ಕನ್ನಡಪ್ರಭ ವಾರ್ತೆ ಹಾವೇರಿ
ಬೆಳೆ ಪರಿಹಾರ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಸೋಮವಾರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಜಿಲ್ಲೆಯ ರೈತರು ಹಿಂದೆಂದೂ ಕಾಣದಂತಹ ಬರಗಾಲ ಕಂಡು, ಎರಡೆರಡು ಬಾರಿ ಬಿತ್ತನೆ ಮಾಡಿ ಬೆಳೆ ಬಾರದಂತಾಗಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿ ಮನನೊಂದು ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಹಾಯಕ್ಕೆ ಬಾರದೆ ಲೋಕಸಭೆ ಚುನಾವಣೆಯ ಗುಂಗಿನಲ್ಲಿವೆ.
ಪರಿಹಾರ ಕೇಳಿದರೆ ಕೇಂದ್ರದ ಕಡೆ ರಾಜ್ಯ, ರಾಜ್ಯದ ಕಡೆ ಕೇಂದ್ರ ಸರ್ಕಾರ ಬೆರಳು, ತೋರಿಸುತ್ತಾ ಕಾಲ ಕಳೆಯುತ್ತಿದ್ದಾರೆ. ರಾಜ್ಯ ಸರ್ಕಾರವು ಕಾಟಾಚಾರಕ್ಕೆಂದು ಇತ್ತೀಚೆಗೆ ಬೆಳೆ ಪರಿಹಾರವಾಗಿ ₹2000 ಘೋಷಿಸಿರುವುದು ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎಂಬಂತಾಗಿದೆ. ಬೆಳೆ ಪರಿಹಾರವನ್ನು ಯಾವ ಮಾನದಂಡದಲ್ಲಿ ಅಂದರೆ ಪ್ರತಿ ಎಕರೆಗೋ? ಪ್ರತಿ ಹೆಕ್ಟೇರಿಗೋ? ಎಂಬುವ ಮಾರ್ಗದರ್ಶನವಿಲ್ಲದೆ ಘೋಷಿಸಿರುವುದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದರು.
ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಯ ರೈತರು ನೀರಾವರಿ ಬೆಳೆಗಳನ್ನು ಬೆಳೆಯಬೇಕೆಂದು ಪ್ರತಿದಿನ 300 ಕೊಳವೆ ಬಾವಿಗಳನ್ನು ಕೊರೆಯಿಸುತ್ತಿದ್ದಾರೆ. ಆದರೆ ಸರ್ಕಾರವು ರೈತರಗೆ ಉಪಯೋಗವಾಗುತ್ತಿದ್ದ ಆಕ್ರಮ-ಸಕ್ರಮ ಯೋಜನೆಯನ್ನು ರದ್ದುಗೊಳಿಸಿದ್ದರಿಂದ ಅನೇಕ ರೈತರು ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕವಿಲ್ಲದೆ ತೊಂದರೆಗೀಡಾಗಿದ್ದಾರೆ.
ಸರ್ಕಾರ ಯೋಜನೆ ರದ್ದುಗೊಳಿಸಬೇಕಾದರೆ ಸಾರ್ವಜನಿಕರ ಅಕ್ಷೇಪಣೆ ಕರೆದು ಕಾಲಾವಕಾಶ ನೀಡಿ ರದ್ದುಗೊಳಿಸಬೇಕು. ಆದರೆ ಸರ್ಕಾರವು ಈ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ಏಕಾಏಕಿ ಯೋಜನೆ ರದ್ದುಪಡಿಸಿದ್ದು ಖಂಡನೀಯ. ವಿದ್ಯುತ್ ಪ್ರವರ್ತಕಗಳ ಸಾಮರ್ಥ್ಯವನ್ನು ಹೆಚ್ಚು ಮಾಡಿ ಐ.ಪಿ. ಸೆಟ್ಟುಗಳಿಗೆ ಹಗಲು ಹೊತ್ತಿನಲ್ಲಿ ನಿರಂತರವಾಗಿ ವಿದ್ಯುತ್ ಪೂರೈಸುವಂತೆ ಒತ್ತಾಯ ಮಾಡಿ ಹಲವಾರು ಬಾರಿ ಪ್ರತಿಭಟಿಸಿದರೂ ಸರಕಾರ ನಿರ್ಲಕ್ಷ್ಯ ತೋರಿದೆ. ಕಾರಣ ಈ ಕೂಡಲೇ ಎಚ್ಚೆತ್ತುಕೊಂಡು ಅಕ್ರಮ-ಸಕ್ರಮ ಯೋಜನೆಯನ್ನು ಪುನಃ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಎನ್.ಓ.ಸಿ. ಕೇಳುತ್ತಿರುವುದು ಯಾವ ನ್ಯಾಯ. ಬೇರೆ ಜಿಲ್ಲೆಗಳಿಗೆ ಅನ್ವಯವಾಗದ ಕಾನೂನು ನಮ್ಮ ಜಿಲ್ಲೆಯ ರೈತರಿಗೆ ಏಕೆ? ತೋಟಗಾರಿಕೆ ಬೆಳೆಗಳಾದ ಅಡಕೆ, ಬಾಳೆ, ತೆಂಗು, ಇವುಗಳಿಗೆ ಹನಿ ನೀರಾವರಿ ಅಳವಡಿಸಿಕೊಂಡು ಬೆಳೆ ಬೆಳೆಯುತ್ತಾರೆ.
ಮಧ್ಯಂತರ ಬೆಳೆಯಾಗಿ ಮೆಕ್ಕೆಜೋಳ, ಸೋಯಾಅವರೇ ಮುಂತಾದ ಬೆಳೆಗಳನ್ನು ಬೆಳೆಯಬೇಕಾದರೆ ತುಂತುರು ನೀರಾವರಿ ಪರಿಕರಗಳು ಬೇಕಾಗುತ್ತವೆ. ಸರ್ಕಾರದ ರಿಯಾಯತಿ ದರದಲ್ಲಿ ನೀಡುತ್ತಿದ್ದ ಪರಿಕರಗಳು ಕಳಪೆಯಾಗಿರುವುದರಿಂದ 7 ವರ್ಷಗಳ ಬದಲಾಗಿ ಮೊದಲಿನಂತೆ 3 ವರ್ಷ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಮೇಲಿನ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಜ.23ರಿಂದ ಜಿಲ್ಲಾಡಳಿತ ಭವನ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು. ಅಲ್ಲದೇ ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿ ಅಪರ ಜಿಲ್ಲಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ರೈತ ಸಂಘದ ಪ್ರಮುಖರಾದ ಶಿವಬಸಪ್ಪ ಗೋವಿ, ಗಂಗಣ್ಣ ಎಲಿ, ದಿಳ್ಳೇಪ್ಪ ಮಣ್ಣೂರ, ರಾಜು ತರ್ಲಗಟ್ಟ, ಮರಿಗೌಡ್ರ ಪಾಟಿಲ, ರಮೇಶಗೌಡ ಕರಬಳ್ಳೆರ, ಮುತ್ತಪ್ಪ ಗುಡಗೇರಿ, ಚನ್ನಪ್ಪ ಮರಡೂರ, ಪ್ರಭುಗೌಡ ಪ್ಯಾಟಿ, ಫಯಾಜಸಾಬ್ ದೊಡ್ಡಮನಿ, ಶಿವಯೋಗಿ ಹೊಸಗೌಡ್ರ, ಶ್ರೀಕಾಂತ ಡುಂಡಂಣನವರ, ರುದ್ರಪ್ಪ ಅಣ್ಣಿ, ಶಂಭಣ್ಣ ಮತಗಿ ಇತರರು ಇದ್ದರು.
ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಹಗಲುಗನಸು: ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪಿಸಬೇಕೆಂದು ನಿರಂತರ 25 ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿದ್ದರೂ, ನಮ್ಮ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಹಗಲುಗನಸಾಗಿದೆ. ನಮ್ಮ ಜಿಲ್ಲೆಯ ರೈತರಿಗೆ ಮೂರು ಲಕ್ಷಗಳವರೆಗೆ ಶೂನ್ಯ ಬಡ್ಡಿ ಆಧಾರದ ಸಾಲ ಕೊಡುವ ಯೋಜನೆಯಿಂದ ವಂಚಿತರಾಗಿದ್ದಾರೆ.
ಇತ್ತೀಚೆಗೆ ಸರ್ಕಾರ ₹5 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವಂತೆ ನಿರ್ದೇಶನ ನೀಡಿದ್ದರೂ, ಕೆಸಿಸಿ ಬ್ಯಾಂಕ್ ಧಾರವಾಡದವರು ಸಾಲ ನೀಡುತ್ತಿಲ್ಲ. ಸರ್ಕಾರದ ಯೋಜನೆಯು ರೈತರಿಗೆ ತಲುಪಬೇಕಾದರೆ ನಮ್ಮ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.