ಶಿವಾನಂದ ಗೊಂಬಿ
ಹುಬ್ಬಳ್ಳಿ: ಮನೆ ಮನೆಗೆ ಕಸ ಸಂಗ್ರಹಿಸುವ ಆಟೋ ಟಿಪ್ಪರ್‌ಗಳ ಚಾಲಕರ ಕ್ರಿಮಿನಲ್ ರೆಕಾರ್ಡ್ ಚೆಕ್ ಮಾಡಲು ಪಾಲಿಕೆ ಮುಂದಾಗಿದೆ. ಜತೆಗೆ ಪ್ರತಿದಿನ ಬೆಳಗ್ಗೆ ಮದ್ಯಪಾನ ಮಾಡಿದ್ದಾರೆಯೇ ಎಂಬುದರ ತಪಾಸಣೆಯನ್ನೂ ಮಾಡುತ್ತಿದೆ.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 12 ವಲಯಗಳಲ್ಲಿ 82 ವಾರ್ಡ್‌ಗಳಿವೆ. 274 ಆಟೋ ಟಿಪ್ಪರ್‌ಗಳಿವೆ. ಇವು ಸಾಕಾಗುವುದಿಲ್ಲ. ಹೀಗಾಗಿ ಇನ್ನು 66 ಆಟೋ ಟಿಪ್ಪರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಪಾಲಿಕೆ ಟೆಂಡರ್ ಕರೆದಿದೆ.
ಕ್ರಿಮಿನಲ್ ರೆಕಾರ್ಡ್?: ಕಳೆದ ತಿಂಗಳು ಆಟೋ ಟಿಪ್ಪರ್ ಚಾಲಕನೊಬ್ಬ ನಿರ್ಲಕ್ಷ್ಯವಾಗಿ ವಾಹನ ಚಲಾಯಿಸಿ 5 ವರ್ಷದ ಬಾಲಕಿ ಮೇಲೆ ಹರಿಸಿದ್ದ. ಇದರಿಂದಾಗಿ ಆ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಳು. ಕಸ ಎಸೆಯಲೆಂದು ಮನೆಯಿಂದ ಹೊರಗೆ ಬಂದಿದ್ದ ಮಗು. ಅಷ್ಟರೊಳಗೆ ಈ ಘಟನೆ ನಡೆದಿತ್ತು. ಇದಕ್ಕೆ ಇಡೀ ನಾಗರಿಕ ಸಮಾಜವೇ ಮಮ್ಮಲ ಮರಗಿತ್ತು. ಈ ಕುರಿತು ಪಾಲಿಕೆ ₹1 ಲಕ್ಷ ಪರಿಹಾರ ಕೊಡುವುದಾಗಿ ಘೋಷಿಸಿತ್ತು. ಅದರಂತೆ ಕೊಟ್ಟಿದ್ದೂ ಆಗಿದೆ.ಆದರೆ, ಆ ಘಟನೆಯ ಬಳಿಕ ಹಲವೆಡೆ ಅಟೋ ಟಿಪ್ಪರ್‌ಗಳನ್ನು ಲೈಸನ್ಸ್ ಇಲ್ಲದವರು ಚಲಾಯಿಸುವುದು, ಟಿಪ್ಪರ್ ಚಾಲಕರು ಸಹ ಬೇರೊಬ್ಬರಿಗೆ ನೀಡುವ ಪ್ರಸಂಗಗಳು ಕಂಡು ಬಂದಿದ್ದವು. ಟಿಪ್ಪರ್‌ಗಳ ಚಾಲಕರು ಬೆಳಗ್ಗೆಯೇ ಮದ್ಯ ಸೇವನೆ ಮಾಡಿಯೇ ವಾಹನ ಓಡಿಸುವುದು ಬೆಳಕಿಗೆ ಬಂದಿತ್ತು. ಮತ್ತೆ ಕೆಲವರಿಗೆ ಕ್ರಿಮಿನಲ್ ರೆಕಾರ್ಡ್ ಇರುವ ಸಾಧ್ಯತೆ ಬಗ್ಗೆಯೂ ಪಾಲಿಕೆಯೂ ಸದಸ್ಯರು ಸಂಶಯ ವ್ಯಕ್ತಪಡಿಸಿದ್ದರು.
ಹೀಗಾಗಿ ಮಹಾನಗರ ಪಾಲಿಕೆ ಎಲ್ಲ ಆಟೋ ಟಿಪ್ಪರ್‌ಗಳ ಚಾಲಕರ ಹಿನ್ನೆಲೆಯನ್ನು ಚೆಕ್ ಮಾಡಲು ನಿರ್ಧರಿಸಿತು. ಅದರಂತೆ ಚಾಲಕರ ದಾಖಲೆಗಳನ್ನೆಲ್ಲ ಪಡೆಯಲಾಗಿದೆ. ಅವುಗಳನ್ನು ಪೊಲೀಸ್ ಆಯುಕ್ತಾಲಯಕ್ಕೆ ಕಳುಹಿಸಿ ಕ್ರಿಮಿನಲ್ ರೆಕಾರ್ಡ್ ಪರಿಶೀಲನೆ ಮಾಡಲಾಗುತ್ತಿದೆ. ಜತೆಗೆ ಪ್ರತಿದಿನ ಕುಡಿದು ವಾಹನ ಓಡಿಸುತ್ತಾರೋ ಎಂಬುದನ್ನು ತಪಾಸಣೆ ಪೊಲೀಸರು ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಗೆ ಬಳಸುವ ಯಂತ್ರಗಳಂಥವುಗಳನ್ನು ಖರೀದಿಸಲು ಮುಂದಾಗಿದ್ದು, ಈಗಾಗಲೇ ಆರ್ಡರ್ ಕೊಡಲಾಗಿದೆ.ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆಗಾಗಿ 82 ವಾರ್ಡ್‌ಗಳಿಗಾಗಿ 82 ಯಂತ್ರಗಳನ್ನು ಆರ್ಡರ್ ಮಾಡಲಾಗಿದೆ. ಇನ್ನು 2-3 ದಿನಗಳಲ್ಲಿ ಆ ಯಂತ್ರಗಳು ಬರಲಿವೆ. ಅವುಗಳನ್ನು ಪ್ರತಿದಿನ ಬೆಳಗ್ಗೆಯೇ ಪ್ರತಿಯೊಬ್ಬ ಚಾಲಕರ ಮದ್ಯ ಸೇವನೆ ಮಾಡಿದ್ದಾರೆಯೇ ಎಂಬುದನ್ನು ತಪಾಸಣೆ ಮಾಡಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಪ್ರತಿದಿನ ಆರೋಗ್ಯ ನಿರೀಕ್ಷಕರೇ ಚಾಲಕರ ಹಾವಭಾವದಿಂದ ಕುಡಿದಿದ್ದಾರೋ ಏನೋ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಜತೆಗೆ ಯಾವುದೇ ಕಾರಣಕ್ಖೂ ಚಾಲಕರನ್ನು ಬಿಟ್ಟು ಬೇರೆಯವರು ವಾಹನ ಚಲಾಯಿಸುವಂತಿಲ್ಲ ಎಂಬುದನ್ನು ಕಟ್ಟುನಿಟ್ಟಾಗಿ ನೋಡಲಾಗುತ್ತಿದೆ ಎಂದು ಅಧಿಕಾರಿ ವರ್ಗ ತಿಳಿಸುತ್ತದೆ.
ಅಧಿಕಾರಿಗಳೇ ಹೊಣೆ: ಕಸ ವಿಲೇವಾರಿ ಮಾಡುವ ಆಟೋ ಟಿಪ್ಪರ್‌ಗಳ ಚಾಲಕರು ಏನಾದರೂ ನಿರ್ಲಕ್ಷ್ಯ ತೋರಿದರೆ ಅಥವಾ ಬೇರೆಯವರು ಯಾರಾದರೂ ವಾಹನ ಚಲಾಯಿಸುತ್ತಿದ್ದರೆ, ಏನಾದರೂ ಅವಘಡಗಳು ಸಂಭವಿಸಿದರೆ ಸಂಬಂಧ ಪಟ್ಟ ಆರೋಗ್ಯ ನಿರೀಕ್ಷಕರು, ಅಧಿಕಾರಿ ವರ್ಗವನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಪಾಲಿಕೆ ಆಡಳಿತ ಮಂಡಳಿ ನೀಡಿದೆ.ಒಟ್ಟಿನಲ್ಲಿ ಆಟೋ ಟಿಪ್ಪರ್‌ಗಳ ಚಾಲಕರ ಮೇಲೆ ನಿಗಾ ಇಡಲು ಪಾಲಿಕೆ ಮುಂದಾಗಿರುವುದಂತೂ ಸತ್ಯ. ಆದರೆ, ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!
ಆಟೋ ಟಿಪ್ಪರ್‌ಗಳ ಚಾಲಕರ ಮೇಲೆ ಏನಾದರೂ ಕ್ರಿಮಿನಲ್ ರೆಕಾರ್ಡ್ ಇದೆಯೇ ಎಂಬುದನ್ನು ಪರಿಶೀಲಿಸಲು ಪಾಲಿಕೆ ಕ್ರಮ ಕೈಗೊಂಡಿದೆ. ಪೊಲೀಸ್ ಇಲಾಖೆಗೆ ದಾಖಲೆ ಕಳುಹಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಜತೆಗೆ ಕುಡಿದು ವಾಹನ ಚಲಾಯಿಸುವುದನ್ನು ತಪ್ಪಿಸಲು ಪ್ರತಿನಿತ್ಯ ತಪಾಸಣೆಗಾಗಿ ಯಂತ್ರಗಳ ಖರೀದಿ ಮಾಡಲಾಗುತ್ತಿದೆ ಎಂದು ಪಾಲಿಕೆ ಮೇಯರ್ ರಾಮಪ್ಪ ಬಡಿಗೇರ್ ಹೇಳಿದರು.ಸದ್ಯ ಪಾಲಿಕೆಯಲ್ಲಿ 274 ಆಟೋ ಟಿಪ್ಪರ್‌ಗಳಿವೆ. ಇವು ಸಾಕಾಗುತ್ತಿಲ್ಲ. ಆದಕಾರಣ ಇನ್ನೂ 66 ಆಟೋ ಟಿಪ್ಪರ್‌ಗಳನ್ನು ಗುತ್ತಿಗೆ ಆಧಾರದ ಮೇಲೆ ಏಜೆನ್ಸಿಗೆ ಕೊಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ಕ್ರಿಮಿನಲ್ ರೆಕಾರ್ಡ್ ಚೆಕ್ ಮಾಡಲಾಗುತ್ತಿದೆ ಎಂದು ಪಾಲಿಕೆಯ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.