- ಹಿರೇಕಲ್ಮಠ ಧಾರ್ಮಿಕ ಸಭೆಯಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ ಅಭಿಮತ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಗುರು ಪರಂಪರೆ ಕಾರಣದಿಂದಾಗಿ ದೇಶದಲ್ಲಿ ಸಂಸ್ಕೃತಿ -ಪರಂಪರೆ ಶಾಶ್ವತವಾಗಿ ಉಳಿದಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಶಿವಮೊಗ್ಗ ನಗರ ಕ್ಷೇತ್ರ ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ದಸರಾ ಮತ್ತು ಶರನ್ನವರಾತ್ರಿ ಕಾರ್ಯಕ್ರಮ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಬನ್ನಿ ಸೊಪ್ಪನ್ನು ಬಂಗಾರದಂತೆ ಭಾವಿಸುವ, ಪ್ರಕೃತಿ ಮತ್ತು ಸ್ತ್ರೀಯನ್ನು ಆರಾಧ್ಯದೈವವಾಗಿ ಪೂಜಿಸುವ ಭಾರತೀಯ ಸಂಸ್ಕತಿಯು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಸ್ವಾತಂತ್ರ್ಯಪೂರ್ವದಲ್ಲಿ ಅನೇಕ ದಾಳಿಕೋರರು ದೇಶದ ದೇವಾಲಯಗಳನ್ನು ನಾಶ ಮಾಡಿದರು. ನಮ್ಮ ದೇಶದ ಸಂಪತ್ತನ್ನು ದೋಚಿದರು. ಆದರೆ, ಅವರಿಗೆ ನಮ್ಮಲ್ಲಿನ ಭಾವನೆಗಳು- ನಂಬಿಕೆ- ವಿಶ್ವಾಸವನ್ನು ನಾಶ ಮಾಡಲಾಗಲಿಲ್ಲ. ಇದು ನಮ್ಮ ಹಿಂದೂ ಸಂಸ್ಕೃತಿಯ ವೈಶಿಷ್ಟ್ಯತೆಯಾಗಿದೆ ಮತ್ತು ನಮ್ಮಲ್ಲಿನ ಒಗ್ಗಟ್ಟು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.ಶಿವಮೊಗ್ಗದಲ್ಲಿ ಶಾಸಕನಾಗಿ ಕಾರ್ಯನಿರ್ವಹಿಸಲು ಶಕ್ತಿ ತೆಗೆದುಕೊಂಡು ಹೋಗಲು ಹಿರೇಕಲ್ಮಠದ ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಹಿರೇಕಲ್ಮಠವು ಪವಿತ್ರ ಧಾರ್ಮಿಕ ಶಕ್ತಿ ಕೇಂದ್ರವಾಗಿದೆ ಎಂದು ಧನ್ಯತಾಭಾವ ವ್ಯಕ್ತಪಡಿಸಿದರು.
ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಶ್ರೀ ಮಠದಲ್ಲಿ ನ್ಯಾಯಪೀಠ ಸ್ಥಾಪಿಸಿ, ತನ್ಮೂಲಕ ಭಕ್ತರ ವ್ಯಾಜ್ಯಗಳನ್ನು ಬಗೆಹರಿಸುವ ಮೂಲಕ ಈ ಭಾಗದ ನಡೆದಾಡುವ ದೇವರಾಗಿದ್ದರು ಎಂದರು.ಕಲಾವಿದರನ್ನು, ಸಾಹಿತಿಗಳನ್ನು, ಉಪನ್ಯಾಸಕರನ್ನು ಶ್ರೀ ಮಠವು ಗುರುತಿಸಿ ಅವಕಾಶಗಳನ್ನು ಕಲ್ಪಿಸುವ ಮಧ್ಯಕರ್ನಾಟಕದ ಏಕೈಕ ಮಠವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ದೇವರಾದ ತಂದೆ-ತಾಯಿಯನ್ನು ಆರೈಕೆ ಮಾಡಿದರೆ ಪುಣ್ಯ ಲಭಿಸುತ್ತದೆ ಎಂದು ಸಲಹೆ ನೀಡಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಂ.ತಿಪ್ಪೇಶಪ್ಪ ಮಾತನಾಡಿ, ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ವೈದ್ಯರು, ಎಂಜಿನಿಯರ್ ಮತ್ತು ಉನ್ನತ ದರ್ಜೆ ಹುದ್ದೆಗಳ ಕಡೆಗೆ ಆಕರ್ಷಿತರನ್ನಾಗಿಸುತ್ತಾ ಆಡಂಬರದ ಜೀವನಕ್ಕೆ ಮಾರುಹೋಗುವಂತೆ ಮಾಡುತ್ತಿದ್ದಾರೆ. ಇದರಿಂದ ಯುವಪೀಳಿಗೆಯಲ್ಲಿ ನೈತಿಕ ಅಧಃಪತನ ಉಂಟಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಎಸ್.ಜೆ.ವಿ.ಪಿ. ಬಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಮಮತ ಅವರು ಮಹಿಳೆಯರ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು. ಹಿರೇಕಲ್ಮಠದ ಪೀಠಾಧ್ಯಕ್ಷರಾದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಪುರಸಭೆ ಅಧ್ಯಕ್ಷ ಎ.ಕೆ.ಮೈಲಪ್ಪ, ಕಾಂಗ್ರೆಸ್ ಮುಖಂಡ ಎಚ್.ಎ. ಉಮಾಪತಿ, ಎಸ್.ಜೆ.ವಿ.ಪಿ. ಬಿಇಡಿ ಕಾಲೇಜಿನ ಉಪನ್ಯಾಸಕರಾದ ಎಸ್.ಎಂ.ಪ್ರಸನ್ನಕುಮಾರ್, ಡಾ. ರವೀಂದ್ರನಾಥ್, ಲೋಕೇಶ್ ಗೌಡ, ಮುಖಂಡರಾದ ವೀರೇಶ್ ಜವಳಿ, ಕತ್ತಿಗೆ ನಾಗರಾಜ್, ಶಿಕಾರಿಪುರದ ಗುರುಮೂರ್ತಿ ದಂಪತಿ ಮತ್ತಿತರರು ಉಪಸ್ಥಿತರಿದ್ದರು.ಶ್ರೀ ಮಂಜುನಾಥ ದೇವರು ದೇವಿಯ ಪುರಾಣ ವಾಚಿಸಿದರು.ಕಾರ್ಯಕ್ರಮದಲ್ಲಿ ಮಠದ ಸೇವಾಕರ್ತರಿಗೆ ಗುರುರಕ್ಷೆ ನೀಡಲಾಯಿತು. ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಂದ ನಡೆದ ಸಾಂಸ್ಕತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು.
- - --09ಎಚ್.ಎಲ್.ಐ2:ಹೊನ್ನಾಳಿ ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ದಸರಾ ಮತ್ತು ಶರನ್ನವರಾತ್ರಿ ಧಾರ್ಮಿಕ ಸಭೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿದರು.