ಕನ್ನಡಪ್ರಭ ವಾರ್ತೆ ಮಡಿಕೇರಿ
ಇಂದು ಎಲ್ಲ ಕಡೆ ಪಬ್‌ಗಳಲ್ಲಿ ಡಿಜೆ, ಲೇಸರ್ ಲೈಟ್ ಕಾಣಸಿಗುತ್ತದೆ. ಆದರೆ ಕೊಡಗಿನ ವಾಲಗ ಮೈಸೂರು ದಾಟಿದರೆ ಎಲ್ಲಿ ಇದೆ. ಇಂತಹ ವೈವಿಧ್ಯಮಯ ಸಂಸ್ಕೃತಿ ನಮ್ಮದಾಗಿರುವಾಗ ಬೇರೆ ಅನುಕರಣೆ ಯಾಕೆ ಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಪ್ರಶ್ನಿಸಿದರು.ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಸಂವಿಧಾನ ಎಲ್ಲರಿಗೂ ಸ್ವತಂತ್ರವಾಗಿ ಬದುಕುವ ಹಕ್ಕನ್ನು ನೀಡಿದೆ. ನಮ್ಮ ಇಂದಿನ ಆಚರಣೆಗಳಿಂದ ನಾಳಿನ ಬದುಕಿಗೆ ತೊಂದರೆಯಾಗಬಾರದು. ದಸರಾದಲ್ಲಿ ಡಿಜೆ ಬಳಕೆಗೆ ನಿರ್ಬಂಧ ಹೇರಿರುವುದು ಕೂಡ ಇದೇ ಉದ್ದೇಶದಿಂದಲೇ ಹೊರತು, ನಮ್ಮ ಸಂಸ್ಕೃತಿ, ಸಂಪ್ರದಾಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಪಷ್ಟ ಪಡಿಸಿದ್ದಾರೆ.ದಸರಾದಲ್ಲಿ ನಿಗದಿಗಿಂತ ಹೆಚ್ಚಿನ ಡೆಸಿಬಲ್ ಡಿಜೆ ಬಳಸದಂತೆ ನಿಯಮವೇ ಇದೆ. ಈ ಕಾನೂನನ್ನು ನಾವೂ ಗೌರವಿಸಬೇಕು. ಡಿಜೆಯಿಂದ ಯುವಕರಿಗೆ ಹೆಚ್ಚಿನ ತೊಂದರೆ ಇಲ್ಲ. ಆದರೆ ವಯೋ ವೃದ್ಧರು, ಮಂಟಪದ ರಕ್ಷಣೆಗೆ ಇರುವ ಪೊಲೀಸರು, ಸಣ್ಣ ಮಕ್ಕಳು, ಪ್ರಾಣಿ ಪಕ್ಷಿಗಳಿಗೆ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ. ದೇಶದ ಕಾನೂನಿನಂತೆ ಇಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಆ ಸ್ವಾತಂತ್ರ್ಯಕ್ಕೆ ಯಾರೂ ತೊಂದರೆ ಮಾಡಬಾರದು ಎಂಬ ಉದ್ದೇಶಕ್ಕೆ ಕಾನೂನು ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
* 55-75 ಡೆಸಿಬಲ್ ಒಳಗೆ ಡಿಜೆ ಬಳಸಬೇಕುಡಿಜೆ ಬಳಸುವಾಗ 55-75 ಡೆಸಿಬಲ್ ಒಳಗೆ ಮಾತ್ರ ಇರಬೇಕು. ಇದಕ್ಕಿಂತ ಜಾಸ್ತಿ ಮಾಡಬಾರದು. ಇದಕ್ಕಿಂತ ಹೆಚ್ಚಿನ ಡೆಸಿಬಲ್ ಬಳಸಿದ್ದಲ್ಲಿ ಶಬ್ದ ಮಾಲಿನ್ಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಹೀಗಾಗಿ ಅದು ಹಾನಿಕಾರಕವಾಗಲಿದೆ. ಕಳೆದ ಬಾರಿ ದಸರಾದಲ್ಲಿ ನಿಗದಿತ ಡೆಸಿಬಲ್‌ಗಿಂತ ಹೆಚ್ಚಿನ ಡೆಸಿಬಲ್‌ನಲ್ಲಿ ಡಿಜೆ ಬಳಸಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ಶಬ್ದಮಾಲಿನ್ಯದ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದ್ದು, ಅವರು ಈ ಬಗ್ಗೆ ಕ್ರಮ ವಹಿಸುತ್ತಾರೆಂದು ಎಸ್‌ಪಿ ಹೇಳಿದರು.ಭದ್ರತೆಗೆ ಹೆಚ್ಚಿನ ಕ್ರಮ:
ದಸರಾ ಭದ್ರೆತೆಗೆ ಈ ಬಾರಿ ಹೆಚ್ಚಿನ ಕ್ರಮ ವಹಿಸಲಾಗಿದೆ. ಸಾವಿರಕ್ಕೂ ಅಧಿಕ ಪೊಲೀಸರು, ಜಂಬೋ ಟೀಮ್ ದಸರಾ ಸಂದರ್ಭ ಹೆಚ್ಚಿನ ನಿಗಾ ವಹಿಸಲಿದೆ. ವಿಶೇಷವಾಗಿ ಹದಿನೈದು ಮಂದಿಯ ಆರೇಳು ಜಂಬೋ ತಂಡವನ್ನು ತಯಾರಿ ಮಾಡಲಾಗಿದೆ. ಗುಂಪಿನಲ್ಲಿ ಗಲಾಟೆ, ಮಹಿಳೆಯರಿಗೆ ಕಿರಿಕಿರಿ ಮಾಡುವುದನ್ನು ತಪ್ಪಿಸುವ ಕಾರ್ಯವನ್ನು ಈ ತಂಡ ಮಾಡಲಿದೆ. ಹಲವು ಪೊಲೀಸರು ದ್ವಿಚಕ್ರ ವಾಹನದಲ್ಲಿಯೂ ನಗರದಲ್ಲಿ ವೀಕ್ಷಣೆಯಲ್ಲಿರುತ್ತಾರೆ. ಟ್ರಾಫಿಕ್ ನಿಯಂತ್ರಣ, ಹೆಲ್ಪ್‌ಲೈನ್ ಬಗ್ಗೆಯೂ ಗಮನ ಹರಿಸಲಾಗಿದೆ. ಕಳೆದ ಬಾರಿಯ ಅನುಭವದೊಂದಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ದಸರಾಗೆ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ. ಕಳ್ಳರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಇದಕ್ಕಾಗಿಯೇ ಹೆಚ್ಚು ಲೈಟ್ ಅಳವಡಿಕೆ, ಸಿಸಿ ಕ್ಯಾಮಾರ ಅಳವಡಿಕೆ ಮೇಲೂ ಕ್ರಮ ವಹಿಸಲಾಗಿದೆ. ಪ್ರತಿಯೊಂದು ಮಂಟಪಕ್ಕೂ 1 ಪೊಲೀಸ್ ಆಫೀಸರ್ ಸೇರಿದಂತೆ ೮ ಮಂದಿ ಸಿಬ್ಬಂದಿ ಕಾವಲಿರುತ್ತಾರೆ ಎಂದು ಹೇಳಿದರು.ದಸರಾ ಸಂದರ್ಭ ಯಾವುದೇ ಅಂಗಡಿಯಲ್ಲಿಯೂ ಮುಖವಾಡ ಮಾರಾಟಕ್ಕೆ ಅವಕಾಶ ಇಲ್ಲ. ಮುಖವಾಡ ಮಾರಾಟ ಕಂಡು ಬಂದಲ್ಲಿ ನಗರಸಭೆ ವಶಕ್ಕೆ ಪಡೆಯುತ್ತದೆ ಹಾಗೂ ದಸರಾ ನಂತರ ಹಿಂತಿರುಗಿಸುವ ಕೆಲಸವಾಗುತ್ತದೆ ಎಂದು ಹೇಳಿದರು.-------------ಹೊರರಾಜ್ಯದ ಕಾರ್ಮಿಕರ ಬಗ್ಗೆ ಮಾಲೀಕರೇ ಎಚ್ಚರವಹಿಸಿ
ಕೊಡಗಿನಲ್ಲಿ ಹೊರ ರಾಜ್ಯದ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದೆ. ತೋಟಗಳ ನಿರ್ವಹಣೆಗೆ ಹೊರ ರಾಜ್ಯದ ಕಾರ್ಮಿಕರ ಅಗತ್ಯವೂ ಇದೆ. ದೇಶದಲ್ಲಿ ಯಾರೂ ಎಲ್ಲಿಗೆ ಬೇಕಾದರೂ ತೆರಳಿ ಉದ್ಯೋಗ ಮಾಡುವ ಅವಕಾಶವಿದೆ. ಆದರಿಂದ ಅವರನ್ನು ಬರಬಾರದು ಎನ್ನಲು ಸಾಧ್ಯವಿಲ್ಲ ಅಥವಾ ಅವರ ಮೇಲೆ ಹೆಚ್ಚಿನ ನಿಯಂತ್ರಣ ಮಾಡಲು ಸಾಧ್ಯವಿಲ್ಲ. ಇದರಿಂದ ನೈಜ ಕಾರ್ಮಿಕರಿಗೆ ಇರುಸು ಮುರುಸು ಉಂಟಾಗುತ್ತದೆ. ಹಾಗಾಗಿ ಕಾರ್ಮಿಕರನ್ನು ನೇಮಿಸುವ ಮುನ್ನ ತೋಟದ ಮಾಲೀಕರೇ ಎಚ್ಚರವಹಿಸಬೇಕು. ಅವರಿಂದ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಹಾಗೆಂದು ಬಾಂಗ್ಲಾದೇಶದಿಂದ ಬಂದರೆ ಅವರಿಗೆ ಇಲ್ಲಿರಲು ಅವಕಾಶ ಇಲ್ಲ. ಬಾಂಗ್ಲಾದೇಶಿಯರು ಇದ್ದ ಬಗ್ಗೆ ಸಂಶಯವಿದ್ದಲ್ಲಿ ನಮಗೆ ಮಾಹಿತಿ ಕೊಡಿ. ನಾವೂ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ರಾಮರಾಜನ್ ತಿಳಿಸಿದರು.