಾಗಬಾರದು, ಇಯುವ ಕವಿಯಾಗಬೇಕು. ಕಾವ್ಯದಿಂದ ಆಂತರಿಕವಾಗಿ ಬೆಳವಣಿಗೆಯಾಗಬೇಕು. ಕವಿಯು ವಚನ ಸಾಹಿತ್ಯ, ಜನಪರ ಸಾಹಿತ್ಯ ಸೇರಿದಂತೆ ಅನೇಕ ಸಾಹಿತ್ಯದ ಪುಸ್ತಕಗಳನ್ನು ಓದಬೇಕು ಎಂದರು.
ತಾಜುದ್ದೀನ್ ದಳಪತಿ, ಶಿವಕುಮಾರ ಗಂಧದಮಠ, ಗವಿಸಿದ್ದಪ್ಪ ಉಪ್ಪಾರ, ಜಿ.ಎಸ್. ಶರಣು, ಹುಸೇನಸಾಬ ಹುಲಿಯಾಪುರ, ಮೀನಾಕ್ಷಿ ಓಲೇಕಾರ, ಶ್ರೀಕಾಂತ ಬೆಟಗೇರಿ, ಶ್ರೀನಿವಾಸ ದೇಸಾಯಿ, ಮಹೇಶ ಹಡಪದ, ಅನಿಲಕುಮಾರ ಕಮ್ಮಾರ, ವೀರೇಶ ಬಂಗಾರಶೆಟ್ಟರ, ಲೆಂಕೆಪ್ಪ ವಾಲಿಕಾರ, ಶೇಖುಬಾಬು ಕುಷ್ಟಗಿ, ಮಂಜುನಾಥ ಗುಳೇದಗುಡ್ಡ, ಡಾ. ನಾಗರಾಜ ಹೀರಾ, ಮೌನೇಶ ನವಲಳ್ಳಿ ಸೇರಿದಂತೆ ಅನೇಕರು ಕವಿತೆ ವಾಚಿಸಿದರು.ಕೇಂದ್ರ ಕಸಾಪ ಪ್ರತಿನಿಧಿ ನಬಿಸಾಬ ಕುಷ್ಟಗಿ, ರೈತ ಸಂಘದ ಮುಖಂಡ ನಜಿರಸಾಬ ಮೂಲಿಮನಿ, ಮಲ್ಲಪ್ಪ ಕುದರಿ, ಜಾನಪದ ಕಲಾವಿದ ಶರಣಪ್ಪ ವಡಗೇರಿ, ತಾಜುದ್ದೀನ ದಳಪತಿ, ಕಸಾಪ ಅಧ್ಯಕ್ಷ ವೀರೇಶ ಬಂಗಾರಶೆಟ್ಟರ, ರವೀಂದ್ರ ಬಾಕಳೆ, ಸೇರಿದಂತೆ ಅನೇಕರು ಇದ್ದರು. ನಾಗರಾಜ ಬಡಿಗೇರ ಪ್ರಾರ್ಥಿಸಿ, ಮಹೇಶ ನೆರೆಬೆಂಚಿ ನಿರೂಪಿಸಿ, ಬಸವರಾಜ ಗಾಣಿಗೇರ ನಿರ್ವಹಿಸಿದರು.