ಧಾರವಾಡ:
ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ಪೂರೈಸುವ ಪೈಪ್‌ಲೈನ್ ಒಡೆದ ಪರಿಣಾಮ ಅಪಾರ ಪ್ರಮಾಣ ನೀರು ಸೋರಿಕೆಯಾಗಿದ್ದಲ್ಲದೇ ರೈತರೊಬ್ಬರ ಹೊಲದಲ್ಲಿನ ಸಂಪೂರ್ಣ ಬೆಳೆ ನಾಶವಾಗಿದೆ.ಮಲಪ್ರಭಾ ಅಣೆಕಟ್ಟೆಯಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೆ ನೀರು ಪೂರೈಸುವ ಪೈಪ್‌ಲೈನ್ ತಾಲೂಕಿನ ಮರೇವಾಡ ಬಳಿ ಕಳೆದ ಆ. 12ರಂದು ಒಡೆದಿದೆ. ರೈತ ಕುಶಾಲ ಕೋರಕೊಪ್ಪ ತಮ್ಮ ಹೊಲದಲ್ಲಿ ಪೈಪ್‌ಲೈನ್ ಒಡೆದಿದೆ ಎಂದು ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳಿಗೆ ದೂರು ಸಹ ನೀಡಿದ್ದರು. ಆದರೆ, ಸಕಾಲಕ್ಕೆ ಪೈಪ್‌ಲೈನ್ ದುರಸ್ತಿ ಮಾಡದ ಹಿನ್ನೆಲೆಯಲ್ಲಿ ಹೊಲದಲ್ಲಿನ ಟೊಮೇಟೊ, ಆಲೂಗಡ್ಡೆ ಬೆಳೆ ಹಾಳಾಗಿದ್ದು ಲಕ್ಷಾಂತರ ರುಪಾಯಿ ಹಾನಿಯಾಗಿದೆ.
ಒಂದು ಎಕರೆ ಪ್ರದೇಶದಲ್ಲಿ ಬೆಳೆ ಬೆಳೆಯಲು ಟೊಮೇಟೊಗೆ ₹ 1.20 ಲಕ್ಷ ಹಾಗೂ ಆಲೂ ಬೆಳೆಗೆ ₹ 90 ಸಾವಿರ ಖರ್ಚು ಮಾಡಿದ್ದರು. ಪೈಪ್‌ಲೈನ್ ಒಡೆದ ಕಾರಣ ಹೊಲದಲ್ಲಿ ಅಪಾರ ಪ್ರಮಾಣದ ನೀರು ನಿಂತು ಬೆಳೆ ಸಂಪೂರ್ಣ ಹಾಳಾಗಿದೆ. ಈ ಕುರಿತು ಎಲ್ ಆ್ಯಂಡ್ ಟೀ ಕಂಪನಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ ₹ 2000 ನೀರು ಬಂದಿದ್ದಾರೆ. ಗ್ರಾಮಸ್ಥರು ಇದಕ್ಕೆ ವಿರೋಧಿಸಿದಾಗ ₹ 10 ಸಾವಿರ ನೀಡಿ ಕೈತೊಳೆದುಕೊಂಡಿದ್ದಾರೆ.ಪೈಪ್‌ಲೈನ್ ಒಡೆದು ಹತ್ತು ದಿನದ ಬಳಿಕ ಆ. 22ರ ನಡುರಾತ್ರಿ ಬಂದು ಜೆಸಿಬಿ ಬಳಸಿ ದುರಸ್ತಿ ಮಾಡಿದ್ದಾರೆ. ಇದರ ಪರಿಣಾಮ ಕಪ್ಪು ಮಣ್ಣಿನ ಹೊಲ ಹಾಳಾಗಿದೆ ಎಂದು ರೈತ ಕುಶಾಲ ಆರೋಪಿಸಿದ್ದಾರೆ. ಈ ಬಗ್ಗೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಈ ಬಗ್ಗೆ ಎಲ್ ಆ್ಯಂಡ್ ಟಿ ಅಧಿಕಾರಿಗಳೊಂದಿಗೆ ಚರ್ಚಿಸಿ, ರೈತರಿಗೆ ಸಮರ್ಪಕ ನ್ಯಾಯ ಕೊಡಿಸುವುದಾಗಿ ಹೇಳಿದ್ದಾರೆ. ಈ ಮುಂಚೆ ಜಲಮಂಡಳಿ ನೀರು ಪೂರೈಸುವ ಜವಾಬ್ದಾರಿ ಹೊಂದಿದ್ದಾಗ ಇಂಥ ಸಮಸ್ಯೆಗಳಾದ ಕೂಡಲೇ ಅಧಿಕಾರಿಗಳು ಆಗಮಿಸಿ ಸಮಸ್ಯೆ ನಿವಾರಿಸುತ್ತಿದ್ದರು. ಆದರೆ, ನೀರು ಪೂರೈಸುವ ಜವಾಬ್ದಾರಿ ಖಾಸಗಿಗೆ ನೀಡಿದರೆ ಮತ್ತಷ್ಟು ಅನುಕೂಲವಾಗುತ್ತೆ ಅಂದುಕೊಂಡಿದ್ದ ಜನರಿಗೆ ಇದೀಗ ನಿರಾಸೆಯಾಗಿದೆ.