ನೀರಿನಲ್ಲಿ ನಿಂತ ಬೆಳೆಗಳು: ಕಂಗಾಲಾದ ರೈತರು

KannadaprabhaNewsNetwork |  
Published : Sep 28, 2025, 02:01 AM IST
ಅಥಣಿ | Kannada Prabha

ಸಾರಾಂಶ

ಅಥಣಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮತ್ತು ಚರಂಡಿಗಳಲ್ಲಿ, ಅಲ್ಲಲ್ಲಿ ಬಿದ್ದ ತಗ್ಗು ಗುಂಡಿಗಳಲ್ಲಿ ನೀರು ತುಂಬಿಕೊಂಡ ದೃಶ್ಯಗಳು ಸಾಮಾನ್ಯವಾಗಿವೆ.

ಅಣ್ಣಾಸಾಬ ತೆಲಸಂಗ

ಕನ್ನಡಪ್ರಭ ವಾರ್ತೆ ಅಥಣಿ

ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ಬಿಟ್ಟುಬಿಡದೇ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಅಥಣಿ ಗ್ರಾಮೀಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಗ್ಗು ಪ್ರದೇಶದಲ್ಲಿರುವ ರೈತರ ಜಮೀನುಗಳಿಗೆ ಮಳೆ ನೀರು ನಿಂತಿರುವುದರಿಂದ ಕಬ್ಬು, ಗೋವಿನ ಜೋಳ, ತೊಗರಿ, ಬಾಳೆ, ದ್ರಾಕ್ಷಿ ಮತ್ತು ತರಕಾರಿ ಸೇರಿದಂತೆ ಇನ್ನಿತರ ಬೆಳೆಗಳು ಸಂಪೂರ್ಣ ನೀರು ಪಾಲಾಗಿದ್ದು, ಇದರಿಂದ ಕಂಗಾಲಾಗಿರುವ ರೈತರಿಗೆ ಕೈಗೆ ಬಂದು ತುತ್ತು, ಬಾಯಿಗೆ ಇಲ್ಲದಂತಾಗಿದೆ. ತಾಲೂಕಿನಲ್ಲಿ ನೂರಾರು ಎಕರೆ ಪ್ರದೇಶದ ರೈತರ ಬೆಳೆಗಳು ಜಲಾವೃತಗೊಂಡಿದ್ದು, ಸಾಲ ಸೋಲ ಮಾಡಿ ನಾಟಿ ಮಾಡಿದ್ದ ರೈತರಿಗೆ ಈ ಮಳೆ ಗಾಯದ ಮೇಲೆ ಬರಿ ಎಳೆದಂತಾಗಿದೆ.

ಮಳೆಯಿಂದ ಅಥಣಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮತ್ತು ಚರಂಡಿಗಳಲ್ಲಿ, ಅಲ್ಲಲ್ಲಿ ಬಿದ್ದ ತಗ್ಗು ಗುಂಡಿಗಳಲ್ಲಿ ನೀರು ತುಂಬಿಕೊಂಡ ದೃಶ್ಯಗಳು ಸಾಮಾನ್ಯವಾಗಿವೆ. ಪಟ್ಟಣದ ಹಾಗೂ ಗ್ರಾಮೀಣ ಭಾಗದ ಜನರು ಮಾರುಕಟ್ಟೆಗೆ ಆಗಮಿಸದೆ ಇರುವುದರಿಂದ ವ್ಯಾಪಾರಸ್ಥರಿಗೆ ನಿರೀಕ್ಷೆಯಂತೆ ವಹಿವಾಟು ಇಲ್ಲದೆ ಸಮಸ್ಯೆ ಎದುರಿಸುವಂತಾಗಿದೆ.

ತುಂಬಿ ಹರಿಯುತ್ತಿವೆ ಹಳ್ಳ-ಕೊಳ್ಳ:

ನಿರಂತರ ಮಳೆಗೆ ಚರಂಡಿ ನೀರು, ರಸ್ತೆ ಮೇಲಿನ ನೀರು ಹಳ್ಳ-ಕೊಳ್ಳ, ಕೆರೆಗಳಿಗೆ ಸೇರಿ ತುಂಬಿ ಹರಿಯುತ್ತಿವೆ. ನೆರೆಯ ಮಹಾರಾಷ್ಟ್ರದಲ್ಲಿಯೂ ಕೂಡ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಅಥಣಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಹತ್ತಿರ ಭಾಗೀರಥಿ ನಾಲಾ ಸೇರಿದಂತೆ ಇನ್ನಿತರ ನಾಲಗಳು ತುಂಬಿ ಹರಿಯುತ್ತಿವೆ. ಅಥಣಿ ಪಟ್ಟಣದ ಜೋಡಿ ಕೆರೆಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ವಿವಿಧ ಬಡಾವಣೆಗಳಲ್ಲಿ ಚರಂಡಿ ನೀರು ರಸ್ತೆಗಳಲ್ಲಿ ಹರಿಯುತ್ತಿದ್ದು, ಇದರಿಂದ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.

ಹದಗೆಟ್ಟ ರಸ್ತೆಗಳು, ಸಂಚಾರ ದುಸ್ತರ:

ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳು ತಗ್ಗು ಗುಂಡಿಗಳಾಗಿ, ಇನ್ನು ಕೆಲವಡೆ ಕೆಸರುಗದ್ದೆಗಳಾಗಿ ವಾಹನ ಸವಾರರಿಗೆ ಮತ್ತು ಸಾರ್ವಜನಿಕರ ಸಂಚಾರಕ್ಕೆ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಹಿಂದೆ ಕೈಗೊಳ್ಳಲಾದ ಕಳಪೆ ಮಟ್ಟದ ರಸ್ತೆಗಳೆಲ್ಲ ಈಗ ಸಂಪೂರ್ಣ ಹಾಳಾಗಿದ್ದು, ರಸ್ತೆಗಳ ತಗ್ಗು ಗುಂಡಿಗಳಲ್ಲಿ ನಿಂತಿರುವ ನೀರಲ್ಲಿ ಬೈಕ್ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ.

ವಿದ್ಯುತ್ ಕಣ್ಣಾ ಮುಚ್ಚಾಲೆ!

ನಿರಂತರ ಹಾಗೂ ಜಿಟಿ ಜಿಟಿ ಮಳೆಯಿಂದ ಅಲ್ಲಲ್ಲಿ ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದು, ಮೇಲಿಂದ ಮೇಲೆ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದರಿಂದ ಪಟ್ಟಣದ ಹಾಗೂ ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳು ಕತ್ತಲೆಯಲ್ಲಿ ದಿನ ಕಳೆಯುವಂತಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಮೂರ್ನಾಲ್ಕು ದಿನ ಮಳೆ ಸುರಿಯುವ ಸಾಧ್ಯತೆ ಇದೆ. ಈ ಜಲ ಗಂಡಾಂತರಕ್ಕೆ ತಾಲೂಕಿನ ಜನತೆ ಹೈರಾಣಾಗಿದ್ದಾರೆ.

PREV

Recommended Stories

ಅ.4ರಿಂದ ಅಂತಾರಾಜ್ಯ ವಿವಿ ಕಬಡ್ಡಿ ಕ್ರೀಡಾಕೂಟ
ಜಾನಪದ ಕಲೆ ಉಳಿಸಲು ಸಂಘಟನೆಗಳ ಪಾತ್ರ ಪ್ರಮುಖ: ಎಂ.ಎಂ. ವಿರಕ್ತಮಠ