ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಸೋಮವಾರ ದತ್ತು ಗ್ರಾಮವಾದ ತಾಲೂಕಿನ ದೊಡ್ಡರಾಯಪ್ಪನಹಳ್ಳಿಯಲ್ಲಿ ರಾಷ್ಟ್ರೀಯ ಕೃಷಿ ದಿನದ ಅಂಗವಾಗಿ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಮೆಳೇಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎನ್.ಶ್ರೀನಿವಾಸಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದಿಂದ ಸಿಗುವಂತಹ ಸವಲತ್ತುಗಳನ್ನು ರೈತರು ಬಳಸಿಕೊಂಡು ಉತ್ತಮ ಕೃಷಿಯನ್ನು ಮಾಡಿ ಹೆಚ್ಚು ಆದಾಯ ಗಳಿಸಬೇಕು. ಉಪಕಸುಬುಗಳಾದ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆಯನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ. ಹನುಮಂತರಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತ ದಿನಾಚರಣೆ ಪ್ರಾಮುಖ್ಯತೆಯನ್ನು ವಿವರಿಸಿದರು. ಭಾರತ ದೇಶದ ಐದನೇ ಪ್ರಧಾನಮಂತ್ರಿ ದಿವಂಗತ ಚೌಧರಿ ಚರಣ್ ಸಿಂಗ್ ರವರು ರೈತಾಪಿ ವರ್ಗದವರಿಗೆ ನೀಡಿದ ಕೊಡುಗೆಯ ಸ್ಮರಣಾರ್ಥ ಅವರ ಜನ್ಮ ದಿನವನ್ನು ರೈತ ದಿನಾಚರಣೆಯೆಂದು ಪ್ರತಿ ವರ್ಷ ಆಚರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.ರೈತರು ಇಂದಿನ ವ್ಯತಿರಿಕ್ತ ಹವಾಮಾನ ಪರಿಸ್ಥಿತಿಗೆ ಅನುಗುಣವಾದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯಬೇಕು. ರೈತರು ಬೆಳೆದ ಬೆಳೆಗಳ ಆದಾಯದ ಪಾಲು ಕೇವಲ ಶೇ. 30ರಿಂದ 37ರಷ್ಟು ಮಾತ್ರ ರೈತರಿಗೆ ದೊರೆಯುತ್ತಿದ್ದು, ಉಳಿದ ಶೇ. 63ರಿಂದ 70ರಷ್ಟು ಇತರೆ ದಲ್ಲಾಳಿಗಳು, ಮಧ್ಯವರ್ತಿಗಳು ಮತ್ತು ನೇರ ಮಾರಾಟಗಾರರ ಪಾಲಾಗುತ್ತಿದೆ. ಈ ಪೋಲನ್ನು ತಪ್ಪಿಸುವ ಸಲುವಾಗಿ ರೈತ ಉತ್ಪಾದಕ ಕಂಪನಿಗಳ ಮೂಲಕ ಮಾರಾಟ ವ್ಯವಸ್ಥೆ ಕಲ್ಪಿಸಿಕೊಂಡು ಮಧ್ಯವರ್ತಿ ಹಾಗೂ ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಬಹುದು ಎಂದರು.
ಕೃಷಿ ವಿಜ್ಞಾನ ಕೇಂದ್ರದ ಪ್ರಾಧ್ಯಾಪಕ ಡಾ. ವೆಂಕಟೇಗೌಡ, ಕೃಷಿ ವಿಶ್ವವಿದ್ಯಾನಿಲಯದಿಂದ ಹೊಸದಾಗಿ ಬಿಡುಗಡೆ ಮಾಡಿದ ನೂತನ ತಳಿಗಳ ಬಗ್ಗೆ ಮಾಹಿತಿ ನೀಡಿ ದತ್ತು ಗ್ರಾಮದ ಪ್ರಾಯೋಜನೆಯಡಿ ಪರಿಚಯಿಸಲಾದ ಹೊಸ ತಳಿ, ಬೆಳೆಗಳು ಮತ್ತು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ಕೃಷಿ ವಿಜ್ಞಾನ ಕೇಂದ್ರವು ಕೈಗೊಳ್ಳುವ ಚಟುವಟಿಕೆಗಳಲ್ಲಿ ಭಾಗವಹಿಸಲು ಕರೆ ನೀಡಿದರು.ಪ್ರಾಧ್ಯಾಪಕ ಡಾ. ವೀರನಾಗಪ್ಪ ಮಾತನಾಡಿದರು.
ನಾಲ್ವರು ಕೃಷಿಕರಿಗೆ ಸನ್ಮಾನ:ರೈತ ದಿನಾಚರಣೆಯ ಅಂಗವಾಗಿ ಜಿಲ್ಲೆಯ ನಾಲ್ವರು ಪ್ರಗತಿ ಪರ ರೈತ , ರೈತ ಮಹಿಳೆಯರನ್ನು ಗೌರವಿಸಲಾಯಿತು. ಮಾರಹಳ್ಳಿಯ ಎಂ.ಸಿ. ರಾಜಣ್ಣ, ಕಾಚಹಳ್ಳಿಯ ಅನಿಲ್, ಶ್ರವಣೂರಿನ ಮಹೇಶ್ ಮತ್ತು ಗಂಟಿಗಾನಹಳ್ಳಿಯ ಶೋಭಾ ಕುಮಾರಿ ಅವರನ್ನು ಸನ್ಮಾನಿಸುವ ಮೂಲಕ ರೈತರ ಸೇವೆಯನ್ನು ಉತ್ತೇಜಿಸಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರಿಗೆ ಸೀಬೆ, ಸಪೋಟ ಮತ್ತು ಜೈವಿಕ ಇಂಧನ ಸಸಿಗಳನ್ನು ವಿತರಿಸಿ ಬೆಳೆಯುವ ತಾಂತ್ರಿಕತೆಗಳನ್ನು ಹಂಚಿಕೊಳ್ಳಲಾಯಿತು.ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ತೋಟಗಾರಿಕಾ ವಿಭಾಗದ ಪ್ರಾಧ್ಯಾಪಕ ಡಾ. ಕೆ.ಎನ್. ಶ್ರೀನಿವಾಸಪ್ಪ, ಕೃಷಿ ವಿಜ್ಞಾನ ಕೇಂದ್ರದ ಡಾ. ಈಶ್ವರಪ್ಪ, ಡಾ. ಗೋಪಾಲ್, ಮೇಘನಾ, ಗ್ರಾಮಸ್ಥರಾದ ಮುನಿಶ್ಯಾಮೇಗೌಡ, ಬಚ್ಚೇಗೌಡ ಮತ್ತು ಪಂಚಾಯಿತಿ ಸದಸ್ಯರು ಹಾಜರಿದ್ದರು.