ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಬಾಳಿಯ ದಿಂಡಿನ ತೆಪ್ಪೋತ್ಸವನ್ನು ಕಬ್ಬು, ತೆಂಗು, ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ವಾದ್ಯಮೇಳಗಳಿಂದ ಸೋಮೇಶ್ವರನ ದೇವಸ್ಥಾನದಲ್ಲಿದ್ದ ಬೆಳ್ಳಿಯ ಮೂರ್ತಿಯನ್ನು ಪಲ್ಲಕಿಯಲ್ಲಿ ತಂದು ತೆಪ್ಪದ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಸಂಜೆ 4 ಕ್ಕೆ ಹೊಸೂರ ಗುರುಮಡಿವಾಳೇಶ್ವರಮಠದ ಗಂಗಾಧರ ಸ್ವಾಮೀಜಿ, ಬೈಲಹೊಂಗಲ-ಹೊಸೂರ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ನರೇಂದ್ರದ ಪರಮ ಪೂಜ್ಯ ಸಂಗಮೇಶ ಸ್ವಾಮೀಜಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಧರ್ಮದರ್ಶಿ ನಿಂಗಯ್ಯ ಪೂಜೇರಿ, ಅರ್ಚಕರಾದ ಗುರುಸ್ವಾಮಿ ಹೊಸಪೇಟಿಮಠ ಪ್ರಾರ್ಥಿಸಿದರು. ಶಾಸಕ ಮಹಾಂತೇಶ ಕೌಜಲಗಿ, ಟ್ರಸ್ಟ್ ಅಧ್ಯಕ್ಷ ವೀರನಗೌಡ ದೇ ಸಂಗಣ್ಣವರ ಹಾಗೂ ಆಡಳಿತ ಮಂಡಳಿ ಸರ್ವ ಸದಸ್ಯರು, ಸದ್ಬಕ್ತರು. ಸುತ್ತಲಿನ ಗ್ರಾಮಗಳ ಪ್ರಮುಖರ ಹಾಗೂ ಸಾವಿರಾರು ಭಕ್ತರ ಜಯಘೋಷಗಳ ಮಧ್ಯ ವಿಜೃಂಭಣೆಯಿಂದ ತಪ್ಪೋತ್ಸವದಲ್ಲಿ ಸಹಸ್ರಾರು ಜನ ಪಾಲ್ಗೊಂಡು ಭಕ್ತಿ-ಭಾವ ಮೆರದರು.
ಅಪಾರ ಜನಸ್ತೋಮ:ಗೋವಾ, ಮಹಾರಾಷ್ಟ್ರ, ಕೇರಳ, ಹೈದ್ರಾಬಾದ, ಆಂದ್ರಪ್ರದೇಶ, ಕರ್ನಾಟಕದ ವಿವಿಧ ಭಾಗದಿಂದ ಭಾನುವಾರ ಹಾಗೂ ಸೋಮವಾರ ಬೆಳಗ್ಗೆಯಿಂದಲೇ ಬೈಕ್, ವಾಹನ, ಚಕ್ಕಡಿ, ಟ್ರ್ಯಾಕ್ಟರ್, ಖಾಸಗಿ ವಾಹನಗಳ ಮುಖಾಂತರ ಲಕ್ಷಾಂತರ ಭಕ್ತರು ಆಗಮಿಸುವ ದೃಶ್ಯ ಸಾಮಾನ್ಯವಾಗಿತ್ತು. ಶ್ರೀಕ್ಷೇತ್ರಸೊಗಲದಲ್ಲಿ ಬೆಟ್ಟದಲ್ಲಿ ಕುಳಿತು ಭಕ್ತರು ಪುಣ್ಯ ಸ್ನಾನ ಮಾಡಿ, ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ಸಿಹಿ ಅಡುಗೆ, ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಚಪಾತಿ, ಶೇಂಗಾ, ಗುರೆಳ್ಳ ಚಟ್ಟಿ, ಬಾನ, ಮೊಸರಣ್ಣ, ಗಜ್ಜರಿ ಚಟ್ನಿ, ಸಿಹಿ ಮಾದೋಲಿ, ಬಾಳೆಹಣ್ಣು, ವಿವಿಧ ಭಕ್ಷ ಭೋಜನದೊಂದಿಗೆ ಆಗಮಿಸಿದ ಭಕ್ತರು ದೇವರಿಗೆ, ಜಲಧಾರೆಗಳಿಗೆ ಪೂಜಿಸಿ, ನೈವದ್ಯ ಸಲ್ಲಿಸಿ, ರಸಭೂರಿ ಭೋಜನ ಸವಿದು, ಹಸಿರು ಪ್ರಕೃತಿಯಲ್ಲಿ ಸಂಚರಿಸುವ ಮೂಲಕ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡು ನಾವು ನೀವು ಎಳ್ಳು ಬೆಲ್ಲದಂಗ ಇರೋನೆಂದು ಕುಷಲೋಪರಿ ಹಂಚಿಕೊಂಡು ಮಕರ ಸಂಕ್ರಮಣ ಆಚರಿಸಿದರು. ಪುಣ್ಯ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಮಕ್ಕಳು ಜಿಂಕೆ ವನ, ಹುಲಿ ಗವಿ ಇತರ ದೇವಾಲಯಗಳಿಗೂ ಭೇಟಿ ನೀಡುವುದು ಸಾಮಾನ್ಯವಾಗಿತ್ತು. ಭಾನುವಾರ ರಾತ್ರಿ ಕ್ಷೇತ್ರಕ್ಕೆ ಅಪಾರ ಭಕ್ತರು ಆಗಮಿಸಿ, ಠಿಕಾಣಿ ಹೂಡಿದ್ದರು. ಸೋಮವಾರ ಕ್ಷೇತ್ರದಲ್ಲಿ ಎಲ್ಲಿ ನೋಡಿದಲ್ಲಿ ತುಂಬಿದ್ದ ಭಕ್ತರ ಕಂಠದಿಂದ ಹೊರಬಂದ ಜಯಘೋಷಗಳು ಮುಗಿಲು ಮುಟ್ಟುವಂತಿತ್ತು.