ಬಿಜಿಕೆರೆ ಬಸವರಾಜ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ತಾಲೂಕಿನ ರಾಂಪುರ ಭಾಗದಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಇಟ್ಟಿಗೆ ಭಟ್ಟಿಗಳಿಂದಾಗಿ ಕೃಷಿ ಭೂಮಿಗಳ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಜಾಣಮೌನಕ್ಕೆ ಶರಣಾಗಿದ್ದಾರೆ.
ಅಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಂತಿರುವ ರಾಂಪುರ ದೇವಸಮುದ್ರ ಹೋಬಳಿಗೆ ಪ್ರಮುಖವಾಗಿದೆ. ತಾಲೂಕಿನಲ್ಲಿಯೇ ಅತಿದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದು. ಸುತ್ತಲಿನ 40 ಹಳ್ಳಿಗಳ ರೈತರಿಗೂ ಮತ್ತು ವ್ಯಾಪಾರಸ್ಥರಿಗೂ ಪ್ರಮುಖ ಕೇಂದ್ರ ಸ್ಥಾನವಾಗಿರುವ ಗ್ರಾಮದ ಸುತ್ತಲಿನ ಕೃಷಿ ಭೂಮಿಗಳಲ್ಲಿ ಇಟ್ಟಿಗೆ ಭಟ್ಟಿಗಳು ದಿನೇ ದಿನೇ ಹೆಚ್ಚುತ್ತಿದ್ದು, ಇದರಿಂದ ಹೊರ ಸೂಸುವ ದೂಳು ಸುತ್ತಲಿನ ಕೃಷಿ ಭೂಮಿಗಳನ್ನು ಆವರಿಸಿ ಬಡ ರೈತರನ್ನು ಸಂಕಷ್ಟಕ್ಕೀಡು ಮಾಡುತ್ತಿವೆ.
ರಾಂಪುರ ಗ್ರಾಮದ ವಡೇರಹಳ್ಳಿ ರಸ್ತೆ, ಜೆ.ಬಿ.ಹಳ್ಳಿ ರಸ್ತೆ, ದೇವಸಮುದ್ರ ಕೆರೆ ಸಮೀಪ, ಬಾಂಡ್ರವಿ ರಸ್ತೆ, ಬೊಮ್ಮದೇವರಹಳ್ಳಿ ರಸ್ತೆ ಓಬಳಾಪುರ ರಸ್ತೆ ಸೇರಿದಂತೆ ವಿವಿಧ ಕಡೆಯಲ್ಲಿ 20ಕ್ಕೂ ಹೆಚ್ಚಿನ ಇಟ್ಟಿಗೆ ಭಟ್ಟಿಗಳು ತಲೆ ಎತ್ತಿವೆ.
ಅದರಲ್ಲಿ ಕೆಲವನ್ನು ಸ್ಥಳೀಯರು ನಡೆಸುತ್ತಿದ್ದರೆ, ಇನ್ನೂ ಕೆಲವೆಡೆ ಆಂಧ್ರಪ್ರದೇಶದ ನೆಲ್ಲೂರು, ಗುಂಟೂರು ಭಾಗದವರು ಇಲ್ಲಿನ ರೈತರಿಂದ ಕೃಷಿ ಜಮೀನುಗಳನ್ನು ಗುತ್ತಿಗೆ ಪಡೆದು ಇಟ್ಟಿಗೆಯನ್ನು ತಯಾರಿಸಿ ಮಾರಾಟ ಮಾಡುತ್ತಾ ಆರ್ಥಿಕವಾಗಿ ಲಾಭ ಗಳಿಸುತ್ತಿದ್ದಾರೆ.
ಬೆರಣಿಕೆಯಷ್ಟು ಇಟ್ಟಿಗೆ ಭಟ್ಟಿಗಳಿಗೆ ಮಾತ್ರ ಅನುಮತಿ ಹೊಂದಿವೆ. ಉಳಿದಂತೆ ಬಹುತೇಕ ಭಟ್ಟಿಗಳಿಗೆ ಕನಿಷ್ಟ ಪಂಚಾಯಿತಿಯಿಂದ ಅನುಮತಿಯನ್ನು ಪಡೆದಿಲ್ಲ ಕೃಷಿ ಜಮೀನುಗಳಲ್ಲಿನ ವಿದ್ಯುತ್ ಬಳಸಿ ಕೊಂಡು ಇಟ್ಟಿಗೆ ಭಟ್ಟಿಗಳನ್ನು ನಡೆಸುತ್ತಿದ್ದಾರೆ ಎನ್ನುವುದು ಹೆಸರು ಹೇಳಲಿಚ್ಛಿಸದ ರೈತನೊಬ್ಬನ ಅಭಿಪ್ರಾಯವಾಗಿದೆ.
ಪ್ರತಿ ಇಟ್ಟಿಗೆ ಭಟ್ಟಿಯಲ್ಲಿ ಒಮ್ಮೆಗೆ 50 ಸಾವಿರದಿಂದ ಲಕ್ಷದವರೆಗೂ ಇಟ್ಟಿಗೆಗಳನ್ನು ಸುಡಲಾಗುತ್ತಿದೆ. ಇಟ್ಟಿಗೆ ಸುಡಲು ಸೌಧೆಯ ಜತೆಗೆ ಭತ್ತದ ಹೊಟ್ಟನ್ನು ಬಳಸಿಕೊಳ್ಳಲಾಗುತ್ತಿದೆ. ಇಟ್ಟಿಗೆ ಮಾರಾಟ ಮಾಡಿದ ನಂತರ ಅಲ್ಲಿನ ಬೂದಿಯು ಗಾಳಿಗೆ ಹರಡಿಕೊಂಡು ಪಸಲುಗಳ ಮೇಲೆ ಬಿದ್ದು ಇಳುವರಿಯ ಕುಂಠಿತವಾಗಲು ಕಾರಣವಾಗುತ್ತಿದೆ.
ಕಳೆದೊಂದು ದಶಕದ ಹಿಂದೆ ಕೇವಲ ಬೆರಳೆಣಿಕೆಯಷ್ಟಿದ್ದ ಇಟ್ಟಿಗೆ ಭಟ್ಟಿಗಳು ದಿನ ಕಳೆದಂತೆ ಈ ಭಾಗದಲ್ಲಿ ಹೆಚ್ಚುತ್ತಲೇ ಇವೆ. ಜತೆಗೆ ವಾಹನಗಳ ಓಡಾಟವು ಸ್ಥಳದಲ್ಲಿ ಹೆಚ್ಚುತ್ತಿವೆ. ಅಲ್ಲಿನ ರಸ್ತೆಗಳು ದೂಳಿ ನಿಂದ ಆವರಿಸುತ್ತಿವೆ.
ಹೊರ ಸೂಸುವ ಹೊಗೆ ಮತ್ತು ದೂಳಿನಿಂದ ಕೃಷಿ ಭೂಮಿಗೆ ಸೇರಿ ಇಳುವರಿ ಬಾರದಂತಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಅಕ್ರಮ ಇಟ್ಟಿಗೆ ಭಟ್ಟಿಗಳ ಹಾವಳಿಗೆ ಬ್ರೇಕ್ ಹಾಕಬೇಕೆನ್ನುವುದು ಹಲವರ ಅಭಿಪ್ರಾಯವಾಗಿದೆ.
ಕೃಷಿ ಜಮೀನುಗಳ ಗುತ್ತಿಗೆ ಪಡೆದು ಇಟ್ಟಿಗೆ ಭಟ್ಟಿ ಶುರು: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಜೆ.ಬಿ.ಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸನಂನಲ್ಲಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ವ್ಯಕ್ತಿಯೊಬ್ಬರು ಪಿಎಂಕೆ ಕಳೆದೊಂದು ದಶಕದಿಂದ ಕೃಷಿ ಜಮೀನನ್ನು ಗುತ್ತಿಗೆ ಪಡೆದು ಇಟ್ಟಿಗೆ ಭಟ್ಟಿಯನ್ನು ಆರಂಭಿಸಿದ್ದು, ಇಲ್ಲಿ ಬಹುತೇಕ ಮಹಾರಾಷ್ಟ್ರ ಮತ್ತು ಬಿಹಾರ ಮೂಲದ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ.
ಭೂ ಪರಿವರ್ತನೆ ಇಲ್ಲದೆ ಇವರು ವಾರ್ಷಿಕ ಲಕ್ಷಾಂತರ ರು.ಗಳ ವ್ಯವಹಾರ ನಡೆಸುತ್ತಿದ್ದಾರೆ. ಅನ್ಯರಾಜ್ಯಗಳ ಕಾರ್ಮಿಕರಿಗೆ ಮುಂಗಡವಾಗಿ ಹಣ ನೀಡಿ ಕರೆತಂದು ವರ್ಷದಲ್ಲಿ 6 ತಿಂಗಳ ಕೆಲಸ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಸ್ಥಳದಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಅಲ್ಲಿ ಕೆಲಸ ಮಾಡುತ್ತಿದ್ದಾರೆ.
ಇದರಿಂದ ಹೊರ ಬರುವ ದೂಳು ಕೃಷಿ ಭೂಮಿಗಳನ್ನಾವರಿಸುತ್ತಿದ್ದು, ಇಳುವರಿ ಬರದಂತಾಗಿದೆ ಎನ್ನುವುದು ಸುತ್ತಲಿನ ರೈತರು ಆರೋಪವಾಗಿದೆ.