ರಾಜಕಾರಣಿ ಸರಿದಾರಿಯಲ್ಲಿ ಸಾಗಲು ಟೀಕೆ, ಟಿಪ್ಪಣಿ ಅಗತ್ಯ: ಶಾಸಕ ಡಿ.ಜಿ.ಶಾಂತನಗೌಡ

KannadaprabhaNewsNetwork | Published : Jan 29, 2024 1:30 AM

ಸಾರಾಂಶ

ಮಕ್ಕಳನ್ನು ಯಾರ ಮೇಲೂ ಅವಲಂಬಿತರಾಗದಂತೆ ಸ್ವಾವಲಂಬಿಯಾಗಿ ಬದುಕುವಂತೆ ಅವರ ಬೆಳೆಸಬೇಕು. ಪ್ರತಿ ತಂದೆ-ತಾಯಿಗಳು ತಮ್ಮ ಮಕ್ಕಳ ಪ್ರೋತ್ಸಾಹಿಸುವುದು ನೋಡಿದರೆ ಅವರು ತಮ್ಮ ಮಕ್ಕಳಿಗೆ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಎನಿಸುತ್ತದೆ. ಆದರೆ ಅದೇ ಮಕ್ಕಳು ಮುಂದೆ ಅವರನ್ನು ಅನಾಥಾಶ್ರಮಗಳಿಗೆ ಕಳಿಸುವಂತಾಗಬಾರದು ಅಂತಹ ಗುಣಗಳ ಮಕ್ಕಳಿಗೆ ಕಲಿಸಬೇಕು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರಸ್ತುತ ದಿನಗಳಲ್ಲಿ ರಾಜಕಾರಣಿಗಳು ಎಷ್ಟೇ ಉತ್ತಮ ಮಾತುಗಳನ್ನಾಡಿದರು ಜನತೆ ಅವುಗಳ ರಾಜಕೀಯ ದೃಷ್ಟಿಕೋನದಿಂದಲೇ ನೋಡುವ ಪರಿಸ್ಥಿತಿಗೆ ತಲುಪಿದ್ದೇವೆ. ಟೀಕೆ, ಟಿಪ್ಪಣಿಗಳಿದ್ದಾಗ ಮಾತ್ರ ಒಬ್ಬ ರಾಜಕಾರಣಿ ಸರಿದಾರಿಯಲ್ಲಿ ನಡೆಯಲು ಸಾಧ್ಯ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 2022-23ನೇ ಸಾಲಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪೋಷಕರು ಮಕ್ಕಳನ್ನು ಯಾರ ಮೇಲೂ ಅವಲಂಬಿತರಾಗದಂತೆ ಸ್ವಾವಲಂಬಿಯಾಗಿ ಬದುಕುವಂತೆ ಅವರ ಬೆಳೆಸಬೇಕು. ಪ್ರತಿ ತಂದೆ-ತಾಯಿಗಳು ತಮ್ಮ ಮಕ್ಕಳ ಪ್ರೋತ್ಸಾಹಿಸುವುದು ನೋಡಿದರೆ ಅವರು ತಮ್ಮ ಮಕ್ಕಳಿಗೆ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಎನಿಸುತ್ತದೆ. ಆದರೆ ಅದೇ ಮಕ್ಕಳು ಮುಂದೆ ಅವರನ್ನು ಅನಾಥಾಶ್ರಮಗಳಿಗೆ ಕಳಿಸುವಂತಾಗಬಾರದು ಅಂತಹ ಗುಣಗಳ ಮಕ್ಕಳಿಗೆ ಕಲಿಸಬೇಕು. ಇಡೀ ಜಗತ್ತು ನಮ್ಮ ಅಂಗೈಯಲ್ಲಿದೆ, ಆದರೆ ನಮ್ಮ ಮಕ್ಕಳು ನಮ್ಮ ಕೈಯಲ್ಲಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಿವಮೊಗ್ಗದ ಮೇಜರ್ ಸಿ.ಎಸ್.ಆನಂದ್ ಉಪನ್ಯಾಸ ನೀಡಿ, ಸಂವಿಧಾನದ ಬಗ್ಗೆ ಪ್ರತಿಯೊಬ್ಬ ನಾಗರಿಕರು ಗೌರವ ಕೊಡುವುದನ್ನು ಸೈನಿಕರಿಂದ ಕಲಿಯಬೇಕಿದೆ. ಪ್ರತಿಯೊಬ್ಬರು ಕಾನೂನು ಮುರಿಯೋದು ನಮ್ಮ ಕರ್ತವ್ಯ ಎನ್ನುವ ರೀತಿಯಲ್ಲಿದ್ದೇವೆ. ಏಕೆಂದರೆ ನಾವುಗಳೇ ಸರಿ ಇಲ್ಲ, ಹೀಗಾಗಿ ನಾವು ಮಕ್ಕಳಿಗೆ ಸಂವಿಧಾನದ ಬಗ್ಗೆ ಏನನ್ನು ಬೋಧಿಸಲು ಸಾಧ್ಯ. ಮೊದಲು ನಾವು ಸಂವಿಧಾನ, ಕಾನೂನುಗಳಿಗೆ ಗೌರವ ಕೊಟ್ಟರೆ ನಮ್ಮ ಮಕ್ಕಳು ಗೌರವ ತೋರಿದರೆ ಅದನ್ನು ಅನುಸರಿಸುತ್ತಾರೆ. ಆದ್ದರಿಂದ ಎಲ್ಲರೂ ಸಂವಿಧಾನಕ್ಕೆ ಗೌರವ ಕೊಡುವುದು ಕಲಿಯಬೇಕು. ನಮ್ಮ ಮಕ್ಕಳಿಗೂ ಕಲಿಸಬೇಕು ಎಂದು ಹೇಳಿದರು.

ಬ್ಯಾಂಕಿನ ಅಧ್ಯಕ್ಷ ಪಿ.ಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಾಧ್ಯಕ್ಷರಾದ ಬಿ.ಕೆಂಚಪ್ಪ, ನಿರ್ದೇಶಕರಾದ ಕೆ.ಎಸ್. ಶಿವಕುಮಾರ್, ಡಿ.ಜಿ.ಎನ್. ಚನ್ನವೀರಪ್ಪ, ಎಂ.ಸತೀಶ್, ಕೆ.ಜಿ. ಕರಿಬಸಪ್ಪ, ಎನ್.ಇ. ಚೇತನ್‍ಕುಮಾರ್, ಯಶೋದಮ್ಮ, ಎನ್. ಕೃಷ್ಣಾನಾಯ್ಕ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಡಿ.ಜಿ. ವಿಶ್ವನಾಥ್, ತಾಲ್ಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎ. ಗದ್ದಿಗೇಶ್ ಉಪಸ್ಥಿತರಿದ್ದರು.

ಸೊಸೈಟಿಯ ಕಾರ್ಯದರ್ಶಿ ಎಚ್.ಎನ್. ರುದ್ರೇಶ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸುಮಾರು 50 ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನಡೆಸಿಕೊಡಲಾಯಿತು.

Share this article