ಸಣ್ಣ ಕೈಗಾರಿಕೆಗಳಿಗೆ ಕೈಕೊಡುವ ಕರೆಂಟ್‌ ಸಂಕಟ!

KannadaprabhaNewsNetwork |  
Published : May 13, 2025, 01:38 AM IST
ಪೋಟೋ ಇವೆ. | Kannada Prabha

ಸಾರಾಂಶ

ಬಹಳಷ್ಟು ಕಡೆ ವಿದ್ಯುತ್‌ ಪೂರೈಕೆ ಪ್ರಮಾಣ (ವೋಲ್ಟೇಜ್‌) ಹೆಚ್ಚು ಕಡಿಮೆ ಆಗುತ್ತಿರುವುದರಿಂದ ಲಕ್ಷಾಂತರ ರು. ಖರ್ಚು ಮಾಡಿ ಅಳವಡಿಸಿದ ವಿದ್ಯುತ್‌ ಉಪಕರಣಗಳಿಗೆ ಹೊಡೆತ ಬಿದ್ದು ಹಾಳಾಗುತ್ತಿವೆ. ಹೀಗಾಗಿ ಕೈಗಾರಿಕೆಗಳ ವಲಯದಲ್ಲಿ ತೊಡಗಿಸಿಕೊಂಡವರಿಗೆ ಕೆಟ್ಟ ಅನುಭವ ಆಗುತ್ತಿದೆ.

ಶಿವಾನಂದ ಅಂಗಡಿ ಹುಬ್ಬಳ್ಳಿ

ಕೃಷಿ ಕ್ಷೇತ್ರದ ನೀರಾವರಿಯಲ್ಲಿ ಇರುವಂತೆ ಉತ್ತರ ಕರ್ನಾಟಕದಲ್ಲಿನ ಸಹಸ್ರಾರು ಸಣ್ಣ ಕೈಗಾರಿಕೆಗಳಿಗೂ ಗುಣಮಟ್ಟದ ವಿದ್ಯುತ್‌ ಪೂರೈಕೆಯೇ ದೊಡ್ಡ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಕೈಗಾರಿಕೆ ಸ್ಥಾಪನೆಗೆ ಹಿಂದೇಟು ಹಾಕುತ್ತಿದ್ದಾರೆ.

ಇಲ್ಲಿಯ ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿಯಿಂದ ಉತ್ತರ ಕರ್ನಾಟಕದ ವಿಜಯಪುರ, ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ವಿದ್ಯುತ್‌ ಸರಬರಾಜು ಆಗುತ್ತದೆ. ಕೈಗಾರಿಕಾ ವಸಾಹತು ಪ್ರದೇಶಗಳಲ್ಲೂ ಇದೇ ವಿದ್ಯುತ್‌ ಪೂರೈಕೆಯಾಗುತ್ತಿದ್ದು, ಗುಣಮಟ್ಟ ಕುರಿತಂತೆ ಅಪಸ್ವರ ಕೇಳಿ ಬರುತ್ತಿದೆ.

ಇಲ್ಲಿಯ ಗೋಕುಲ ಕೈಗಾರಿಕೆ, ತಾರಿಹಾಳ, ಗ್ರಾಮನಗಟ್ಟಿ ಪ್ರದೇಶದಲ್ಲಿ ಸಾವಿರಾರು ಕೈಗಾರಿಕೆಗಳಿಗೆ ಮೂಲವಾಗಿ ಬೇಕಾದ ವಿದ್ಯುತ್‌ ಸರಿಯಾಗಿ ಪೂರೈಕೆಯಾಗದಿದ್ದರೆ ಉತ್ಪಾದನೆಗೆ ದೊಡ್ಡ ಹೊಡೆತ ಬೀಳುತ್ತದೆ ಎನ್ನುತ್ತಾರೆ ಕೈಗಾರಿಕೋದ್ಯಮಿಗಳು.

ಹೆಸ್ಕಾಂ ಗುಣಮಟ್ಟದ ವಿದ್ಯುತ್‌ ಪೂರೈಕೆ ಮಾಡುತ್ತಿಲ್ಲ. ಸುಮಾರು ವರ್ಷಗಳಿಂದ ಹೆಸ್ಕಾಂ ಜತೆ ಈ ಸಂಬಂಧ ಹೋರಾಟ ಮಾಡುತ್ತ ಬಂದಿದ್ದೇವೆ. ಅವರು ಕ್ರಮ ಕೈಗೊಂಡಿದ್ದಾರೆ. ಅದಕ್ಕೆ ಸ್ಪಂದಿಸಿದ್ದಾರೆ. ಸಾಕಷ್ಟು ಸುಧಾರಣೆಯಾಗಿದೆ. ಆದರೂ ಕೈಗಾರಿಕೆಗಳಿಗೆ ಪೂರೈಕೆಯಾಗುವ ವಿದ್ಯುತ್‌ ಸಮಸ್ಯೆ ಬಗೆಹರಿದಿಲ್ಲ ಎಂಬ ದೂರು ಇದೆ.

ಬಹಳಷ್ಟು ಕಡೆ ವಿದ್ಯುತ್‌ ಪೂರೈಕೆ ಪ್ರಮಾಣ (ವೋಲ್ಟೇಜ್‌) ಹೆಚ್ಚು ಕಡಿಮೆ ಆಗುತ್ತಿರುವುದರಿಂದ ಲಕ್ಷಾಂತರ ರು. ಖರ್ಚು ಮಾಡಿ ಅಳವಡಿಸಿದ ವಿದ್ಯುತ್‌ ಉಪಕರಣಗಳಿಗೆ ಹೊಡೆತ ಬಿದ್ದು ಹಾಳಾಗುತ್ತಿವೆ. ಹೀಗಾಗಿ ಕೈಗಾರಿಕೆಗಳ ವಲಯದಲ್ಲಿ ತೊಡಗಿಸಿಕೊಂಡವರಿಗೆ ಕೆಟ್ಟ ಅನುಭವ ಆಗುತ್ತಿದೆ. ಇದನ್ನು ತಪ್ಪಿಸಲು ವಿದ್ಯುತ್‌ ಕ್ಷಮತೆ ಹೆಚ್ಚಿಸಲು ಹೆಸ್ಕಾಂ ಅಧಿಕಾರಿಗಳು ಹೆಚ್ಚು ಒತ್ತು ಕೊಡಬೇಕು ಎಂಬುದು ಮಹತ್ವದ ಬೇಡಿಕೆಯಾಗಿದೆ.

ಮಳೆಗಾಲದಲ್ಲೇ ಸಮಸ್ಯೆ ಹೆಚ್ಚು: ಇನ್ನೇನು ಬರುವ ಜೂನ್‌ದಿಂದ ಮಳೆಗಾಲ ಆರಂಭವಾಗುತ್ತದೆ. ಮಳೆ-ಗಾಳಿಗೆ ವಿದ್ಯುತ್‌ ಲೈನ್‌ ಮೇಲೆ ಮರಗಳು ಬಿದ್ದು ವಿದ್ಯುತ್‌ ಕಡಿತವಾಗುತ್ತದೆ. ಹೀಗೆ ವಿದ್ಯುತ್‌ ಹೋದರೆ ಮರಳಿ ಪಡೆಯಲು ಎರಡು ದಿನ ಬೇಕಾಗುತ್ತದೆ. ವಿದ್ಯುತ್‌ ಇಲ್ಲದೇ ಎರಡೆರಡು ದಿನ ಕೈಗಾರಿಕೆಗಳ ಬಂದ್‌ ಮಾಡಬೇಕಾ? ಕೈಗಾರಿಕೆಗಳ ಬಂದ್ ಆದರೆ ಕಾರ್ಮಿಕರು ಏನು ಮಾಡಬೇಕು, ಮಳೆ ಬಂದರೆ ಒಂದೆಡೆ ಮಳೆ ನೀರು ಕೈಗಾರಿಕೆ ಶೆಡ್‌ಗೆ ನುಗ್ಗುತ್ತದೆ. ಇನ್ನೊಂದೆಡೆ ವಿದ್ಯುತ್‌ ಕೈಕೊಡುತ್ತದೆ. ಹೀಗಾದರೆ ಕೈಗಾರಿಕೆಗಳ ನಡೆಸುವುದಾದರೂ ಹೇಗೆ? ಎಂದು ಪ್ರಶ್ನಿಸುತ್ತಾರೆ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆ ಸಂಘದ ಪದಾಧಿಕಾರಿಗಳು.

ಗುಣಮಟ್ಟದ ವಿದ್ಯುತ್‌ ಪೂರೈಕೆಗೆ ಕೈಗಾರಿಕೆ ಪ್ರದೇಶದಲ್ಲಿ ಅಂಡರ್‌ಗ್ರೌಂಡ್‌ ಕೇಬಲ್‌ ಹಾಕೇವಿ ಅಂತಾರ, ಮಳೆ ಗಾಳಿಗೆ ವಿದ್ಯುತ್‌ ಕೈಕೊಡಬಾರದು ಎನ್ನುವ ಉದ್ದೇಶದಿಂದ ಕೇಬಲ್ ಹಾಕ್ತಾರ, ಆದರೂ ಮಳೆ-ಗಾಳಿಯಿಂದಾಗಿ ವಿದ್ಯುತ್‌ ತಂತಿ ಮೇಲೆ ಮರ ಬಿದ್ದಾವ್‌ ಅಂತ ವಿದ್ಯುತ್‌ ಕಟ್‌ ಮಾಡ್ತಾರ. ವಿದ್ಯುತ್‌ ಸಮಸ್ಯೆಯಿಂದಾಗಿ ಕೈಗಾರಿಕೆ ಸ್ಥಾಪಿಸಲು ಹಿಂದೇಟು ಹಾಕುತ್ತಿದ್ದಾರೆ.

ಮಳೆಗಾಲದಲ್ಲೂ ಕರೆಂಟ್‌ ಹೋಗದಂಗ್‌ ನೋಡಕೋಬೇಕ್‌, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜನರೇಟರ್‌ ಮೂಲಕ ವಸ್ತುಗಳ ಉತ್ಪಾದಿಸಿ ಲಾಭ ಪಡೆಯಲು ಸಾಧ್ಯವೇ? ಜನರೇಟರ್‌ ತುರ್ತು ಸ್ಥಿತಿಗೆ ಮಾತ್ರ ಅದರಿಂದ ಉತ್ಪಾದನೆ ಮಾಡಿ ಸರಕು ಮಾರುತ್ತಿವೆಂದರೆ ಸಾಧ್ಯವಾಗದು ಕಳವಳ ವ್ಯಕ್ತಪಡಿಸುತ್ತಾರೆ ಉದ್ಯಮಿಗಳು.

ಗೋಕುಲ ಕೈಗಾರಿಕಾ ಪ್ರದೇಶದಲ್ಲಿ ಕೇಬಲ್‌ ಕಂಟೋರ್ಲ್ ಬಾಕ್ಸ್‌ ಹಾಕಿದ್ದು, ಗುಣಮಟ್ಟದ ಕೊರತೆಯಿಂದ ಅವೆಲ್ಲ ಜಂಗ್‌ ಹಿಡಿದಿರುವುದು ಕಂಡು ಬರುತ್ತಿದೆ.

ಉದ್ಯಮಿಗಳ ಜತೆ ಹೆಸ್ಕಾಂ ಸಭೆ: ಕೈಗಾರಿಕೆ ವಸಾಹತುಗಳಲ್ಲಿ ವಿದ್ಯುತ್‌ ಪೂರೈಕೆ ಸಮಸ್ಯೆ ಕುರಿತಂತೆ ತಾರಿಹಾಳ, ಗಾಮನಗಟ್ಟಿ, ಗೋಕುಲ ಕೈಗಾರಿಕೆ ವಸಾಹುತ ಪ್ರದೇಶಗಳ ಕೈಗಾರಿಕೋದ್ಯಮಿಗಳ ಸಭೆಯನ್ನು ಎರಡ್ಮೂರು ದಿನದಲ್ಲಿ ನಡೆಸುವುದಾಗಿ ಹೆಸ್ಕಾಂ ಹುಬ್ಬಳ್ಳಿ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ನಾಗರಾಜ ಕೂಬ್ಬಳ್ಳಿ ಹೇಳಿದ್ದಾರೆ.

ವಿದ್ಯುತ್‌ ಸಮಸ್ಯೆ ಕುರಿತಂತೆ ''''ಕನ್ನಡಪ್ರಭ'''' ಜತೆ ಮಾತನಾಡಿದ ಅವರು, ಗೋಕುಲ ಕೈಗಾರಿಕೆ ಉದ್ಯಮಿಗಳು ಮಾತ್ರ ಐಮೆಕ್ಸ್‌ ಹಿನ್ನೆಲೆಯಲ್ಲಿ ದಿನ ನಿಗದಿಗೆ ಮೇ 19ರ ವರೆಗೆ ಸಮಯವನ್ನು ಕೇಳಿದ್ದಾರೆ. ಸುಮಸುಮ್ಮನೆ ವಿದ್ಯುತ್ ತೆಗೆಯುವುದಿಲ್ಲ. ಏನಾದರೂ ತೊಂದರೆ, ಸಮಸ್ಯೆ ಇದ್ದರೆ ಮಾತ್ರ ವಿದ್ಯುತ್‌ ಹೋಗಿರುತ್ತದೆ ಎಂದರು.

ಈಗ ಎಲ್ಲೆಡೆ ಅಂಡರ್‌ ಗ್ರೌಂಡ್‌ ಕೇಬಲ್‌ ಇದೆ. ತಾರಿಹಾಳ-ಗಾಮನಗಟ್ಟಿ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿ ರಸ್ತೆ ಅಗೆಯುತ್ತಿದ್ದಾರೆ. ಕೇಬಲ್‌ ಡ್ಯಾಮೇಜ್ ಆದಾಗ ಸಮಸ್ಯೆ ಆಗುತ್ತದೆ. ಹಳೆ ಕೈಗಾರಿಕೆ ವಲಯಲ್ಲೇ ಮಾತ್ರ ಕಂಬದಿಂದ ವಿದ್ಯುತ್‌ ಪೂರೈಕೆ ಇದೆ. 15 ವರ್ಷದಿಂದ ಈಚೆಗೆ ಹೊಸ ಕೈಗಾರಿಕೆ ವಲಯದಲ್ಲಿ ಅಂಡರ್‌ ಗ್ರೌಂಡ್‌ ಕೇಬಲ್‌ ಮೂಲಕ ವಿದ್ಯುತ್‌ ಪೂರೈಸುತ್ತೇವೆ. ಮಳೆ-ಗಾಳಿಗೆ ಕಂಬಗಳು ಬಿದ್ದಾಗ ಆದಷ್ಟು ಬೇಗ ಸ್ಪಂದಿಸಿ ವಿದ್ಯುತ್‌ ಪೂರೈಸಿದ್ದೇವೆ ಎನ್ನುತ್ತಾರೆ.

ಮಳೆ-ಗಾಳಿಗೆ ಮರಗಳು ಬಿದ್ದಾವು, ಅದಕ್ಕೆ ವಿದ್ಯುತ್‌ ವ್ಯತ್ಯಯ ಅಂತ ಹೇಳ್ತಾರ, ಕರೆಂಟ್‌ ಇಲ್ಲ ಅಂತ ಎರಡ್ಮೂರು ದಿನ ಕೈಗಾರಿಕೆಗಳನ್ನು ಬಂದ್‌ ಮಾಡಿಕೊಂಡು ಕೂಡಾಕ್‌ ಆಗುವುದಿಲ್ಲ. ಹೆಚ್ಚು ಒತ್ತು ಕೊಟ್ಟು ವಿದ್ಯುತ್‌ ಕ್ಷಮತೆ ಹೆಚ್ಚಿಸಬೇಕು ಎಂದು ಉಕ ಸಣ್ಣ ಕೈಗಾರಿಕೆಗಳ ಸಂಘದ ಸದಸ್ಯ ಸುಧೀಂದ್ರ ಕುಲಕರ್ಣಿ ಹೇಳಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...