ಸಿಎಸ್‌ಆರ್‌ ಪಬ್ಲಿಕ್‌ ಶಾಲೆ ಆಗದ್ದಕ್ಕೆ ಡಿ.ಕೆ.ಶಿವಕುಮಾರ್‌ ಚಾಟಿ

KannadaprabhaNewsNetwork |  
Published : Jun 01, 2025, 03:03 AM IST
ಡಿ.ಕೆ.ಶಿವಕುಮಾರ್‌ | Kannada Prabha

ಸಾರಾಂಶ

ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಮಾದರಿಯಲ್ಲಿ ಸಿಎಸ್‌ಆರ್‌ ಶಾಲೆಗಳ ನಿರ್ಮಾಣ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾರಣದ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಮಾದರಿಯಲ್ಲಿ ಸಿಎಸ್‌ಆರ್‌ ಶಾಲೆಗಳ ನಿರ್ಮಾಣ ಯೋಜನೆಯು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾರಣದ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಪ್ರಗತಿ ಪರಿಶೀಲನೆ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಡಿ.ಕೆ. ಶಿವಕುಮಾರ್‌, ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಪ್ರತಿ ವರ್ಷ 8 ಸಾವಿರ ಕೋಟಿ ರು. ಸಿಎಸ್ಸಾರ್‌ ನಿಧಿ ಸಂಗ್ರಹವಾಗುತ್ತದೆ. ಅದನ್ನು ಸಿಎಸ್ಸಾರ್‌ ಶಾಲೆಗಳ ನಿರ್ಮಾಣಕ್ಕೆ ಬಳಸಿಕೊಳ್ಳುವಂತೆ ವರ್ಷದ ಹಿಂದೆಯೇ ಸೂಚಿಸಲಾಗಿತ್ತು. ಆದರೆ, ಆ ಬಗ್ಗೆ ಯಾವೊಬ್ಬ ಅಧಿಕಾರಿಯೂ ಕ್ರಮ ಕೈಗೊಂಡಿಲ್ಲ. ರಾಜ್ಯದ ಕಾರ್ಪೋರೇಟ್‌ ಸಂಸ್ಥೆಗಳು ಸಿಎಸ್ಸಾರ್‌ ನಿಧಿಯನ್ನು ಅನ್ಯ ರಾಜ್ಯಗಳ ಖಾಸಗಿ ಸೇವಾ ಸಂಸ್ಥೆಗಳಿಗೆ (ಎನ್‌ಜಿಒ) ಚೆಕ್‌ ಮೂಲಕ ನೀಡಿ, ಅದರಲ್ಲಿ ಶೇ. 50ರಷ್ಟು ಹಣವನ್ನು ನಗದು ಸ್ವರೂಪದಲ್ಲಿ ವಾಪಾಸು ಪಡೆಯುತ್ತಿವೆ. ಇದು ಅಕ್ರಮವಾಗಿದ್ದು, ಇದರಿಂದ ರಾಜ್ಯದ ನಿಧಿ ದುರುಪಯೋಗವಾಗುತ್ತಿದೆ. ಅದನ್ನು ತಡೆದು ಆ ಹಣವನ್ನು ರಾಜ್ಯದ ಶಾಲೆಗಳ ಅಭಿವೃದ್ಧಿಗೆ ಬಳಸಬೇಕು ಎಂದು ಸೂಚಿಸಿದರು.

ಕಾರ್ಪೋರೇಟ್‌ ಸಂಸ್ಥೆಗಳು ಸಿಎಸ್ಸಾರ್‌ ನಿಧಿಯನ್ನು ರಾಜ್ಯ ಸರ್ಕಾರಕ್ಕೆ ನಗದು ರೂಪದಲ್ಲಿ ನೀಡುವುದು ಬೇಡ. ಅದರ ಬದಲು ಮೂರು ಗ್ರಾಮ ಪಂಚಾಯಿತಿಗೊಂದರಂತೆ ಪಬ್ಲಿಕ್‌ ಶಾಲೆಯನ್ನು ನಿಮೀಸಲಿ. ಅದಕ್ಕೆ ಅಗತ್ಯವಿರುವ ಜಾಗವನ್ನು ಸರ್ಕಾರದಿಂದ ನೀಡಲಾಗುವುದು ಅಥವಾ ಅವರೇ ಜಾಗ ಗುರುತಿಸಲಿ. ಶಾಲೆಯ ವಿನ್ಯಾಸವನ್ನು ಸರ್ಕಾರದಿಂದ ಕೊಡಲಾಗುವುದು. ಅವರು ಕಟ್ಟಡ ಕಟ್ಟಿ, ಮೂಲಸೌಕರ್ಯ ಒದಗಿಸಲಿ. ಆ ಶಾಲಾ ಕಟ್ಟಡದ ಮೇಲೆ ರಾಜ್ಯ ಸರ್ಕಾರದ ಜತೆಗೆ ಕಾರ್ಪೋರೇಟ್‌ ಸಂಸ್ಥೆಯ ನಾಮಫಲಕ ಹಾಕಿಕೊಳ್ಳಲಿ. ಆ ಶಾಲೆಗಳಿಗೆ ತಲಾ ಒಬ್ಬರು ನುರಿತ ಶಿಕ್ಷಕರನ್ನು ಪೂರೈಸುವ ಜವಾಬ್ದಾರಿ ನಾವು ವಹಿಸೋಣ ಎಂದು ತಿಳಿಸಿದರು.

ನಾನು ಪ್ರತಿನಿಧಿಸುವ ಕನಕಪುರ ಕ್ಷೇತ್ರದಲ್ಲಿ ತಲಾ 9ರಿಂದ 12 ಕೋಟಿ ರು. ವ್ಯಯಿಸಿ 13 ಸಿಎಸ್ಸಾರ್‌ ಪಬ್ಲಿಕ್‌ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಕೆಲ ಕಡೆ ಮಾತ್ರ ಈ ರೀತಿಯ ಕೆಲಸಗಳಾಗುತ್ತಿದ್ದು, ಉಳಿದೆಡೆ ಅಧಿಕಾರಿಗಳು ಆಸಕ್ತಿಯನ್ನೇ ವಹಿಸಿಲ್ಲ. ಇದನ್ನು ಸಹಿಸಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಪೋರೆಟ್‌ ಸಂಸ್ಥೆಗಳಿಗೆ ಪತ್ರ ಬರೆಯಿರಿ:

ನಿಮ್ಮ ವ್ಯಾಪ್ತಿಯಲ್ಲಿನ ಕಾರ್ಪೋರೇಟ್‌ ಸಂಸ್ಥೆಗಳಿಗೆ ಕೂಡಲೇ ಪತ್ರ ಬರೆದು, ಸಭೆ ನಡೆಸಬೇಕು. ಸಭೆಯಲ್ಲಿ ಪಬ್ಲಿಕ್‌ ಶಾಲೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸೂಚನೆ ನೀಡಿ. ಈವರೆಗೂ ಕಾರ್ಪೋರೇಟ್‌ ಸಂಸ್ಥೆಗಳು ಏನು ಮಾಡಿವೆ ಎಂಬುದರ ಮಾಹಿತಿ ಪಡೆಯಿರಿ. ಶಿಕ್ಷಣ ಇಲಾಖೆ ಶಾಲೆಯ ವಿನ್ಯಾಸ ನೀಡುತ್ತದೆ. ಅದನ್ನಾಧರಿಸಿ ಕಟ್ಟಡ ನಿರ್ಮಿಸಲು ಸೂಚಿಸಿ. ಪ್ರತಿ ತಾಲೂಕಿಗೂ ಒಂದು ಮಾದರಿ ಶಾಲೆ ನಿರ್ಮಿಸಿ, ಅದರ ವಿನ್ಯಾದ ಮೇರೆಗೆ ಮೂರು ಪಂಚಾಯಿತಿಗೆ ಒಂದು ಶಾಲೆ ನಿರ್ಮಾಣದ ಗುರಿ ನಿಗದಿ ಮಾಡಿ ಎಂದು ಡಿ.ಕೆ. ಶಿವಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು. ಜತೆಗೆ ತಾವು ಕಾಲಕಾಲಕ್ಕೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಡಿಸಿ ಮತ್ತು ಜಿಪಂ ಸಿಇಒಗಳ ಸಭೆ ನಡೆಸುವುದಾಗಿಯೂ ಹೇಳಿದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ