ವಿದ್ಯೆ ಅಂಕ ಗಳಿಕೆಯಲ್ಲ, ಸಂಸ್ಕಾರದ ಅರಿವು ಬೇಕು

KannadaprabhaNewsNetwork | Published : Jul 10, 2024 12:32 AM

ಸಾರಾಂಶ

culture is important in school children,platinum jubly

-ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತ ಮಹೋತ್ಸವದಲ್ಲಿ ಭಜರಂಗದಳದ ಪ್ರಾಂತೀಯ ಸಂಚಾಲಕ ಪ್ರಬಂಜನ್

------

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ವಿದ್ಯೆಎಂದರೆ ಬರೀ ಅಂಕಗಳಿಕೆಯಲ್ಲ, ಮಕ್ಕಳಲ್ಲಿ ಸಂಸ್ಕಾರದ ಅರಿವಿನ ಕೊರತೆ ಇರುವುದರಿಂದ ಸರ್ವತೋಮುಖ ಬೆಳವಣಿಗೆಯಾಗುತ್ತಿಲ್ಲ ಎಂದು ಭಜರಂಗದಳದ ದಕ್ಷಿಣ ಪ್ರಾಂತೀಯ ಸಂಚಾಲಕ ಪ್ರಬಂಜನ್ ಅಭಿಪ್ರಾಯಪಟ್ಟರು.

ನಗರದ ಮೆದೆಹಳ್ಳಿ ರಸ್ತೆಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಆಯೋಜಿಸಿದ್ದ ರಜತಾ ಮಹೋತ್ಸವ ಹಾಗೂ ದ್ವಿತೀಯ ಮಹಾ ಕುಂಭಾಭಿಷೇಕ ಮಹೋತ್ಸವದ ಮೂರನೇ ದಿನದ ಸಭಾ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು ಶಾಲೆಗಳಲ್ಲಿ ಮಕ್ಕಳಿಗೆ ಸಂಸ್ಕಾರ ಕಲಿಸುವಲ್ಲಿ ಕೆಲಸ ಆಗಬೇಕು. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳ ಕರೆ ತರುವ ಕಾರ್ಯವನ್ನು ಪೋಷಕರು ಮಾಡಬೇಕು. ಸಂಸ್ಕಾರ ಕಲಿತ ಮಕ್ಕಳು ಮುಂದೆ ಅವರ ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ, ವೃದ್ಧಾಶ್ರಮಕ್ಕೆ ಕಳುಹಿಸುವುದಿಲ್ಲ ಎಂದರು.

ಅಯ್ಯಪ್ಪಸ್ವಾಮಿ ಸೇವಾ ಸಮಿತಿಯಿಂದ ಪ್ರತಿವರ್ಷ ಧಾರ್ಮಿಕ ಕಾರ್ಯಕ್ರಮಗಳು ನಿರಂತರ ನಡೆಯುತ್ತಿವೆ. ದೇವಸ್ಥಾನವನ್ನು ನಿರ್ಮಾಣ ಮಾಡುವುದು ಸುಲಭ, ಆದರೆ, ಅದನ್ನು ನಡೆಸಿಕೊಂಡು ಹೋಗುವುದು ಕಷ್ಟದ ಕೆಲಸವಾಗಿದೆ. ಸಮಿತಿಯವರು ಕಳೆದ 25 ವರ್ಷಗಳಿಂದ ಎಲ್ಲಿಯೂ ಲೋಪಗಳಾಗದಂತೆ ನಿರಂತರವಾಗಿ ಸ್ವಾಮಿಯ ಸೇವೆ ಮಾಡುತ್ತಾ ಬಂದಿದ್ದಾರೆ. ಧಾರ್ಮಿಕ ಸಭಾ ಕಾರ್ಯಕ್ರಮಗಳು ಉತ್ತಮವಾಗಿ ನಡೆಯುತ್ತಿವೆ. ಸಂಸ್ಕಾರ ಕಲಿಯುವಂತ ವಾತಾವರಣ ಸೃಷ್ಚಿಯಾಗುತ್ತಿದೆ ಎಂದರು.

ಅಯ್ಯಪ್ಪಸ್ವಾಮಿ ವ್ರತ ಬಹಳ ಮಹತ್ವ ಪಡೆದಿದೆ. ಹಿಂದೂ ಸಮಾಜ ಬೇರೆ ಬೇರೆ ಕಾರಣಗಳಿಂದ ಜಾತಿ ಮತ, ಪಂಥ ಎಂದು ವಿಂಗಡಣೆಯಾಗುತ್ತಿದೆ, ಇದರಲ್ಲಿ ಕೆಲವು ಜನ ವಿವಿಧ ಕಾರಣಗಳಿಂದ ಮತಾಂತರವಾಗುತ್ತಿದ್ದಾರೆ. ಅವರನ್ನು ತಡೆದು ನಿಲ್ಲಿಸಿರುವುದು ಅಯ್ಯಪ್ಪಸ್ವಾಮಿ ವೃತವಾಗಿದೆ. ಈ ಹಿನ್ನಲೆಯಲ್ಲಿ ಹಿಂದೂ ಸಮಾಜ ಬಹಳ ಗಟ್ಟಿಯಾಗಿದೆ. ಇಂದಿನ ದಿನಮಾನದಲ್ಲಿ ದೇಗುಲಗಳನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಲಾಗುತ್ತಿದೆ. ಅಯ್ಯಪ್ಪಸ್ವಾಮಿ ವ್ರತ ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಇದನ್ನು ಭಕ್ತಿಪೂರ್ವಕವಾಗಿ ಪಾಲನೆ ಮಾಡಿದರೆ ಸಾಕು. ಜಾತಿ, ಮತ, ಪಂಥವನ್ನು ಮೀರಿ ಎಲ್ಲರು ಮಾಲೆ ಧರಿಸಿ ಅಯ್ಯಪ್ಪಸ್ವಾಮಿಯ ವ್ರತ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.

ಧಾರ್ಮಿಕ ಸಂಸ್ಥೆಗಳು ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುವ ಕೇಂದ್ರಗಳಾಗಬೇಕಿದೆ. ಮಠಗಳು, ದೇಗುಲಗಳು, ಗುರುಗಳು, ಮಠಾಧೀಶರು ಸಂಸ್ಕಾರವನ್ನು ಕಲಿಸುತ್ತಿದ್ದಾರೆ. ಅಯ್ಯಪ್ಪಸ್ವಾಮಿ ಕಾರ್ಯಕ್ರಮಕ್ಕೆ ದಾನಿಗಳ ಸಹಕಾರ ಅಗತ್ಯ. ಅವರಿಂದಲೇ ಉಪಯುಕ್ತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಬಂಜನ್ ಹೇಳಿದರು.

ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮೆದೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಉಜ್ಜಿನಿಸ್ವಾಮಿ, ನಿಸ್ವಾರ್ಥದಿಂದ ಸ್ವಾಮಿ ಪೂಜೆ ಮಾಡಿದಾಗ ತಮ್ಮಲ್ಲಿನ ಕಷ್ಟಗಳು ದೂರವಾಗಲಿದ್ದು, ಪುಣ್ಯ ಪ್ರಾಪ್ತಿಯಾಗಲಿದೆ. ಮಾನವ ಜನ್ಮ ಇದ್ದಾಗ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಸಂಸ್ಕಾರ ಕಲಿಯಬೇಕಿದೆ ಎಂದರು.

ಐಶ್ವರ್ಯ ಪೋರ್ಟ್‍ನ ಆರುಣ್‍ಕುಮಾರ್ ಮಾತನಾಡಿ, ವರ್ಷಪೂರ್ತಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಕ್ತಾಧಿಗಳು ಭಾಗವಹಿಸುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಸ್ವಾಮಿಯ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು. ಮೆದೇಹಳ್ಳಿಯ ಎಂ.ರವಿಶಂಕರ್, ಬಿಜೆಪಿ ನಗರಾಧ್ಯಕ್ಷ ನವೀನ್ ಚಾಲುಕ್ಯ, ಪಿ.ಎಲ್.ಸುರೇಶ್ ಬಾಬು, ಆದರ್ಶ ಟ್ರೇಡರ್ಸ್‍ನ ಪಟೇಲ್ ಶಿವಕುಮಾರ್, ಹೋಟೇಲ್ ಮಾಲಿಕರ ಸಂಘದ ಅಧ್ಯಕ್ಷ ಕೆ.ಎಸ್ ಆರುಣ್ ಕುಮಾರ್, ಜಯರಾಂ ಗ್ರೂಪ್ಸ್ ನ ಮಾರುತಿ ಪ್ರಸನ್ನ, ಕ್ರೀಡಾ ಮಂಡಳಿಯ ಮಾಜಿ ಉಪಾಧ್ಯಕ್ಷ ಜಿ.ಎಂ.ಸುರೇಶ್, ಕಾವೇರಿ ಟ್ರೇಡರ್ಸ್‍ನ ಟಿ.ರಾಮರೆಡ್ಡಿ, ಮಲ್ಲಿಕಾರ್ಜನ ಸ್ವಾಮಿ, ಮೋಹನ್ ಕುಮಾರ್, ಚಂದ್ರಶೇಖರ್, ಸೂರಪ್ಪ, ಮಂಜುನಾಥ್, ಪ್ರಧಾನ ಅರ್ಚಕ ಸತೀಶ್ ಶರ್ಮ ಇದ್ದರು.

ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಶರಣ್ ಕುಮಾರ್ ಸ್ವಾಗತಿಸಿದರು, ಕಾರ್ಯದರ್ಶಿ ವೆಂಕಟೇಶ್ ವಂದಿಸಿದರು.

----------------

ಪೋಟೋ:

ಚಿತ್ರದುರ್ಗ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಜತ ಮಹೋತ್ಸವದ ಮೂರನೇ ದಿನದ ಸಭಾ ಕಾರ್ಯಕ್ರಮವನ್ನು ಮೆದೇಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಉಜ್ಜಿನಿಸ್ವಾಮಿ ಉದ್ಘಾಟಿಸಿದರು.

-------

ಪೋಟೋ: 9 ಸಿಟಿಡಿ 1

Share this article