ಜನಪರ ಕೆಲಸಗಳಿಗೆ ಹೆಸರಾಗಿದ್ದ ಡಿ.ದೇವರಾಜ ಅರಸು

KannadaprabhaNewsNetwork | Published : Aug 23, 2024 1:08 AM

ಸಾರಾಂಶ

ದೀನ ದಲಿತರು, ಭೂರಹಿತರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯಂಥ ಜನಪರ ಕೆಲಸಗಳ ಮೂಲಕ ಜನಮನದ ಅರಸರಾಗಿ ನಾಡಿನ ಜನತೆಯಲ್ಲಿ ಚಿರಸ್ಥಾಯಿ ಆಗಿರುವ ಏಕೈಕ ಮುಖ್ಯಮಂತ್ರಿ ಎಂದರೆ ದೇವರಾಜ ಅರಸು ಮಾತ್ರ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೊನ್ನಾಳಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

- ಅರಸು 109ನೇ ಜನ್ಮದಿನ ಸಮಾರಂಭ ಉದ್ಘಾಟಿಸಿ ಶಾಸಕ ಡಿ.ಜಿ.ಶಾಂತನಗೌಡ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ದೀನ ದಲಿತರು, ಭೂರಹಿತರು ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಯಂಥ ಜನಪರ ಕೆಲಸಗಳ ಮೂಲಕ ಜನಮನದ ಅರಸರಾಗಿ ನಾಡಿನ ಜನತೆಯಲ್ಲಿ ಚಿರಸ್ಥಾಯಿ ಆಗಿರುವ ಏಕೈಕ ಮುಖ್ಯಮಂತ್ರಿ ಎಂದರೆ ದೇವರಾಜ ಅರಸು ಮಾತ್ರ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಗುರು ಭವನದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ, ಡಿ.ದೇವರಾಜ ಅರಸು ಅವರ 109ನೇ ಜನ್ಮದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅರಸು ರಾಜ್ಯ ಕಂಡ ಸುದೀರ್ಘ ಅವಧಿಯ ಮುಖ್ಯಮಂತ್ರಿಯಾಗಿದ್ದಾರೆ. ಕನ್ನಡನಾಡು ಎಂದೂ ಮರೆಯಲಾಗದ ಅನೇಕ ಯೋಜನೆಗೆಳನ್ನು ಜಾರಿಗೆ ತಂದಿದ್ದಾರೆ. ವಿಶೇಷವಾಗಿ ಹಿಂದುಳಿದ ಜನಸಮುದಾಯ ಇತರರಂತೆ ಸಮಾನವಾಗಿ ಬದುಕುವ ಅವಕಾಶಗಳನ್ನು ಕಲ್ಪಿಸಿದ್ದಾರೆ. ಆ ಮೂಲಕ ನಾಡಿನ ಜನತೆಯ ಹೃದಯಲ್ಲಿ ಸದಾ ನೆಲೆಸಿದ್ದಾರೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಹತ್ತಾರು ಮುಖ್ಯಮಂತ್ರಿಗಳು ಬಂದು ಹೋಗಿದ್ದರೂ ದೇವರಾಜ ಅರಸು ಜನ್ಮದಿನಚಾರಣೆಯನ್ನು ನಾವುಗಳು ಆಚರಿಸುತ್ತಿದ್ದೇವೆ. ಇದು ಅವರ ಸೇವೆಗಳು ಅಷ್ಟೊಂದು ಮಹತ್ವದ್ದಾಗಿದ್ದವು ಎಂಬುದಕ್ಕೆ ಉದಾಹರಣೆ ಎಂದರು.

ಉಪನ್ಯಾಸಕ ಶಿವಪ್ಪ ಅವರು ದೇವರಾಜ ಅರಸು ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಉಪವಿಭಾಗಾಧಿಕಾರಿ ವಿ.ಅಭಿಷೇಕ್, ತಹಸೀಲ್ದಾರ್ ಪಟ್ಟರಾಜ ಗೌಡ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್, ಬಿಇಒ ಕೆ.ಟಿ.ನಿಂಗಪ್ಪ, ಪೊಲೀಸ್ ಇನ್‌ಸ್ಪೆಕ್ಟರ್‌ ಸುನೀಲ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಟಿ.ಲೀಲಾವತಿ, ಹಿಂದುಳಿದ ಕಲ್ಯಾಣಾಧಿಕಾರಿ ಮೃತ್ಯುಂಜಯ, ಮಾಜಿ ಸೈನಿಕ ವಾಸಪ್ಪ ಭಾಗವಹಿಸಿದ್ದರು.

ಹಾಸ್ಟೆಲ್‌ ಮೇಲ್ವಿಚಾರಕಿ ರೂಪ ಸ್ವಾಗತಿಸಿದರು. ಕುಮಾರ್ ಬಾರ್ಕಿ ನಿರೂಪಿಸಿ, ವಿದ್ಯಾರ್ಥಿ ನಿಲಯದ ವಿದ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಪೂರ್ವದಲ್ಲಿ ವಿದ್ಯಾರ್ಥಿಗಳು, ಅಧಿಕಾರಿಗಳು, ವಾದ್ಯಗೋಷ್ಠಿಯೊಂದಿಗೆ ಮಾಜಿ ಸಿಎಂ ಡಿ.ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆ ನಡೆಸಿದರು.

- - -

ಬಾಕ್ಸ್‌ ಹಿಂದುಳಿದವರ ಶಕ್ತಿಭೂ ಸುಧಾರಣೆ ಕಾಯ್ದೆ, ಉಳುವವನೆ ಹೊಲದೊಡೆಯ, ಜಾತಿ ಪದ್ಧತಿ ನಿರ್ಮೂಲನೆ, ವೃಕ್ಷ, ಅರಣ್ಯ ಕಾಯ್ದೆ ಜಾರಿ ಸೇರಿದಂತೆ ಹಾವನೂರು ಆಯೋಗ ರಚಿಸಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಕಲ್ಪಿಸಿದರು. 70ರ ದಶಕದಲ್ಲಿ ಹಿಂದುಳಿದವರ ಪಾಲಿನ ನಿಜವಾದ ಶಕ್ತಿ ದೇವರಾಜ ಅರಸು ಆಗಿದ್ದರು. 1973ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಹೆಮ್ಮೆ ಅರಸು ಅವರಿಗೆ ಸಲ್ಲುತ್ತದೆ ಎಂದು ಶಾಸಕರು ತಿಳಿಸಿದರು.

- - - -20ಎಚ್.ಎಲ್.ಐ1:

ಮಾಜಿ ಸಿಎಂ ಡಿ.ದೇವರಾಜ ಆರಸು ಜನ್ಮದಿನ ಸಮಾರಂಭವನ್ನು ಶಾಸಕ ಡಿ.ಜಿ.ಶಾಂತನಗೌಡ ಉದ್ಘಾಟಿಸಿದರು.

Share this article