10 ಕೋಟಿ ರು. ಕೋಲ್ಡ್ ಸ್ಟೋರೇಜ್‌ಗೆ ಪ್ರಸ್ತಾವನೆ ಸಲ್ಲಿಸಿ

KannadaprabhaNewsNetwork | Published : Feb 17, 2025 12:31 AM

ಸಾರಾಂಶ

ಚಿತ್ರದುರ್ಗದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಳ್ಳಲಾದ ಫಲಪುಷ್ಪ ಪ್ರದರ್ಶನವ ಸಂಸದ ಗೋವಿಂದ ಕಾರಜೋಳ ಉದ್ಘಾಟಿಸಿದರು.

ಅಧಿಕಾರಿಗಳಿಗೆ ಸಂಸದ ಗೋವಿಂದ ಕಾರಜೋಳ ಸೂಚನೆ । 32ನೇ ಫಲ-ಪುಷ್ಪ ಪ್ರದರ್ಶನ ಉದ್ಘಾಟನಾ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯ ರೈತರು ಬೆಳೆದ ಬೆಳೆ ಸಂಗ್ರಹಿಸಿಡಲು 10 ಕೋಟಿ ರು. ವೆಚ್ಚದ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸುವಂತೆ ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದರು.

ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಿದ್ದ 32ನೇ ಫಲ-ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಬಾರ್ಡ್/ ಸಿಎಸ್‍ಆರ್ ಅನುದಾನದಲ್ಲಿ 10 ಕೋಟಿ ರು.ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗುವುದು. ಫಲ-ಪುಷ್ಪ ಪ್ರದರ್ಶನ ರೈತ ಸ್ನೇಹಿ ಕಾರ್ಯಕ್ರಮವಾಗಿದ್ದು, ತೋಟಗಾರಿಕೆ ಇಲಾಖೆಯ ವಿವಿಧ ವಿಷಯ ತಜ್ಞರನ್ನು ಆಹ್ವಾನಿಸಿ, ರೈತರಿಗೆ ತರಬೇತಿ ನೀಡಬೇಕು ಎಂದರು. ಸಾವಿರಾರು ಕೋಟಿ ಖರ್ಚು ಮಾಡಿ ವಿಶ್ವ ವಿದ್ಯಾಲಯಗಳನ್ನು ಸ್ಥಾಪಿಸಲಾಗಿದ್ದು, ಹೊಸ ಹೊಸ ತಳಿಗಳ ಸಂಶೋಧನೆ ಮಾಡಬೇಕಿರುವುದು ವಿಶ್ವವಿದ್ಯಾಲಯಗಳ ಸ್ಥಾಪನೆಯ ಉದ್ದೇಶ. ದೇಶದ ಪರಂಪರೆಯಂತೆ ಕೊಟ್ಟಿಗೆ ಗೊಬ್ಬರ ಸೇರಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ರಾಸಾಯನಿಕಗಳ ಬಳಸಿ ಹಣ್ಣುಗಳನ್ನು ಮಾರಾಟ ಮಾಡುವುದರಿಂದ ಜನರಿಗೆ ವಿಷ ನೀಡಿದಂತಾಗುತ್ತದೆ. ರೈತರು ಮಾರುಕಟ್ಟೆಗೆ ಬಿಡುವ ಮುನ್ನ ಸಂಪೂರ್ಣವಾಗಿ ಹಣ್ಣು ಆದ ನಂತರವೇ ತರಬೇಕು. ಭೂಮಿ ಮತ್ತು ನೀರಿನ ಮೇಲೆ ರೈತರ ಶ್ರೀಮಂತಿಕೆ ನಿಂತಿದೆ ಎಂದರು.

ಜಿಲ್ಲೆಯು ಒಣ ಬೇಸಾಯದಿಂದ ಕೂಡಿದ್ದು, ಉತ್ತಮ ಹಣ್ಣಿನ ಬೆಳೆ ಬೆಳೆಯಲು ಸಾಧ್ಯವಿದೆ. ಇದರ ಜೊತೆಗೆ ಹಣ್ಣಿನ ರುಚಿ ಅತ್ಯುತ್ತಮವಾಗಿರಲಿದೆ. ಬಿಜಾಪುರ ಜಿಲ್ಲೆಯಲ್ಲಿ ಬೆಳೆದ ದಾಳಿಂಬೆ, ದ್ರಾಕ್ಷಿ, ಬಾಳೆಹಣ್ಣು ಯಾವ ಜಿಲ್ಲೆಯಲ್ಲಿಯೂ ಬೆಳೆಯಲು ಸಾಧ್ಯವಿಲ್ಲ. ಅದಕ್ಕೆ ಅಲ್ಲಿನ ಹವಾಮಾನ ಹಾಗೂ ಬಿಸಿಲು ಕಾರಣ. ಚಿತ್ರದುರ್ಗ ಜಿಲ್ಲೆಯಲ್ಲಿಯೂ ತೋಟಗಾರಿಕೆ ಬೆಳೆ ಹೆಚ್ಚು ಮಾಡಲು ಸಾಧ್ಯವಿದೆ ಎಂದು ಹೇಳಿದರು.

66 ಲಕ್ಷ ಹೆಕ್ಟೇರ್‌ಗೆ ನೀರಾವರಿ ಮಾಡುವಷ್ಟು ಸಾಮರ್ಥ್ಯದ ನೀರು ರಾಜ್ಯದಲ್ಲಿದೆ. ಕೃಷ್ಣ ನ್ಯಾಯಾಧೀಕರಣ, ಕಾವೇರಿ ನ್ಯಾಯಾಧೀಕರಣದಲ್ಲಿ ಹಂಚಿಕೆಯಾದ ನೀರನ್ನು ಉಪಯೋಗ ಮಾಡಿಕೊಂಡು 30 ಲಕ್ಷ ಹೆಕ್ಟೇರ್ ಬೃಹತ್ ನೀರಾವರಿ ಮತ್ತು ಮೈನರ್ ಇರಿಗೇಷನ್‍ನಿಂದ 7 ಲಕ್ಷ ಹೆಕ್ಟೇರ್ ನೀರಾವರಿ ಮಾಡಲಾಗಿದೆ. ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಕೊಳವೆಬಾವಿ, ಹಳ್ಳ, ಕೊಳ್ಳ ನೀರಿನ ಮೂಲಗಳಿಂದ 16 ಲಕ್ಷ ಹೆಕ್ಟೇರ್ ನೀರಾವರಿ ಮಾಡಿಕೊಂಡಿದ್ದಾರೆ. ಇನ್ನೂ 13 ಲಕ್ಷ ಹೆಕ್ಟೇರ್ ನೀರಾವರಿ ಮಾಡುವ ಅವಕಾಶ ಇದ್ದು, ಇನ್ನೂ ಷ್ಟು ನೀರು ಲಭ್ಯವಿದೆ. ಕೃಷ್ಣ ನ್ಯಾಯಾಧೀಕರಣ-2ರಲ್ಲಿ 173 ಟಿಎಂಸಿ ನೀರು ಹಂಚಿಕೆಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ತೋಟಗಾರಿಕೆ ಕ್ಷೇತ್ರದಲ್ಲಿ ಜಿಲ್ಲೆಯ ರೈತರು ಉತ್ತಮ ಸಾಧನೆ ತೋರಿದ್ದು ಮುಂಚೂಣಿಯಲ್ಲಿದ್ದಾರೆ. ಚಿತ್ರದುರ್ಗ ಬೆಂಗಳೂರಿಗೆ ಬಹಳ ಹತ್ತಿರ ಇರುವುದರಿಂದ ತೋಟಗಾರಿಕೆ ಬೆಳೆಗಳಲ್ಲಿ ರೈತರು ಪ್ರಯತ್ನ ಮಾಡಿದರೆ ಕೇವಲ 2 ರಿಂದ 3 ಗಂಟೆಯೊಳಗೆ ಬೆಂಗಳೂರು ಮಾರುಕಟ್ಟೆ ತಲುಪಬಹುದು. ಹಾಗಾಗಿ ಇತ್ತೀಚಿಗೆ ಹೂವು, ಹಣ್ಣು, ತರಕಾರಿ ಬೆಳೆಗಳನ್ನು ಬೆಳೆಯುವಂತಹದನ್ನು ನೋಡುತ್ತಿದ್ದೇವೆ.

ಚಳ್ಳಕೆರೆಯಲ್ಲಿ ಎರಡು ಖಾಸಗಿ ಕೋಲ್ಡ್ ಸ್ಟೋರೇಜ್ ಬಿಟ್ಟರೆ ಜಿಲ್ಲೆಯ ಯಾವ ತಾಲೂಕಿನಲ್ಲಿಯೂ ಕೋಲ್ಡ್ ಸ್ಟೋರೇಜ್ ಇಲ್ಲ. ಸಂಸದರ ಸೂಚನೆಯಂತೆ 10 ಕೋಟಿ ರು. ವೆಚ್ಚದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಪ್ರಸ್ತಾವ ಸಿದ್ದಪಡಿಸಬೇಕು. ಇದರಿಂದ ಜಿಲ್ಲೆಯ ರೈತರು ಬೆಳೆದ ಎಲ್ಲ ಬೆಳೆಗಳಿಗೆ ಒಳ್ಳೆಯ ಮೌಲ್ಯವರ್ಧನೆಗೆ ಸಹಾಯಕವಾಗಲಿದೆ ಎಂದು ಹೇಳಿದರು.

ಇಡೀ ದೇಶದಲ್ಲಿ ಕಅತೀ ಹೆಚ್ಚು ತೋಟಗಾರಿಕೆ ಬೆಳೆ ಬೆಳೆಯುವ ರಾಜ್ಯಗಳಲ್ಲಿ (ಭೂಪ್ರದೇಶ-ವಿಸ್ತೀರ್ಣದಲ್ಲಿ) ಕರ್ನಾಟಕ ನಂ.1 ಸ್ಥಾನದಲ್ಲಿದೆ. ಆದರೆ ಪ್ರೋಡಕ್ಷನ್‍ನಲ್ಲಿ 7ನೇ ಸ್ಥಾನದಲ್ಲಿದೆ. ಹಾಗಾಗಿ ಇದರ ಬಗ್ಗೆ ಅಲೋಚನೆ ಮಾಡಬೇಕು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ರೈತರು ತಮ್ಮ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಹಾಗೂ ಆದಾಯ ಪಡೆಯಲು ಬಹಳಷ್ಟು ರಾಸಾಯನಿಕ ಬಳಸುತ್ತಿದ್ದಾರೆ. ಇದರಿಂದ ಭೂಮಿಯು ವಿಷವಾಗಲಿದ್ದು, ಎಲ್ಲ ರೀತಿಯಿಂದಲೂ ವ್ಯತಿರಿಕ್ತವಾಗಲಿದೆ ಎಂದರು.

ಜಲತಜ್ಞ ದೇವರಾಜರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಪಾತಾಳಕ್ಕೆ ಹೋಗುವಂತೆ ಕೊಳವೆಬಾವಿ ಕೊರೆಸುತ್ತಾ ಬಂದಿದ್ದೇವೆ. ಶೇ.80ರಷ್ಟು ಅಂತರ್ಜಲ ನಿಕ್ಷೇಪಗಳು ಬರಿದಾಗಿವೆ. ಹಾಗಾಗಿ ಬೀಳುವ ಮಳೆ ನೀರಿನ ಬಗ್ಗೆ ಅಲೋಚನೆ ಮಾಡಬೇಕಿದೆ ಎಂದರು.

ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಉಪವಿಭಾಗಾಧಿಕಾರಿ ವೆಂಕಟೇಶ್ ನಾಯ್ಕ್, ತಹಸೀಲ್ದಾರ್ ಡಾ.ನಾಗವೇಣಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಸವಿತಾ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹೇಶ್ವರಪ್ಪ, ಜಿಲ್ಲಾ ತೋಟಗಾರಿಕೆ ಸಲಹಾ ಸಮಿತಿ .ಎಸ್.ಉಜ್ಜಿನಪ್ಪ, ನಾಗರಾಜ್ ಬೇದ್ರೆ, ಶ್ವೇತಾ, ರೀನಾ, ಎಸ್.ಆರ್.ಗಿರೀಶ್ ಇದ್ದರು.

Share this article