ಯಲ್ಲಾಪುರ: ಮುಂಡಗೋಡ ತಾಲೂಕಿನ ಸುಳ್ಳಳ್ಳಿಯ ಸಮೀಪ ಕೌಲಗಿ ಹಳ್ಳದ ಏತ ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ತಾಲೂಕಿನ ಉಮ್ಮಚಗಿಯ ಹೆಸ್ಕಾಂ ವಿದ್ಯುತ್ ಗ್ರಿಡ್‌ನಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಕಾಮಗಾರಿಯ ಸಂದರ್ಭದಲ್ಲಿ ಉಮ್ಮಚಗಿಯಿಂದ ಚಿಪಗೇರಿ ಮಾರ್ಗವಾಗಿ ನಿರ್ಮಿಸಲಾದ ೩೩ ಕೆವಿ ವಿದ್ಯುತ್ ಮಾರ್ಗದ ನಿರ್ಮಾಣಕ್ಕೂ ಮುನ್ನ ವಿದ್ಯುತ್ ಮಾರ್ಗದಡಿ ಇದ್ದ ಬೆಲೆಬಾಳುವ ೩೦೦ಕ್ಕೂ ಹೆಚ್ಚು ವಿವಿಧ ಜಾತಿಯ ಮರಗಳನ್ನು ಕಡಿಯಲಾಗಿದ್ದು, ಇದಕ್ಕೆ ಅರಣ್ಯ ಇಲಾಖೆಯ ಪರವಾನಗಿಯೇ ಇರಲಿಲ್ಲವೆಂದು ತಿಳಿದುಬಂದಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಭೂಮಿ ಉಳಿಸಿ ಹೋರಾಟ ಸಮಿತಿ ಟ್ರಸ್ಟಿನ ತಾಲೂಕಾಧ್ಯಕ್ಷ ಧೀರಜ್ ತಿನೇಕರ ಆರೋಪಿಸಿದ್ದಾರೆ.
ಜೂ. ೨೦ರಂದು ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರಿಗೆ ದಾಖಲೆಗಳೊಂದಿಗೆ ಮಾಹಿತಿ ನೀಡಿದ ಅವರು, ಈ ಕಾಮಗಾರಿಯ ಕುರಿತಂತೆ ಸಂಬಂಧಿಸಿದ ಅರಣ್ಯ ಇಲಾಖೆಯ ಹಿರಿಕಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದರೂ ಸಮರ್ಪಕ ಉತ್ತರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಮಾರ್ಗದ ನಿರ್ಮಾಣ ಕಾರ್ಯದ ಪಾರದರ್ಶಕತೆ ಕುರಿತಾಗಿ ಶಂಕೆ ಮೂಡುವಂತಾಗಿದೆ. ಅಲ್ಲದೇ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ ಎಂದಿದ್ದಾರೆ.ಯಲ್ಲಾಪುರ ತಾಲೂಕಿನ ಉಮ್ಮಚಗಿ ಪವರ್ ಗ್ರಿಡ್‌ನಿಂದ ನಿರ್ಮಿಸಲಾಗಿರುವ ಈ ೩೩ ಕೆವಿ ವಿದ್ಯುತ್ ಮಾರ್ಗವು, ಕಾತೂರು ರಸ್ತೆಯಲ್ಲಿ ಸಾಗಿ, ಮುಂಡಗೋಡ ತಾಲೂಕಿನ ಕೌಲಗಿ ಹಳ್ಳದ ಏತ ನೀರಾವರಿ ಕಾಮಗಾರಿಯ ಸ್ಥಳದವರೆಗೂ ನಡೆದಿದೆ. ವಿದ್ಯುತ್ ಮಾರ್ಗ ನಿರ್ಮಾಣವಾದ ಎಲ್ಲ ಪ್ರದೇಶಗಳಲ್ಲಿ ಮಾರ್ಗದ ಕೆಳಗೆ ಮತ್ತು ಆಸುಪಾಸಿನಲ್ಲಿ ನೈಸರ್ಗಿಕವಾಗಿ ಹುಟ್ಟಿಕೊಂಡಿದ್ದ ಲಕ್ಷಾಂತರ ರು. ಬೆಲೆಬಾಳುವ ಬೀಟೆ, ಸಾಗವಾನಿ, ಮತ್ತಿ, ಹುಣಾಲು, ನಂದಿ ಮತ್ತಿತರ ಜಾತಿಯ ಅಸಂಖ್ಯ ಹಸಿಮರಗಳನ್ನು ಈ ಸಂದರ್ಭದಲ್ಲಿ ಕಡಿದುರುಳಿಸಲಾಗಿದೆ. ಅವುಗಳ ಕಟಾವಿಗೆ ಅರಣ್ಯ ಇಲಾಖೆಯ ಪರವಾನಗಿ ಇಲ್ಲವಾಗಿತ್ತೆಂದು ತಿಳಿದುಬಂದಿದೆ. ಅಲ್ಲದೇ ಕಟಾವು ಮಾಡಲಾದ ಬೆಲೆಬಾಳುವ ಮರಗಳನ್ನು ನಂತರ ಎಲ್ಲಿ ಸಾಗಿಸಲಾಯಿತು ಎಂಬುದು ಕೂಡಾ ಸ್ಪಷ್ಟವಾಗದೇ ಸಂದೇಹಕ್ಕೆಡೆಮಾಡಿದೆ ಎಂದರು.