ಕನ್ನಡಪ್ರಭ ವಾರ್ತೆ ತುಮಕೂರು
ನವಿರಾಗಿ ಕಥೆ ಹೇಳುವ, ಕಥೆಯಲ್ಲಿ ಜೀವಿಸುವ, ಹಳೆಯದನ್ನು ಬ್ರೇಕ್ ಮಾಡಿ ಹೊಸತನ್ನು, ನವ ಆಲೋಚನೆಗಳನ್ನು ದೃಶ್ಯ ಮಾಧ್ಯಮ ಬಯಸುತ್ತದೆ. ಇವೆಲ್ಲಕ್ಕೂ ಬರವಣಿಗೆ ದೃಶ್ಯ ಮಾಧ್ಯಮದ ಜೀವಾಳವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕಥೆಗಾರ, ಹಿರಿಯ ಪತ್ರಕರ್ತ ವಿಕಾಸ್ ನೇಗಿಲೋಣಿ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಶುಕ್ರವಾರ ಹಮ್ಮಿಕೊಂಡಿದ್ದ ಟಿವಿ ಮನರಂಜನಾ ಕ್ಷೇತ್ರದಲ್ಲಿರುವ ಅವಕಾಶಗಳು ಕುರಿತ ವಿಶೇಷ ಉಪನ್ಯಾಸ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಮ್ಮಿ ಸಮಯದಲ್ಲಿ ಹೆಚ್ಚು ವಿಚಾರವನ್ನು ಪರಿಣಾಮಕಾರಿಯಾಗಿ ತಲುಪಿಸುವುದು ದೃಶ್ಯ ಮಾಧ್ಯಮಕ್ಕಿರುವ ಸವಾಲು. ಸಾಮಾನ್ಯ ಮನರಂಜನಾ ವಾಹಿನಿಗಳು ಕೆಲವು ವರ್ಷಗಳಿಂದಷ್ಟೇ ಕಾರ್ಯನಿರ್ವಹಿಸುತ್ತಿವೆ. ಕಳೆದ 20 ವರ್ಷಗಳಿಂದ ಹೊಸ ಆವೃತ್ತಿಗೆ ತೆರೆದಿರುವ ಟಿವಿ ಮಾಧ್ಯಮ ಜನರನ್ನುತಲುಪಲು ಪ್ರಾಥಮಿಕ ಹಂತವನ್ನು ದಾಟಿದ ವಾಹಿನಿಯಾಗಿ ಹೊರಹೊಮ್ಮಿದೆ ಎಂದರು.ನಾವು ಬರೆಯುವ ಕಥೆ ದೃಶ್ಯರೂಪದಲ್ಲಿ ಹೊರಬಂದಾಗ ಲೋಕ ಸಂಚಾರ ಮಾಡುವಂತಿರಬೇಕು. ಕಥೆಗಾರರಾಗಿ ಹೊರಹೊಮ್ಮುವ ಬಯಕೆ ಇದ್ದವರು ಪುಸ್ತಕ ಓದಿನ ಅಭ್ಯಾಸ, ದಿನನಿತ್ಯ ಹೊಸತೇನಾದರೂ ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು. ಕಥೆಗಳನ್ನು ಹುಡುಕಲು, ಹೊಸತನವನ್ನು ಹೊರತರಲೆಂದೇ ಚಾನೆಲ್‌ಗಳಲ್ಲಿ ಐಡಿಯೇಶನ್ ವಿಭಾಗದ ಪರಿಕಲ್ಪನೆ ಆರಂಭವಾಗುತ್ತಿದೆ. ಬರೆಯುವ ಇಚ್ಛಾಶಕ್ತಿಯುಳ್ಳ, ನೂತನ ಪ್ರಯೋಗಕ್ಕೆ ಒಳಪಡಿಸಿಕೊಳ್ಳುವ ಯುವಕರ ಅವಶ್ಯಕತೆ ಮನರಂಜನಾ ಕ್ಷೇತ್ರ ಬಯಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು, ಟಿವಿ ಮಾಧ್ಯಮ ಹೆಚ್ಚು ಅವಕಾಶಗಳಿರುವ ಕ್ಷೇತ್ರ. ಅವಕಾಶಗಳನ್ನು ಅನುಭವಿಸಬೇಕು. ಸಮಾಜದ ಧ್ವನಿಯಾಗಬೇಕು, ವಾಹಿನಿಯಾಗಬೇಕು. ವಿಭಿನ್ನ ಆಲೋಚನೆಯ ವ್ಯಕ್ತಿತ್ವ ಮಾಧ್ಯಮ ವಿದ್ಯಾರ್ಥಿಗಳದ್ದಾಗಬೇಕು. ಉತ್ತಮ ವಿದ್ಯಾರ್ಥಿಯಾದರೇ ಉತ್ತಮ ಶಿಕ್ಷಕನಾಗಬಹುದು, ಉತ್ತಮ ಶಿಕ್ಷಕನಾದರೇ ಗುಣಮಟ್ಟ ವಿದ್ಯಾರ್ಥಿಗಳನ್ನು ಹೊರತರಬಹುದು ಎಂದರು.ವಿಭಾಗದ ಸಂಯೋಜಕ ಡಾ. ಸಿಬಂತಿ ಪದ್ಮನಾಭ ಕೆ.ವಿ. ಮಾತನಾಡಿ, ಹೆಚ್ಚು ಅವಕಾಶಗಳಿರುವ, ವೀಕ್ಷಕರಿರುವ, ಆದಾಯವಿರುವ ಕ್ಷೇತ್ರ ಟಿವಿ ಮಾಧ್ಯಮ. ನಮ್ಮ ಸೃಜನಶೀಲತೆಯನ್ನು ಅನ್ವಯಿಸುವುದಕ್ಕೆ ಟಿವಿ ಮಾಧ್ಯಮ ದೊಡ್ಡಕ್ಷೇತ್ರವಾಗಿದೆ. ನೂರಾರು ಮಂದಿ ಕಲಾವಿದರು, ತಾಂತ್ರಿಕ ಸಹಾಯಕರಿಂದಾಗಿಯೇ ಮನರಂಜನಾ ಕ್ಷೇತ್ರ ಎತ್ತರಕ್ಕೆ ಬೆಳೆದಿರುವುದು ಎಂದರು.
ಕಾರ್ಯಕ್ರಮದ ಸಲುವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು ಹಾಗೂ ಅತಿಥಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ಡಾ. ಪೃಥ್ವಿರಾಜ ಟಿ., ಕೋಕಿಲ ಎಂ.ಎಸ್., ವಿನಯ್ ಕುಮಾರ್ ಎಸ್. ಎಸ್., ತಾಂತ್ರಿಕ ಸಹಾಯಕ ಅಭಿಷೇಕ್ ಎಂ. ವಿ. ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.